Advertisement
ಬಿಬಿಎಂಪಿ ವತಿಯಿಂದ ಮಾಗಡಿ ಮುಖ್ಯರಸ್ತೆ – ಸಿದ್ದಯ್ಯ ಪುರಾಣಿಕ್ ರಸ್ತೆ ಕೂಡು ಸ್ಥಳದಲ್ಲಿ ನಿರ್ಮಿಸಿರುವ ಅಂಡರ್‌ಪಾಸ್ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವದ ಅತ್ಯಂತ ಕ್ರಿಯಾಶೀಲ ನಗರ ಎಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಗಿದೆ. ಅದನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ತ್ಯಾಜ್ಯ ವಿಲೇವಾರಿ, ಸಂಚಾರ ದಟ್ಟಣೆಯಂತಹ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ ಎಂದರು.
Related Articles
Advertisement
ಕ್ಯಾಂಟೀನ್‌ಗೆ ಕೆಲವರ ಅಡ್ಡಗಾಲು: ನಗರದ ಬಡಜನರಿಗೆ ರಿಯಾಯಿತಿ ದರದಲ್ಲಿ ಆಹಾರ ನೀಡುವ ಸಲುವಾಗಿ ಇಂದಿರಾ ಕ್ಯಾಂಟೀನ್ ಆರಂಭಿಸಲಾಗುತ್ತಿದೆ. ಮೊದಲ ಹಂತದಲ್ಲಿ 125 ಕ್ಯಾಂಟೀನ್‌ಗಳು ಆಗಸ್ಟ್ 15ರಂದು ಉದ್ಘಾಟನೆಯಾಗಲಿವೆ. ಉಳಿದ ಕ್ಯಾಂಟೀನ್‌ಗಳು ಗಾಂಧಿಜಯಂತಿಯಂದು ಉದ್ಘಾಟನೆಯಾಗಲಿವೆ.
ಸರ್ಕಾರದಿಂದ ಜಾರಿಗೊಳಿಸಲು ಮುಂದಾಗಿರುವ ಯೋಜನೆಗೆ ಕೆಲವರು ಅಡ್ಡಗಾಲು ಹಾಕಲು ಪ್ರಯತ್ನಿಸುತ್ತಿದ್ದಾರೆ. ಒಳ್ಳೆಯ ಕೆಲಸಗಳಿಗೆ ಸದಾ ಅಡ್ಡಿಪಡಿಸುವವರು ಇದ್ದೇ ಇರುತ್ತಾರೆ. ಅಂತಹವರ ಪ್ರಯತ್ನಗಳು ಯಾವುದೇ ಕಾರಣಕ್ಕೂ ಸಫಲವಾಗಲು ಬಿಡುವುದಿಲ್ಲ ಎಂದು ಮಾರ್ಮಿಕವಾಗಿ ತಿಳಿಸಿದರು.
ನೀವೇ ಯಾರಾದರೂ ಅವನ ಮೇಲೆ ಕೇಸ್ ಹಾಕಿ: “ಇಂದಿರಾ ಕ್ಯಾಂಟೀನ್ ಯೋಜನೆಯಲ್ಲಿ ಅವನ್ಯಾರೋ ಆರೋಪ ಮಾಡಿದ್ದಾನೆ… ಯೋಜನೆಗೆ ಇರಿಸಿರುವ 100 ಕೋಟಿಯಲ್ಲಿ 65 ಕೋಟಿ ಅವ್ಯವಹಾರವೇ ನಡೆಸಿದರೆ ಯೋಜನೆ ಜಾರಿಯಾಗುತ್ತದೆಯೇ. ಅವನಿಗೇನು ಲೆಕ್ಕ ಬರುವುದಿಲ್ಲವೇ? ಅಕ್ರಮ, ಭ್ರಷ್ಟಾಚಾರ ನಡೆದರೆ ಆರೋಪ ಮಾಡಬೇಕು.
ಆದರೆ, ಆರೋಪ ಮಾಡುವುದೇ ಒಂದು ಕಸುಬಾಗಬಾರದು. ಸುಳ್ಳು ಆರೋಪ ಮಾಡುವುದಕ್ಕೆ ಒಂದು ಇತಿಮಿತಿ ಬೇಡವೇ? ಈ ಪ್ರಕರಣದಲ್ಲಿ ನಾನು ಮಾನನಷ್ಟ ಮೊಕದ್ದಮೆ ಹೂಡಬಹುದು. ಆದರೆ, ನ್ಯಾಯಾಲಯಕ್ಕೆ ಹೋಗಿ ಬರಲು ಸಮಯವಿಲ್ಲ. ಹೀಗಾಗಿ ನೀವ್ಯಾರಾದರೂ ದೂರು ದಾಖಲಿಸಿ ಎಂದು ಸಿದ್ದರಾಮ್ಯಯ್ಯ ಸಭಿಕರಿಗೆ ತಿಳಿಸಿದರು.
ಕಾರ್ಯಕರ್ತರ ನಡುವೆ ವಾಗ್ವಾದ: ಉದ್ಘಾಟನೆಯ ನಂತರ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮಕ್ಕೆ ಪಾಲಿಕೆ ಸದಸ್ಯ ಉಮೇಶ್ ಶೆಟ್ಟಿ ಆಗಮಿಸಿದ ವೇಳೆ ಕಾಂಗ್ರೆಸ್ ಸದಸ್ಯರು ಅವರನ್ನು ಹೊರಗೆ ಕಳುಹಿಸಿ ಎಂದು ಕೂಗಿದ್ದಾರೆ ಎನ್ನಲಾಗಿದ್ದು, ಇದು ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ವಾಕ್ಸಮರಕ್ಕೆ ಕಾರಣವಾಗಿತ್ತು. ಜತೆಗೆ ಪ್ರಿಯಾಕೃಷ್ಣ ಹಾಗೂ ಉಮೇಶ್ ಶೆಟ್ಟಿ ಅವರ ಬೆಂಬಲಿಗರು ಜೈಕಾರ ಹಾಕುವುದನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿ ಘೋಷಣೆಗಳನ್ನು ಕೂಗಿದ್ದು ಕಂಡು ಬಂತು.
ಅಂಡರ್‌ಪಾಸ್‌ಗೆ ಕೆಂಪೇಗೌಡ ಹೆಸರು: ಮಾಗಡಿ ರಸ್ತೆ ಕೆಳಸೇತುವೆಗೆ ನಾಡಪ್ರಭು ಕೆಂಪೇಗೌಡ ಹೆಸರಿಡಬೇಕು ಎಂಬ ಮನವಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ಕೆಳಸೇತುವೆಗೆ ಕೆಂಪೇಗೌಡರ ಹೆಸರಿಡಲು ಸರ್ಕಾರದ ಅಭ್ಯಂತರವಿಲ್ಲ. ಆದರೆ, ಈ ಕುರಿತು ತೀರ್ಮಾನವನ್ನು ಬಿಬಿಎಂಪಿ ತೆಗೆದುಕೊಳ್ಳಬೇಕು. ಮೊದಲು ಕೌನ್ಸಿಲ್‌ನಲ್ಲಿ ಒಪ್ಪಿಗೆ ಪಡೆದು ನಂತರ ಸಾರ್ವಜನಿಕರಿಂದ ಆಕ್ಷೇಪಣೆ ಪಡೆದು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ನಾಡಗೀತೆ ಹಾಡಿದರೆ ರಾಷ್ಟ್ರಗೀತೆಗೆ ಅಗೌರ ಆಗದೇ?: ಸರ್ಕಾರದಿಂದ ಏನೇ ಕೆಲಸ ಮಾಡಿದರೂ ಅದನ್ನು ಚುನಾವಣಾ ಗಿಮಿಕ್ ಅಂತಾರೆ. ಕಾಮಾಲೆ ಕಣ್ಣಿಗೆ ಕಾಣುವುದೆಲ್ಲ ಹಳದಿ ಎಂಬಂತೆ ಆರೋಪ ಮಾಡುವವರಿಗೆ ಸರ್ಕಾರ ಮಾಡುವ ಒಳ್ಳೆ ಕೆಲಸಗಳೆಲ್ಲ ತಪ್ಪಾಗಿ ಕಾಣುತ್ತವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೂರಿದರು.
ಕೊಳಗೇರಿ ಜನರಿಗೆ ಉಚಿತವಾಗಿ ನೀರು ಕೊಟ್ಟರೆ, ರೈತರ ಸಾಲ ಮನ್ನಾ ಮಾಡಿದರೆ, ಬಸವಣ್ಣನವರ ಭಾವಚಿತ್ರವನ್ನು ಸರ್ಕಾರಿ ಕಚೇರಿಗಳಲ್ಲಿಟ್ಟರೆ, ಕೆಂಪೇಗೌಡ ಜಯಂತಿ ಹಾಗೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅವರ ಹೆಸರಿಟ್ಟರೆ ಇದು ಚುನಾವಣಾ ಗಿಮಿಕ್ ಎನ್ನುತ್ತಾರೆ. ಕನ್ನಡ ಬಾವುಟ ಮಾಡುವ ಕುರಿತು ಸಮಿತಿ ರಚಿಸಿದರೆ, ರಾಷ್ಟ್ರಧ್ವಜಕ್ಕೆ ಅಗೌರವ ಅಂತಾರೆ, ಅದೇ ನಾಡಗೀತೆ ಹಾಡುವುದರಿಂದ ರಾಷ್ಟ್ರಗೀತೆಗೆ ಅಗೌರವ ಆಗುವುದಿಲ್ಲವೆ ಎಂದು ಪ್ರಶ್ನಿಸಿದರು.
ಆರೋಪ ಮಾಡುವವರು ಹೋಗಲಿ ಸಂವಿಧಾನವನ್ನಾದರೂ ಓದಿಕೊಂಡಿದ್ದಾರಾ ಎಂದರೆ ಅದೂ ಇಲ್ಲ. ಅಮೆರಿಕಾ, ಆಸ್ಟ್ರೇಲಿಯಾದಲ್ಲಿ ರಾಜ್ಯಗಳಿಗೆ ಪ್ರತ್ಯೇಕ ಬಾವುಟವಿದೆ. ಇದರಿಂದ ಅಲ್ಲಿನ ಏಕತೆಗೆ ಯಾವುದೇ ಧಕ್ಕೆಯಾಗಿಲ್ಲ ಎಂದು ಸಮರ್ಥನೆ ನೀಡಿದರು.
ಯೋಜನೆ ವಿವರ-ಸೇತುವೆ ಪಥಗಳ ಸಂಖ್ಯೆ-4
-ವೆಚ್ಚ-24.76
-ಉದ್ದ-315 ಮೀಟರ್
-ಎತ್ತರ-5.50 ಮೀಟರ್
-ರಸ್ತೆಯ ಅಗಲ-7.50 ಮೀಟರ್
-ಪಾದಚಾರಿ ಮಾರ್ಗದ ಅಗಲ-2.50 ಪ್ರತಿ ಠಾಣೆಗೆ ಪಿಂಕ್ ಹೊಯ್ಸಳ
ಬೆಂಗಳೂರು: ನಗರದಲ್ಲಿ ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಗಾಗಿ ವಾರದೊಳಗೆ ನಗರದ ಪ್ರತಿಯೊಂದು ಠಾಣೆಗೆ ಪಿಂಕ್ ಹೊಯ್ಸಳ ನಿಯೋಜನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಪಾಲಿಕೆಯ ವತಿಯಿಂದ ಶನಿವಾರ ಆಯೋಜಿಸಿದ್ದ ಮಾಗಡಿ ರಸ್ತೆ ಅಂಡರ್‌ಪಾಸ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನಗರದಲ್ಲಿ ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಗಾಗಿ ಪಿಂಕ್ ಹೊಯ್ಸಳಗಳನ್ನು ಹೆಚ್ಚಿಸಲು ತೀರ್ಮಾನಸಲಾಗಿದೆ. ಅದರಂತೆ ತೊಂದರೆಯಲ್ಲಿರುವವರಿಗೆ 15 ನಿಮಿಷದಲ್ಲಿ ಸಹಾಯಕ್ಕೆ ಧಾವಿಸುವ ಉದ್ದೇಶದಿಂದ ಪ್ರತಿಯೊಂದು ಠಾಣೆಗೂ ಪಿಂಕ್ ಹೊಯ್ಸಳ ನಿಯೋಜಿಸಲು ಮುಂದಾಗಿದ್ದೇವೆ ಎಂದರು. ಇದರೊಂದಿಗೆ 100 ಸೇವೆಯನ್ನು “ನಮ್ಮ 100′ ಸೇವೆಯಾಗಿ ಪರಿವರ್ತಿಸಲಗಿದ್ದು, ಕರೆ ಮಾಡಿದ ಕೂಡಲೇ ಪೊಲೀಸರು ಸ್ಥಳಕ್ಕೆ ಹೊರಡಲಿದ್ದಾರೆ ಎಂದು ಮಾಹಿತಿ ನೀಡಿದರು.