Advertisement

ಡ್ರಗ್ಸ್‌ ನಿಗ್ರಹಕ್ಕೆ ಪಡೆ; ಅಧಿಕಾರಿಗಳ ಜತೆ DCM ಪರಮೇಶ್ವರ ಚರ್ಚೆ

06:00 AM Jul 17, 2018 | |

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಮಾದಕ ವಸ್ತುಗಳ ದಂಧೆಗೆ ಕಡಿವಾಣ ಹಾಕಲು ಕಠಿಣ ಕ್ರಮಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು, ಮಾದಕ ವಸ್ತು ನಿಗ್ರಹ ಪಡೆ ರಚನೆ ಸೇರಿದಂತೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಕ್ರಿಯಾ ಯೋಜನೆ ರೂಪಿಸುವಂತೆ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಗೃಹ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಸೂಚಿಸಿದ್ದಾರೆ.

Advertisement

ಅಲ್ಲದೆ, ಡ್ರಗ್ಸ್‌ ದಂಧೆ ನಿಯಂತ್ರಿಸಲು ಗೃಹ ಇಲಾಖೆ ಮಾತ್ರವಲ್ಲದೆ ಅಬಕಾರಿ, ಶಿಕ್ಷಣ ಸೇರಿದಂತೆ ಇನ್ನೂ ಹಲವು ಇಲಾಖೆಗಳ ಸಹಕಾರ ಬೇಕಾಗಿದೆ. ಆ ನಿಟ್ಟಿನಲ್ಲಿ ಇತರೆ ಇಲಾಖೆಗಳೊಂದಿಗೆ ಸೇರಿ ರ್ಯಾಗಿಂಗ್‌ ತಡೆ ಸಮಿತಿ ಮಾದರಿಯಲ್ಲಿ ಮಾದಕ ದ್ರವ್ಯ ತಡೆ ಸಮಿತಿ ರಚಿಸುವ ಬಗ್ಗೆಯೂ ಪರಿಶೀಲಿಸುವಂತೆ ನಿರ್ದೇಶನ ನೀಡಿದ್ದಾರೆ.

ರಾಜ್ಯದಲ್ಲಿ ಮಾದಕ ದ್ರವ್ಯ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಂಬಂಧಿಸಿದ ಇಲಾಖಾಧಿಕಾರಿಗಳೊಂದಿಗೆ ವಿಧಾನಸೌಧದಲ್ಲಿ ಸಭೆ ನಡೆಸಿದ ಉಪಮುಖ್ಯಮಂತ್ರಿಗಳು, ರಾಜ್ಯದಲ್ಲಿ ಮಾದಕ ದ್ರವ್ಯಗಳ ದಂಧೆಗೆ ಸಂಪೂರ್ಣ ಕಡಿವಾಣ ಹಾಕಬೇಕು. ಅದಕ್ಕೆ ಯಾವ್ಯಾವ ರೀತಿ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಬಗ್ಗೆ ಸಮಗ್ರ ಕ್ರಿಯಾ ಯೋಜನೆ ರೂಪಿಸಿ. ನಂತರದಲ್ಲಿ ಇತರೆ ಇಲಾಖೆಗಳೊಂದಿಗೆ ಸಮಾಲೋಚನೆ ನಡೆಸಿ ಅದನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮೊದಲು ಹೊರರಾಜ್ಯಗಳಿಂದ ಗಾಂಜಾ ರಾಜ್ಯಕ್ಕೆ ಬರುತ್ತಿತ್ತು. ಆದರೆ, ಈಗ ರಾಜ್ಯದ ಹಲವೆಡೆ ಇದನ್ನು ಬೆಳೆಯುತ್ತಾರೆ. ಜತೆಗೆ ವಿದೇಶ ಸೇರಿದಂತೆ ಹೊರ ರಾಜ್ಯಗಳಿಂದ ನಾನಾ ರೀತಿಯ ಮಾದಕ ದ್ರವ್ಯಗಳು ರಾಜ್ಯಕ್ಕೆ ಬರುತ್ತಿವೆ. ಇತ್ತೀಚಿನ ದಿನಗಳಲ್ಲಿ ಈ ದಂಧೆ ನಡೆಸುವವರು ಮತ್ತು ಮಾದಕ ದ್ರವ್ಯ ತೆಗೆದುಕೊಳ್ಳುವವರಿಗೆ ಪೊಲೀಸರು ತಮ್ಮನ್ನು ಬಂಧಿಸುತ್ತಾರೆ ಎಂಬ ಭಯವೇ ಇಲ್ಲದಂತಾಗಿದೆ. ಇದರ ಪರಿಣಾಮ ಚಿಂದಿ ಆಯುವವರೂ ಅವುಗಳನ್ನು ಮಾರಾಟ ಮಾಡುವ ಮಟ್ಟಕ್ಕೆ ಇಳಿದಿದೆ. ಹಿಂದೆ ಪ್ರತಿಷ್ಠಿತ ವ್ಯಕ್ತಿ ಮತ್ತು ಪ್ರದೇಶಗಳಿಗೆ ಮೀಸಲಾಗಿದ್ದ ಈ ದಂಧೆ ಕೊಳಗೇರಿ ಸೇರಿದಂತೆ ಎಲ್ಲಾ ಕಡೆ ಹಬ್ಬಿದೆ. ಇದು ಸಮಾಜಕ್ಕೆ ದೊಡ್ಡ ಪಿಡುಗಾಗಿದ್ದು, ಡ್ರಗ್ಸ್‌ ದಂಧೆಕೋರರ ವಿರುದ್ಧ ಕ್ರಮ ಕೈಗೊಳ್ಳುವುದರ ಜತೆಗೆ ಅದರಿಂದ ಆಗುವ ಅನಾಹುತಗಳ ಕುರಿತು ಜನಸಾಮಾನ್ಯರಲ್ಲೂ ಅರಿವು ಮೂಡಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.

ಯಾವ ರೀತಿ ಕ್ರಿಯಾಯೋಜನೆ?:
ರಾಜ್ಯದಲ್ಲಿ ಗಾಂಜಾ ಬೆಳೆಯದಂತೆ ಹಾಗೂ ಹೊರ ರಾಜ್ಯಗಳಿಂದ ಗಾಂಜಾ ಸೇರಿದಂತೆ ಮಾದಕ ದ್ರವ್ಯಗಳು ರಾಜ್ಯಕ್ಕೆ ಬಾರದಂತೆ ಕ್ರಮ ಕೈಗೊಳ್ಳಲು ಏನೆಲ್ಲಾ ಮಾಡಬೇಕು? ಶಾಲಾ-ಕಾಲೇಜುಗಳ ಬಳಿ ಅವುಗಳ ಮಾರಾಟಕ್ಕೆ ಕಡಿವಾಣ ಹಾಕುವುದರ ಜತೆಗೆ ವಿದ್ಯಾರ್ಥಿಗಳು ಅದಕ್ಕೆ ಬಲಿಯಾಗದಂತೆ ಏನೆಲ್ಲಾ ಕ್ರಮ ಕೈಗೊಳ್ಳಬೇಕು? ಸಮಾಜದಲ್ಲಿ ಯಾವ ರೀತಿ ಜಾಗೃತಿ ಮೂಡಿಸಬೇಕು ಎಂಬೆಲ್ಲಾ ಅಂಶಗಳನ್ನೊಳಗೊಂಡ ಕ್ರಿಯಾ ಯೋಜನೆ ಸಿದ್ಧಪಡಿಸಬೇಕು. ಇದಕ್ಕೆ ಎನ್‌ಜಿಓಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮತ್ತು ಪುನರ್ವಸತಿ ಕೇಂದ್ರಗಳಲ್ಲಿರುವವರ ಸಹಕಾರ ಪಡೆದುಕೊಳ್ಳಬೇಕು ಎಂದು ಸೂಚಿಸಿದರು.

Advertisement

ಸಿಐಡಿ ಮಾದಕ ವಸ್ತು ನಿಗ್ರಹ ಘಟಕ ಬಲಪಡಿಸಿ
ಮಾದಕ ವಸ್ತುಗಳ ನಿಯಂತ್ರಣಕ್ಕೆ ಸಿಐಡಿಯಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಮಾದಕ ವಸ್ತು ನಿಗ್ರಹ ಘಟಕ ಬಲಪಡಿಸಬೇಕು. ಇದಕ್ಕೆ ಹೆಚ್ಚಿನ ಸಿಬ್ಬಂದಿ ನೇಮಕದ ಜತೆಗೆ ಉತ್ತಮ ತರಬೇತಿಗೂ ವ್ಯವಸ್ಥೆ ಮಾಡಬೇಕು. ಅಲ್ಲದೆ, ಎಲ್ಲಾ ಪೊಲೀಸ್‌ ಠಾಣೆಗಳಲ್ಲಿ ಇರುವ ಸಿಬ್ಬಂದಿಯನ್ನು ಇನ್ನಷ್ಟು ಕ್ರಿಯಾಶೀಲಗೊಳಿಸಿ ಡ್ರಗ್ಸ್‌ ದಂಧೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇದರ ಜತೆಗೆ ಅತಿ ಹೆಚ್ಚು ಡ್ರಗ್ಸ್‌ ದಂಧೆ ನಡೆಯುತ್ತಿರುವ ಬೆಂಗಳೂರು ನಗರಕ್ಕೆ ಬರುವ ಮಾದಕ ದ್ರವ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಈಗಾಗಲೇ ಕೆಲವು ಪ್ರದೇಶಗಳನ್ನು ಗುರುತಿಸಲಾಗಿದ್ದು, ಅಂತಹ ಕಡೆ ಹೆಚ್ಚಿನ ಗಮನಹರಿಸಬೇಕು. ಯಾವ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ದಂಧೆ ಹೆಚ್ಚಾಗಿ ನಡೆಯುತ್ತದೆಯೋ ಅಲ್ಲಿನ ಪೊಲೀಸರನ್ನೇ ಅದಕ್ಕೆ ಜವಾಬ್ದಾರಿ ಮಾಡಬೇಕು ಮತ್ತು ಅಂತಹ ಕಡೆಗಳಲ್ಲಿ ಖಡಕ್‌ ಪೊಲೀಸ್‌ ಅಧಿಕಾರಿಗಳನ್ನು ನೇಮಿಸಬೇಕು ಎಂದೂ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next