ಗುಳೇದಗುಡ್ಡ: ಫಲಾನುಭವಿಗಳಿಗೆ ನಿವೇಶನ ಹಂಚಿಕೆಗೆ ಆಗ್ರಹಿಸಿ ಪಟ್ಟಣದಲ್ಲಿ ನಡೆಯುತ್ತಿದ್ದ ಧರಣಿ ಸತ್ಯಾಗ್ರಹ ಸೋಮವಾರ ಅಂತ್ಯಗೊಂಡಿತು.ಧರಣಿ ನಿರತರು ಪುರಸಭೆಗೆ ಬೀಗ ಹಾಕಲು ಮುಂದಾದಾಗ ಪೊಲೀಸರು ತಡೆದರು. ಬಳಿಕ ಪುರಸಭೆ ಗೇಟ್ ಎದುರು ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು. ಇದರಿಂದ ಸ್ವಲ್ಪ ಹೊತ್ತು ರಸ್ತೆಯಲ್ಲಿ ಸಂಚಾರಕ್ಕೆ ಅಡೆತಡೆಯಾಯಿತು.
ಫಲಾನುಭವಿಗಳಿಗೆ ಹೊಸದಾಗಿ ಆಶ್ರಯ ಮನೆ ನಿರ್ಮಾಣ ಹಾಗೂ ನಿವೇಶನ ಹಂಚಿಕೆ ಮಾಡಬೇಕೆಂದು ಧರಣಿ ನಿರತರು ಆಗ್ರಹಿಸಿದರು.
ಧರಣಿ ನಿರತರ ಪಟ್ಟು: ಸ್ಥಳಕ್ಕೆ ಉಪ ವಿಭಾಗಾಧಿಕಾರಿಗಳು ಬಂದು ಲಿಖೀತ ಭರವಸೆ ನೀಡುವರೆಗೆ ಧರಣಿ ಕೈ ಬಿಡುವುದಿಲ್ಲ ಎಂದು ಧರಣಿ ಸತ್ಯಾಗ್ರಹದ ನೇತೃತ್ವ ವಹಿಸಿದ್ದ ಅಶೋಕ ಹೆಗಡೆ, ಶ್ರೀಕಾಂತ ಹುನಗುಂದ ಹಾಗೂ ಮುಖಂಡರು ಪಟ್ಟು ಹಿಡಿದರು. ಎಸಿ ಅನ್ಯಕಾರ್ಯ ನಿಮಿತ್ತ ಹೋಗಿದ್ದು, ಸಮಸ್ಯೆಯನ್ನು ಶೀಘ್ರದಲ್ಲಿ ಪರಿಹರಿಸುವ ಕುರಿತು ಮೌಖೀಕವಾಗಿ ಧರಣಿ ನಿರತರಿಗೆ ತಿಳಿಸಲು ಸೂಚಿಸಿದ್ದಾರೆ ಎಂದು ಗುಳೇದಗುಡ್ಡ ಉಪತಹಶೀಲ್ದಾರ್ ಮಹಾಂತೇಶ ಅಂಗಡಿ, ಮುಖ್ಯಾಧಿಕಾರಿ ಏಸು ಬೆಂಗಳೂರು ತಿಳಿಸಿದರು.
ಪರಿಹಾರದ ಭರವಸೆ: ಧರಣಿ ನಿರತ ಸ್ಥಳಕ್ಕೆ ಕಾಂಗ್ರೆಸ್ ಮುಖಂಡ ಹೊಳಬಸು ಶೆಟ್ಟರ ಹಾಗೂ ಸಂಜಯ ಬರಗುಂಡಿ ಭೇಟಿ ನೀಡಿ, ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ನಿವೇಶನ ಹಂಚಿಕೆ ಮಾಡಿ, ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದರು.
ಮಾಜಿ ಶಾಸಕರಾದ ರಾಜಶೇಖರ ಶೀಲವಂತ, ಮಲ್ಲಿಕಾರ್ಜುನ ಬನ್ನಿ, ಜಿಪಂ ಮಾಜಿ ಉಪಾಧ್ಯಕ್ಷ ಹನಮಂತ ಮಾವಿನಮರದ, ನಿಂಗಪ್ಪ ಎಣ್ಣಿ, ಸದಸ್ಯರಾದ ರಾಜು ಹೆಬ್ಬಳ್ಳಿ, ನಾಗಪ್ಪ ಗೌಡರ, ಉಮೇಶ ಹುನಗುಂದ, ಪ್ರಶಾಂತ ಜವಳಿ, ಅಮರೇಶ ಕವಡಿಮಟ್ಟಿ, ವಿನೋದ ಮದ್ದಾನಿ, ಶ್ಯಾಮ ಮೇಡಿ, ಮುಖಂಡರಾದ ರಾಜು ಜವಳಿ, ರಾಜು ತಾಪಡಿಯಾ, ಗೋಪಾಲ ಭಟ್ಟಡ ಇದ್ದರು.