ಚೆನ್ನೈ: ಐಪಿಎಲ್ ಇತಿಹಾಸದ ಪ್ರಮುಖ ಆಲ್ ರೌಂಡರ್ ಗಳಲ್ಲಿ ಒಬ್ಬರಾದ ಡ್ವೇನ್ ಬ್ರಾವೋ ಅವರು ಆಟಗಾರನಾಗಿ ಐಪಿಎಲ್ ತ್ಯಜಿಸಿದ್ದಾರೆ. ಐಪಿಎಲ್ ನಲ್ಲೇ ಮುಂದುವರಿಯಲು ಬ್ರಾವೋ ನಿರ್ಧರಿಸಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲಿಂಗ್ ಕೋಚ್ ಆಗಿರಲಿದ್ದಾರೆ.
ಎಂಎಸ್ ಧೋನಿ ನಾಯಕತ್ವದಲ್ಲಿ ಹಲವು ಬಾರಿ ಚಾಂಪಿಯನ್ ಆಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅವಿಭಾಜ್ಯ ಅಂಗವಾಗಿದ್ದ ಬ್ರಾವೋ ಅವರನ್ನು ಈ ಬಾರಿ ಹರಾಜಿಗೂ ಮೊದಲು ಕೈಬಿಡಲು ಸಿಎಸ್ ಕೆ ನಿರ್ಧರಿಸಿತ್ತು. ಆದರೆ ಹರಾಜಿಗೆ ಹೆಸರು ನೀಡದಿರಲು ಬ್ರಾವೋ ನಿರ್ಧರಿಸಿದ್ದಾರೆ.
ವೆಸ್ಟ್ ಇಂಡೀಸ್ ಆಲ್‌ರೌಂಡರ್ ಬ್ರಾವೋ ಅವರನ್ನು ತಮ್ಮ ಹೊಸ ಬೌಲಿಂಗ್ ಕೋಚ್ ಆಗಿ ಸಿಎಸ್ ಕೆ ಘೋಷಿಸಿದ್ದು, ಲಕ್ಷ್ಮೀಪತಿ ಬಾಲಾಜಿ ಒಂದು ವರ್ಷ ವಿರಾಮ ತೆಗೆದುಕೊಳ್ಳುತ್ತಿದ್ದಾರೆ.
ಇದನ್ನೂ ಓದಿ;ವೀಕೆಂಡ್ ನಲ್ಲಿ ಮನೆಯಲ್ಲೇ ಘಮ ಘಮಿಸುವ ರುಚಿಯಾದ ಗೀರೈಸ್ ಮಾಡಿ ಸವಿಯಿರಿ…
“ಐಪಿಎಲ್ ಇತಿಹಾಸದಲ್ಲಿ ನಾನು ಪ್ರಮುಖ ವಿಕೆಟ್ ಟೇಕರ್ ಆಗುತ್ತೇ1ನೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ. ಆದರೆ ಐಪಿಎಲ್ ಇತಿಹಾಸದ ಭಾಗವಾಗಲು ನನಗೆ ಸಂತೋಷವಾಗಿದೆ!” ಎಂದು ಬ್ರಾವೋ ಹೇಳಿದ್ದಾರೆ.
161 ಐಪಿಎಲ್ ಪಂದ್ಯವಾಡಿರುವ ಡ್ವೇನ್ ಬ್ರಾವೋ ಅವರು 183 ವಿಕೆಟ್ ಗಳೊಂದಿಗೆ ಸದ್ಯ ಐಪಿಎಲ್ ನ ಅತೀ ಹೆಚ್ಚು ವಿಕೆಟ್ ಕಬಳಿಸಿದ ಆಟಗಾರರಾಗಿದ್ದಾರೆ. ಡ್ವೇನ್ ಬ್ರಾವೋ ಅವರು 2011ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೇರಿದ್ದರು.