Advertisement

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

04:09 PM Apr 16, 2024 | Team Udayavani |

ಕನ್ನಡ ಚಿತ್ರರಂಗದ ಬಂಗ್ಲೆ ಶಾಮಾ ರಾವ್ ದ್ವಾರಕನಾಥ ಎಂಬ ನಟ ಖ್ಯಾತರಾಗಿದ್ದು ಹೇಗೆ…ಅರೇ ಇದ್ಯಾರಪ್ಪ ಅಂತ ಹುಬ್ಬೇರಿಸಬೇಡಿ. ಇವರು ಬೇರಾರು ಅಲ್ಲ ಕನ್ನಡ ಚಿತ್ರರಂಗ ಕಂಡ ಅಪ್ರತಿಮ ಕುಳ್ಳ..ಖ್ಯಾತ ಹಾಸ್ಯ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್! 1942ರ ಆಗಸ್ಟ್ 19ರಂದು ಹುಣಸೂರಿನಲ್ಲಿ ಜನಿಸಿದ್ದ ದ್ವಾರಕನಾಥ್ ಗೆ ದ್ವಾರಕೀಶ್ ಎಂದು ನಾಮಕರಣ ಮಾಡಿದವರು ಕನ್ನಡ ಚಿತ್ರ ನಿರ್ಮಾಪಕ ಸಿ.ವಿ.ಶಿವಶಂಕರ್.

Advertisement

ಹೀಗೆ ಅಪಾರ ಕನಸುಗಳನ್ನು ಹೊತ್ತು ಬಂದಿದ್ದ ದ್ವಾರಕಾನಾಥ್ ಕನ್ನಡ ಚಿತ್ರರಂಗದಲ್ಲಿ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಹೆಸರು, ಹಣ, ಕೀರ್ತಿ ಎಲ್ಲವನ್ನೂ ಗಳಿಸಿದ್ದರು. ಆದರೆ ಬದುಕು ಹೇಗೆ ತಿರುವು ಪಡೆದುಕೊಳ್ಳುತ್ತದೆ ಎಂದು ಊಹಿಸುವುದು ಕಷ್ಟ. ಅದು ದ್ವಾರಕೀಶ್ ಅವರ ಜೀವನದಲ್ಲೂ ನಡೆದು ಹೋಗಿತ್ತು. ಸುಮಾರು ಹದಿನೆಂಟು ವರ್ಷಗಳ ಕಾಲ ಯಾವುದೇ ಸಿನಿಮಾ, ನಟನೆ ಇಲ್ಲದೆ ಎಲ್ಲವನ್ನೂ ಕಳೆದುಕೊಂಡು ಬಿಟ್ಟಿದ್ದರು.

ಭಾರೀ ನಷ್ಟದಿಂದಾಗಿ ಸಾಲ ತೀರಿಸಲು ಚೆನ್ನೈ, ಬೆಂಗಳೂರಿನಲ್ಲಿದ್ದ ಆಸ್ತಿಯನ್ನೆಲ್ಲಾ ಮಾರಾಟ ಮಾಡಿದ್ದರು. ಜತೆಗೆ ತೆರೆದ ಹೃದಯ ಶಸ್ತ್ರ ಚಿಕಿತ್ಸೆ ಆಗಿತ್ತು. ಇವೆಲ್ಲ ಕಷ್ಟ-ಕೋಟಲೆಯ ನಡುವೆಯೂ ದ್ವಾರಕೀಶ್ ಧೈರ್ಯಗೆಡದೆ ಮುನ್ನುಗ್ಗಿದ್ದರು…ಆಗ ಆಪ್ತಮಿತ್ರ ವಿಷ್ಣುವರ್ಧನ್ ಮತ್ತೆ ಈ ಕುಳ್ಳನ ಕೈ ಹಿಡಿದಿದ್ದರು..ಆಗ ಬೆಳ್ಳಿ ಪರದೆ ಮೇಲೆ ಭರ್ಜರಿ ಯಶಸ್ಸು ಕಂಡ ಸಿನಿಮಾ ಆಪ್ತಮಿತ್ರ…ಈ ಚಿತ್ರದ ಹಿಟ್ ನಿಂದಾಗಿ ದ್ವಾರಕೀಶ್ ಮತ್ತೆ ಚಿತ್ರ ನಿರ್ಮಾಣಕ್ಕೆ ಮರಳುವಂತಾಗಿತ್ತು…

ವ್ಯಾಪಾರ ಬಿಟ್ಟು ಸಿನಿಮಾ ನಟ ಆದ ದ್ವಾರಕೀಶ್:

Advertisement

ಮೈಸೂರಿನ ಶಾರದಾ ವಿಲಾಸ್ ಮತ್ತು ಬಾನುಮಯ್ಯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ್ದ ದ್ವಾರಕನಾಥ್, ಸಿಪಿಸಿ ಪಾಲಿಟೆಕ್ನಿಕ್ ಜತೆಗೆ ಡಿಪ್ಲೋಮೊ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದರು. ಪದವಿ ಶಿಕ್ಷಣದ ನಂತರ ಸಹೋದರನ ಜತೆ ಸೇರಿ ಮೈಸೂರಿನಲ್ಲಿ “ಭಾರತ್ ಆಟೋ ಸ್ಪೇರ್ಸ್ ಎಂಬ ಅಂಗಡಿ ತೆರೆಯುವ ಮೂಲಕ ಬದುಕು ಕಂಡುಕೊಂಡಿದ್ದರು.

ನಟನೆ ಬಗ್ಗೆ ಅಪಾರ ಒಲವು ಹೊಂದಿದ್ದ ದ್ವಾರಕನಾಥ್ ಚಿಕ್ಕಪ್ಪ ಹುಣಸೂರು ಕೃಷ್ಣಮೂರ್ತಿ ಅವರ ಬಳಿ ತಮ್ಮ ಮನದಾಳವನ್ನು ತೋಡಿಕೊಂಡಿದ್ದರು. ನಂತರ ತಮ್ಮ ವ್ಯಾಪಾರವನ್ನು ಅರ್ಧಕ್ಕೆ ಬಿಟ್ಟು, 1963ರಲ್ಲಿ ಹುಣಸೂರು ಅವರು ಚಿತ್ರರಂಗ ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿದ್ದರು.

ಆರಂಭದಲ್ಲಿ ಹಾಸ್ಯನಟನಾಗಿ, ಸಹ ನಟನಾಗಿ ಕಾಣಿಸಿಕೊಳ್ಳುತ್ತಿದ್ದ ದ್ವಾರಕೀಶ್ 1966ರಲ್ಲಿ ಮೊದಲಿಗೆ ಮಮತೆಯ ಬಂಧನ ಎಂಬ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಆದರೆ ದೊಡ್ಡ ಮಟ್ಟದ ಹಿಟ್ ಹಾಗೂ ಚಿತ್ರರಂಗದಲ್ಲಿ ನೆಲೆಯೂರುವಂತೆ ಮಾಡಿದ್ದು 1969ರಲ್ಲಿ ಸ್ವತಂತ್ರವಾಗಿ ನಿರ್ಮಾಣ ಮಾಡಿದ್ದ ಮೇಯರ್ ಮುತ್ತಣ್ಣ ಸಿನಿಮಾ. ದ್ವಾರಕಾ ಫಿಲ್ಮ್ ಬ್ಯಾನರ್ ನಡಿ ನಿರ್ಮಿಸಿದ್ದ ಸಿನಿಮಾದಲ್ಲಿ ಡಾ.ರಾಜ್ ಕುಮಾರ್ ಹಾಗೂ ಭಾರತಿ ಅಭಿನಯಿಸಿದ್ದ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಸದ್ದು ಮಾಡಿತ್ತು..ಹೀಗೆ ಶುರುವಾದ ದ್ವಾರಕೀಶ್ ಸಿನಿ ಪಯಣ ಸುಮಾರು ಎರಡು ದಶಕಗಳ ಕಾಲ ಹಿಂದಿರುಗಿ ನೋಡಲೇ ಇಲ್ಲ.

ಸಿನಿಮಾರಂಗದಲ್ಲಿ ಕನಸುಗಾರರಾದ ರವಿಚಂದ್ರನ್ ಹಾಗೂ ರಾಮು ಯಾವಾಗಲೂ ತನಗೆ ಮಾದರಿ ಎಂದೇ ದ್ವಾರಕೀಶ್ ನೆನಪಿಸಿಕೊಳ್ಳುತ್ತಾರೆ. ಇದಕ್ಕೂ ಮುನ್ನ 1974ರಿಂದ ತನ್ನ ಹಾಗೂ ವಿಷ್ಣುವರ್ಧನ್ ಜೋಡಿ ಸಿನಿಮಾರಂಗದಲ್ಲಿ ಅದ್ಭುತ ಪವಾಡ ಸೃಷ್ಟಿಸಿತ್ತು ಎಂಬುದು ದ್ವಾರಕೀಶ್ ಮನದಾಳದ ಮಾತು. ಕಳ್ಳ ಕುಳ್ಳ ಸಿನಿಮಾದಿಂದ ಹಿಡಿದು ಆಪ್ತಮಿತ್ರದವರೆಗೂ ಈ ಜೋಡಿ ಕನ್ನಡ ಚಿತ್ರರಸಿಕರನ್ನು ಮೋಡಿ ಮಾಡಿದ್ದು ಸುಳ್ಳಲ್ಲ.

1969ರಿಂದ ಈವರೆಗೆ ದ್ವಾರಕೀಶ್ ಸುಮಾರು 47 ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. ಅದರಲ್ಲಿ ಡಾ.ರಾಜ್ ಅಭಿನಯದ ಮೇಯರ್ ಮುತ್ತಣ್ಣ ಸಣ್ಣ ಬಜೆಟ್ ನ ಸಿನಿಮಾ ಆಗಿತ್ತು. ಆದರೆ ಅದು ಗಳಿಸಿದ ಗಳಿಕೆ ಅಪಾರವಾಗಿತ್ತು. ಸುಮಾರು 35 ವರ್ಷಗಳ ನಂತರ ನಿರ್ಮಾಣ ಮಾಡಿದ್ದ ಆಪ್ತಮಿತ್ರ ಸಿನಿಮಾ ದ್ವಾರಕೀಶ್ ಅವರ ಸಿನಿ ಪಯಣಕ್ಕೆ ಮರು ಜೀವ ನೀಡಿತ್ತು ಎಂಬುದರಲ್ಲಿ ಎರಡು ಮಾತಿಲ್ಲ.

ದ್ವಾರಕೀಶ್ ನಿರ್ಮಾಣದ ನ್ಯಾಯ ಎಲ್ಲಿದೆ, ನೀ ಬರೆದ ಕಾದಂಬರಿ, ಶ್ರುತಿ, ಇಂದಿನ ರಾಮಾಯಣ ಸಿನಿಮಾಗಳು ಹಿಟ್ ಆಗಿದ್ದವು. ಆದರೆ ಸಿನಿಮಾ ಜೀವನದಲ್ಲಿ ಇನ್ಮುಂದೆ ರಿಸ್ಕ್ ತೆಗೆದುಕೊಳ್ಳಬಾರದು ಅಂತ ನಿರ್ಧರಿಸಿದ್ದೆ. ಇಡೀ ದೇಶದಲ್ಲಿ ಹೀಗೆ ಜೀವನದಲ್ಲಿ ರಿಸ್ಕ್ ತೆಗೆದುಕೊಂಡವರು ಇಬ್ಬರೇ..ಒಂದು ಅಮಿತಾಬ್ ಬಚ್ಚನ್ ಮತ್ತೊಂದು ದ್ವಾರಕೀಶ್ ಎಂದು ಸಂದರ್ಶನವೊಂದರಲ್ಲಿ ನೆನಪಿಸಿಕೊಂಡಿದ್ದರು. ಸಿನಿಮಾ ಜಗತ್ತಿನಲ್ಲಿ ಎಲ್ಲವನ್ನೂ ಕಳೆದುಕೊಂಡು, ಮಾಡಿದ್ದ ಸಾಲವನ್ನು ಕೊನೆಗೂ ತೀರಿಸಿದ ವ್ಯಕ್ತಿಗಳೆಂದರೆ ನಾನು ಮತ್ತು ಅಮಿತಾಬ್ ಎಂಬುದು ದ್ವಾರಕೀಶ್ ಮಾತು!

ಆಪ್ತ ಮಿತ್ರರ ನಡುವಿನ ಸ್ನೇಹದಲ್ಲಿ ಬಿರುಕು:

ಸಾಹಸಸಿಂಹ ವಿಷ್ಣುವರ್ಧನ್‌ ಮತ್ತು ದ್ವಾರಕೀಶ್‌ ಎಷ್ಟು ಆಪ್ತರಾಗಿದ್ದರೋ, ನಂತರ ಅವರಿಬ್ಬರ ನಡುವಿನ ಗೆಳೆತನವೂ ಸಂಪೂರ್ಣ ಹಳಸಿಹೋಗಿತ್ತು. ವಿಷ್ಣುವರ್ಧನನ್ನು ಬೆಳೆಸಿದ್ದೆ ನಾನು, ನನ್ನಂತಹ ನಿರ್ಮಾಪಕನನ್ನು ಎದುರುಹಾಕಿಕೊಂಡು ಹೇಗೆ ಬದುಕುತ್ತಾನೆ ಎಂದು ದ್ವಾರಕೀಶ್‌ ಪ್ರಶ್ನಿಸಿದ್ದರು. ಹೀಗೆ ಇಬ್ಬರು ನಡುವಿನ ಸಂಬಂಧ ಮುರಿದು ಬಿದ್ದ ನಂತರ, ದ್ವಾರಕೀಶ್‌ ನಿರ್ಮಾಣ ಮಾಡಿದ್ದ 18 ಸಿನಿಮಾಗಳು ಸತತವಾಗಿ ಸೋಲುವ ಮೂಲಕ ಆರ್ಥಿಕ ಸ್ಥಿತಿ ಹದಗೆಟ್ಟು ಹೋಗಿತ್ತು. ಕೊನೆಗೆ ದ್ವಾರಕೀಶ್‌ ಕೈಹಿಡಿದದ್ದು ಆಪ್ತಮಿತ್ರ ಸಿನಿಮಾ! ಆದರೂ ದ್ವಾರಕೀಶ್‌ ಸಾಲದ ಸುಳಿ ಹೈರಾಣಾಗಿಸಿಬಿಟ್ಟಿತ್ತು.

*ನಾಗೇಂದ್ರ ತ್ರಾಸಿ

Advertisement

Udayavani is now on Telegram. Click here to join our channel and stay updated with the latest news.

Next