ಗುರುಮಠಕಲ್: ಒಂದು ಕಟ್ಟಡ ಸಾವಿರಾರು ಜನರಿಗೆ ಆರೋಗ್ಯ, ವಿದ್ಯೆ ಹೀಗೆ ಹಲವು ಸೇವೆ ನೀಡಿ ಈಗ ಸರಕಾರ ಹಾಗೂ ಸಾರ್ವಜನಿಕರ ನಿರ್ಲಕ್ಷ್ಯದಿಂದಾಗಿ ಅನಾಥವಾಗಿದೆ. ಅಕ್ಕ ಪಕ್ಕದ ಬಡಾವಣೆ ಜನರು ಶೌಚಕ್ಕೆ ಬಳಸುತ್ತಿದ್ದಾರೆ. ಪಟ್ಟಣದ ಗಡಿ ಮೊಹಲ್ಲಾದಲ್ಲಿರುವ ಪಿಡಬ್ಯ್ಲುಡಿ ಇಲಾಖೆಗೆ ಒಳಪಡುವ ಹಳೆ ಆಸ್ಪತ್ರೆ ದುರಂತ ಕಥೆ ಇದು.
ಹಳೇ ಆಸ್ಪತ್ರೆ ಕಟ್ಟಡ ಸುಸಜ್ಜಿತವಾಗಿದ್ದರಿಂದ ಕಾಲೇಜಿಗಾಗಿ ಬಳಸಿಕೊಳ್ಳಲಾಯಿತು. ಕಟ್ಟಡ ನಿರ್ಮಾಣವಾದ ಬಳಿಕ ಕಾಲೇಜು ಸ್ಥಳಾಂತರವಾಯಿತು. ನಂತರ ಕಟ್ಟಡವನ್ನು ಐಟಿಐ ಕಾಲೇಜಿಗಾಗಿ ಬಳಸಿಕೊಳ್ಳಲಾಯಿತು. ಹೊಸ ಕಟ್ಟಡ ನಿರ್ಮಾಣವಾದ ಬಳಿಕ ಐಟಿಐ ಅಲ್ಲಿಗೆ ವರ್ಗವಾಯಿತು. ಪುರಸಭೆಯಲ್ಲಿ ಸ್ಥಳದ ಅಭಾವವಿರುವುದರಿಂದ ಸದ್ಯ ಹಳೆ ಆಸ್ಪತ್ರೆ ಆವರಣದಲ್ಲಿರುವ ಕೊಣೆಗಳಲ್ಲಿ ನೈರ್ಮಲ್ಯ ನಿರೀಕ್ಷಕರ ಕಚೇರಿ ಕಾರ್ಯ ನಿರ್ವಹಿಸುತ್ತಿದೆ. ಕಟ್ಟಡಕ್ಕೆ ಸೂಕ್ತ ಭದ್ರತೆ ಇಲ್ಲದ ಕಾರಣ ಕಿಡಿಗೇಡಿಗಳು ಕಿಟಕಿ ಬಾಗಿಲುಗಳನ್ನು ಕಿತ್ತೂಯ್ದಿದ್ದಾರೆ. ಕಟ್ಟಡದ ಸುಭದ್ರ ಕೋಣೆಗಳನ್ನು ಅಕ್ಕ-ಪಕ್ಕದವರು ದಿನವಿಡಿ ಶೌಚಕ್ಕೆ ಬಳಸುತ್ತಿದ್ದಾರೆ. ಪಕ್ಕದಲ್ಲೇ ನೈರ್ಮಲ್ಯ ಕಾಪಾಡುವ ಕಚೇರಿ ಇದ್ದರೂ ಯಾರು ಕೇಳುವವರೇ ಇಲ್ಲದಂತಾಗಿದೆ. ಅನೇಕ ಕಚೇರಿಗಳಿಗೆ ಆಸರೆಕೊಟ್ಟ ಹಳೆ ಆಸ್ಪತ್ರೆ ಕಟ್ಟಡಕ್ಕೆ ಸೂಕ್ತ ಭದ್ರತೆ ನೀಡಬೇಕು ಎಂಬುದು ನಾಗರಿಕರ ಆಗ್ರಹವಾಗಿದೆ.
Advertisement
1907ರಲ್ಲಿ ನಿಜಾಮ ಆಡಳಿತದಲ್ಲಿ ‘ದವಾಖಾನ-ಎ-ನಿಜಾಮ’ ಎಂಬ ಹೆಸರಿನಿಂದ ಆರಂಭವಾದ ಆಸ್ಪತ್ರೆ ನಿಜಾಮ ಆಡಳಿತದಿಂದ ವಿಮುಕ್ತಿ ಪಡೆದ ಬಳಿಕ ಪ್ರಾಥಮಿಕ ಆರೋಗ್ಯ ಕೇಂದ್ರ ಎಂದು ಪರಿವರ್ತನೆಯಾಗಿದೆ. ಎಂಟು ದಶಕಗಳ ಕಾಲ ಸುಮಾರು ನಲವತ್ತು ಹಳ್ಳಿಗಳಿಗೆ ಆರೋಗ್ಯ ಸೇವೆ ನೀಡಿದೆ. ಅಲ್ಲದೇ ನೂರಾರು ಹೆರಿಗೆಗಳಾಗಿವೆ. ಹೆರಿಗೆ ನಂತರ ಜನರು ಮನೆಗೆ ತೆರಳುವಾಗ ಪೂಜ್ಯ ಭಾವನೆಯಿಂದ ಆಸ್ಪತ್ರೆ ಬಾಗಿಲಿಗೆ ತೆಂಗಿನ ಕಾಯಿ ಒಡೆದು ತೆರಳುತ್ತಿದ್ದರು. ಸ್ಥಳದ ಅಭಾವದ ಎದುರಾದ ಹಿನ್ನೆಲೆಯಲ್ಲಿ ಎಂಟು ದಶಕಗಳ ನಂತರ ಆಸ್ಪತ್ರೆ ಹೊಸ ಕಟ್ಟಡಕ್ಕೆ ಸ್ಥಳಾಂತರವಾಯಿತು. ಆಗಷ್ಟೇ ಪಟ್ಟಣಕ್ಕೆ ಪದವಿ ಕಾಲೇಜು ಮಂಜೂರಾಯಿತು.