Advertisement

ದಾವಿವಿಗೆ ಮಹರ್ಷಿ ವಾಲ್ಮೀಕಿ ಹೆಸರಿಡಿ

04:43 PM Aug 20, 2017 | |

ಹರಿಹರ: ಬೆಂಗಳೂರಿನ ವಿಧಾನಸೌಧದ ಎದುರು ನೂತನವಾಗಿ ಸ್ಥಾಪಿಸಿರುವ ವಾಲ್ಮೀಕಿ ಮಹರ್ಷಿಗಳ ಪುತ್ಥಳಿ ಅ.5ರಂದು ಲೋಕಾರ್ಪಣೆಯಾಗಲಿದೆ. ಸಮಾಜದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲೆಂದು ಮಠದಿಂದ ಜಾಗೃತಿ ಜ್ಯೋತಿ ಆರಂಭಿಸಲಾಗುವುದು ಎಂದು ವಾಲ್ಮೀಕಿ ಪ್ರಸನ್ನಾನಂದ ಶ್ರೀಗಳು ಹೇಳಿದರು. ಕಾರ್ಯಕ್ರಮದ ಪೂರ್ವ ಸಿದ್ಧತೆಗಾಗಿ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಶನಿವಾರ ನಡೆದ ರಾಜ್ಯಮಟ್ಟದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ತಮಿಳುನಾಡಿನ ಶಿಲ್ಪಿಗಳು ನಿರ್ಮಿಸಿರುವ ಕಪ್ಪು ಶಿಲೆಯ, 30 ಟನ್‌ ತೂಕದ, 22.5 ಅಡಿ ಎತ್ತರದ ಪುತ್ತಳಿ ವಿಧಾನಸೌಧದ ಪಶ್ಚಿಮ ಬಲಭಾಗದ ರಾಕ್‌ ಗಾರ್ಡ್‌ನ್‌ನಲ್ಲಿ ಸ್ಥಾಪಿಸಲಾಗುತ್ತಿದೆ ಎಂದರು.
ಉಗ್ರಪ್ಪ ಸೇರಿದಂತೆ ಸಮಾಜದ ಎಲ್ಲಾ ಜನಪ್ರತಿನಿಧಿಗಳ ಪರಿಶ್ರಮ ಹಾಗೂ ಕಾಂಗ್ರೆಸ್‌ ಸರ್ಕಾರದ ಸಹಕಾರದಿಂದ ಶಕ್ತಿಸೌಧದ ಎದುರು ಪುತ್ತಳಿ ಸ್ಥಾಪನೆ ಮಾತ್ರವಲ್ಲದೆ 1 ಕೋ.ರೂ. ವೆಚ್ಚದಲ್ಲಿ ಆ ಸ್ಥಳವನ್ನು ವಾಲ್ಮೀಕಿ ತಪೋವನವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಶ್ರೀಗಳು ಮಾಹಿತಿ ನೀಡಿದರು. ದೇವೇಗೌಡರು ವಾಲ್ಮೀಕಿ ನಾಯಕ ಜನಾಂಗವನ್ನು ಎಸ್ಟಿ ವರ್ಗಕ್ಕೆ ಸೇರಿಸಿ ಸಾಮಾಜಿಕ ನ್ಯಾಯ ಒದಗಿಸಿದ್ದರೆ, ಯಡಿಯೂರಪ್ಪ ವಾಲ್ಮೀಕಿ ಜಯಂತಿಯನ್ನು ಸರ್ಕಾರಿ ಆಚರಣೆಯಾಗಿಸಿ ರಜೆ ಮಂಜೂರು ಮಾಡಿದ್ದಾರೆ. ಸಮಾಜದ ಅಭಿವೃದ್ಧಿಗೆ ಎಲ್ಲಾ ಪಕ್ಷಗಳ ಕೊಡುಗೆ ನೀಡಿವೆ.
ಖಾಸಗಿ ಕ್ಷೇತ್ರದಲ್ಲೂ ಉದ್ಯೋಗ ಮೀಸಲಾತಿ ಕಡ್ಡಾಯಗೊಳಿಸಿದರೆ, ಎಲ್ಲಾ ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಗುತ್ತದೆ ಎಂದು ಹೇಳಿದರು. ಸಂಸದ ಶ್ರೀರಾಮುಲು ಮಾತನಾಡಿ, ಚಿತ್ರದುರ್ಗ ವಾಲ್ಮೀಕಿ ನಾಯಕ ಜನಾಂಗದ
ಪಾಳೆಗಾರರು ಆಳಿದ ನಾಡಾಗಿದ್ದರೆ, ದಾವಣಗೆರೆ ಜಿಲ್ಲೆಯಲ್ಲಿ ಸಮಾಜದ ಪೀಠವಿದೆ. ಇವೆರಡೂ ಜಿಲ್ಲಾ ವ್ಯಾಪ್ತಿಯ ದಾವಣಗೆರೆ ವಿವಿಗೆ ಮಹರ್ಷಿ ವಾಲ್ಮೀಕಿ ಹೆಸರಿಡಬೇಕು ಎಂದು ಸಲಹೆ ನೀಡಿದರು. ಕಳೆದ ಬಿಜೆಪಿ ಅವ ಧಿಯಲ್ಲಿ ಸಮಾಜದ ನಾಲ್ವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಆದರೆ ಸಮಾಜದ 4-5 ಶಾಸಕರಿದ್ದರೂ ಕಾಂಗ್ರೆಸ್‌ ಸರ್ಕಾರ
ಒಂದೇ ಒಂದು ಸ್ಥಾನ ನೀಡಿಲ್ಲ. ಮುಖಂಡರು ಚುನಾವಣೆ ನಂತರ ಪಕ್ಷಬೇಧ ಮರೆತು ಕಷ್ಟದಲ್ಲಿ ಕಣ್ಣೀರು ಸುರಿಸುತಿರುವ ಸಮಾಜ ಬಾಂಧವರನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಬೇಕಿದೆ ಎಂದರು. ವಿಧಾನ ಪರಿಷತ್‌ ಸದಸ್ಯ ವಿ.ಎಸ್‌. ಉಗ್ರಪ್ಪ ಮಾತನಾಡಿ, ರಾಜ್ಯದಲ್ಲಿ ಶೇ.16ರಷ್ಟು ವೀರಶೈವರು, 12ರಷ್ಟು ಮುಸ್ಲಿಮರು, ಶೇ.11 ರಷ್ಟು ಒಕ್ಕಲಿಗರಿದ್ದು, ನಂತರದಲ್ಲಿ ವಾಲ್ಮೀಕಿ ಜನಾಂಗದವರಿದ್ದಾರೆ. ಕಳೆದ 30 ವರ್ಷಗಳಿಂದ ಪ್ರತಿ ಸರ್ಕಾರದಲ್ಲೂ 7-8 ವೀರಶೈವರು, 8-10 ಒಕ್ಕಲಿಗರು ಸಚಿವರಾಗುತ್ತಿದ್ದು, ವಾಲ್ಮೀಕಿ ಸಮಾಜದವರಿಗೆ ಅವಕಾಶಗಳೇ ದೊರೆತಿಲ್ಲ.
ಇತಿಹಾಸದಲ್ಲಿ ಕೋಟೆ ಕೊತ್ತಲು ಕಟ್ಟಿ ಆಳ್ವಿಕೆ ನಡೆಸಿದ್ದ ಸಮಾಜಕ್ಕೆ ನ್ಯಾಯ ಮರೀಚಿಕೆಯಾಗಿದೆ ಎಂದರು.
ಶಾಸಕರಾದ ರಾಜೇಶ್‌, ರಘುಮೂರ್ತಿ, ಪ್ರತಾಪ್‌ಗೌಡ, ಮುಖಂಡರಾದ ಹೊದಿಗೆರೆ ರಮೇಶ್‌, ಜಿ.ಟಿ.ಚಂದ್ರಶೇಖರ, ನರಸಿಂಹಯ್ಯ, ಮೃತ್ಯುಂಜಯ, ಡಿ.ಎಂ.ಸಾಲಿ, ಮಲ್ಲೇಶಪ್ಪ, ಜಿಪಂ ಸದಸ್ಯ ಲೋಕೇಶ್‌, ಜಿ.ಕೆ.ಭೀಮಣ್ಣ,
ರಾಜುನಾಯಕ್‌, ಡಿ.ರತ್ನಾಕರ್‌, ಪ್ರಕಾಶ್‌, ಬಸವರಾಜ ನಾಯಕ್‌, ಹನುಮಂತ ನಾಯಕ್‌, ಅಶ್ವಥ್‌ ರಾಮಯ್ಯ, ಪುಷ್ಪಾ, ಬಳಿಗಾರ್‌, ಹದಡಿ ಹಾಲೇಶಪ್ಪ, ಪ್ರೊ| ಬಿ.ರಾಮಚಂದ್ರಪ್ಪ, ಕೆ.ಪಿ.ಪಾಲಯ್ಯ, ಓಬಳೇಶ್‌, ಮತ್ತಿತರರಿದ್ದರು

Advertisement
Advertisement

Udayavani is now on Telegram. Click here to join our channel and stay updated with the latest news.

Next