ಬೆಂಗಳೂರು: ಕರಾವಳಿ ಬಿಜೆಪಿಯ ಪ್ರಯೋಗ ಶಾಲೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಾಡಿದ ಟ್ವೀಟ್‌ಗೆ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ಭರ್ಜರಿ ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ ಅವರು ‘ಕರ್ನಾಟಕದ ಕರಾವಳಿಯನ್ನು ಬಿಜೆಪಿ ಕೋಮುವಾದದ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡಿದೆ, ಹಾಗಾಗಿ ಬಿಜೆಪಿ ರಾಷ್ಟ್ರೀಯ ನಾಯಕರು ಆಗಾಗ ಕರಾವಳಿಗೆ ಭೇಟಿ ನೀಡುತ್ತಾರೆ. ಅಮಿತ್ ಶಾ ಮತ್ತು ನರೇಂದ್ರ ಮೋದಿ ಕರ್ನಾಟಕದಲ್ಲಿಯೇ ಬಂದು ಮನೆ ಮಾಡಿದ್ರೂ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ರಾಜ್ಯದ ಜನ ಬೆಂಬಲ ನೀಡುವುದಿಲ್ಲ’. ಎಂದು ಬರೆದಿದ್ದರು.
ಇದಕ್ಕೆ ತಿರುಗೇಟು ನೀಡಿದ ಡಿವಿಎಸ್ ‘ಅದೇ ರಿಕಾರ್ಡ್ ಕಂಠ ಪಾಠ ಮಾಡಿಕೊಂಡು ಎಷ್ಟು ದಿನ ಸುತ್ತಬೇಕು ಅಂತ ಇದ್ದೀರಾ. ಚಾಮುಂಡೇಶ್ವರಿಯ ಮತದಾರರೇ ನಿಮ್ಮನ್ನು ನಂಬಲಿಲ್ಲ. ಇನ್ನು ಕರಾವಳಿಯ ಜನ ನಿಮ್ಮ ಕಂಠ ಪಾಠ ಒಪ್ತಾರಾ ? ಕರಾವಳಿಯ ಯಾಕೆ ಇಡೀ ಕರ್ನಾಟಕದ ಜನರಿಗೆ ತಮ್ಮ ಆಯ್ಕೆ ಗೊತ್ತಿದೆ . ಇನ್ನು ಅಧಿಕಾರ ಹೊಂದಾಣಿಕೆ ನಿಮ್ಮ ಬಹುಮತಕ್ಕೆ ಬಂದದ್ದಲ್ಲ ನೆನಪಿರಲಿ’ಎಂದು ತಿರುಗೇಟು ನೀಡಿದ್ದಾರೆ.