ಕಾರವಾರ: ರಾಜ್ಯದಲ್ಲಿ ನನೆಗುದಿಗೆ ಬಿದ್ದಿರುವ ರೈಲು ಯೋಜನೆಗಳಲ್ಲಿ ಹುಬ್ಬಳ್ಳಿ ಅಂಕೋಲಾ-ರೈಲ್ವೆ ಮಾರ್ಗ ಪ್ರಮುಖವಾದುದು. ಉತ್ತರ ಕರ್ನಾಟಕ ಹಾಗೂ ಕರಾವಳಿಯನ್ನು ವಾಣಿಜ್ಯ ಹಾಗೂ ಜನ ಸಂಚಾರದ ದೃಷ್ಟಿಯಿಂದ ಪ್ರಮುಖ ಯೋಜನೆಯಾದ ಇದನ್ನು ದಶಕಗಳೇ ಕಳೆದರೂ ಅನುಷ್ಠಾನಗೊಳಿಸಲು ಸಾಧ್ಯವಾಗಿಲ್ಲ.
ಪರಿಸರದ ತೊಡಕು-ಹಲವು ಲಾಬಿ: ಜಿಲ್ಲೆಯಲ್ಲಿ ರೈಲು ಓಡಬೇಕೆಂಬುದು ಹಲವು ದಶಕಗಳ ಕನಸು. ಅದರಲ್ಲಿ ಸಾಕಾರಗೊಂಡಿದ್ದು ಕೊಂಕಣ ರೈಲು ಮಾರ್ಗ ಮಾತ್ರ. ಉಳಿದವೆಲ್ಲ ಇನ್ನೂ ನನೆಗುದಿಗೆ ಬಿದ್ದಿವೆ. ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗ ಅನುಷ್ಠಾನವಾಯಿತು ಎನ್ನುವಷ್ಟರಲ್ಲೇ ಅದು ನನೆಗುದಿಗೆ ಬಿದ್ದು ದಶಕಗಳೇ ಕಳೆದಿವೆ. ಮೂಲತಃ ಈ ಯೋಜನೆ ಅನುಷ್ಠಾನಕ್ಕೆ ಅಡ್ಡಿಯಾದದ್ದು ಇಲ್ಲಿನ ಪರಿಸರ. ದಟ್ಟ ಅರಣ್ಯ, ಆನೆ ಕಾರಿಡಾರ್, ಪ್ರಾಣಿಸಂಕುಲಕ್ಕೆ ಆಗುವ ಧಕ್ಕೆ ಇದನ್ನೆಲ್ಲ ಗಮನಿಸಿ ಯೋಜನೆಗೆ ಸ್ವಲ್ಪ ಹಿನ್ನಡೆಯಾಗಿದೆ. ಆದರೆ ಇದೇ ಪ್ರಮುಖ ಕಾರಣವೂ ಅಲ್ಲ. ಯೋಜನೆ ಅನುಷ್ಠಾನಗೊಳ್ಳದಿರಲು ಅನೇಕ ಲಾಬಿಗಳ ಕೈವಾಡವೂ ಇದೆ ಎನ್ನಲಾಗುತ್ತಿದೆ. ದಶಕಗಳ ಕಾಲ ಜಿಲ್ಲೆಯ ಸಂಸದರು ಲೋಕಸಭೆಯಲ್ಲಿ ಗಟ್ಟಿ ಧ್ವನಿ ಎತ್ತದೇ ಇರುವುದು, ಪ್ರಧಾನಿಯವರ ಮನವೊಲಿಸಿ ಕೆಲಸ ಮಾಡಿಕೊಳ್ಳದೇ ಹೋದ ರಾಜ್ಯದ ಸಂಸದರು ಹಾಗೂ ಕೇಂದ್ರದಲ್ಲಿ ರಾಜ್ಯ ಪ್ರತಿನಿ ಧಿಸುವ ಕೇಂದ್ರ ಸಚಿವರು ಸಹ ರೈಲ್ವೆ ಯೋಜನೆಗಳ ಬಗ್ಗೆ ಅಷ್ಟೊಂದು ಮುತುವರ್ಜಿ ವಹಿಸದಿರೋದು ಜಿಲ್ಲೆಯ ಕೆಲ ಮಾರ್ಗಗಳಲ್ಲಿ ರೈಲು ಓಡದಿರುವ ಕಾರಣ ಎನ್ನಬಹುದು.
ಮುಖ್ಯವಾಗಿ ಜಿಲ್ಲೆಯ ಜನರ ದಶಕಗಳ ಬೇಡಿಕೆಯಾದ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ಪರಿಸರಾಸಕ್ತರ, ಪರಿಸರ ಹೋರಾಟಗಾರರೇ ತೊಡಕು ಎಂದು ಮೆಲ್ನೋಟಕ್ಕೆ ಕಂಡರೂ ಈ ಮಾರ್ಗವನ್ನು ಅನುಷ್ಠಾನ ಮಾಡಲು ಲಾರಿ ಮಾಲಕರ, ಇತರೆ ಟ್ರಾನ್ಸ್‌ಪೊàರ್ಟರ್ ಲಾಭಿ, ಮಂಗಳೂರು, ಮುಂಬೈ, ಗೋವಾದ ವಾಣಿಜ್ಯ ಬಂದರುಗಳ ಲಾಬಿ ಸಹ ಇದೆ. ಪ್ರಮುಖವಾಗಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಮರೆಯಲಾರದ ಕೊಡುಗೆ ನೀಡುವ ಮನಸ್ಸು ಮಾಡದಿರುವುದು ಸಹ ಇದಕ್ಕೆ ಕಾರಣವಾಗಿದೆ. ಹಾಗಂತ ಈ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರಕಾರ ಮನಸ್ಸು ಮಾಡಿ ಅನುದಾನ ನೀಡಿತ್ತು. 2000 ನೇ ಇಸ್ವಿಯಲ್ಲಿ ದಿ| ಅಟಲ್ ಬಿಹಾರಿ ವಾಜಪೇಯಿ ಅಡಿಗಲ್ಲು ಹಾಕಿದ್ದರು. 164.44 ಕಿ.ಮೀ. ಉದ್ದದ ಈ ರೈಲ್ವೆ ಮಾರ್ಗಕ್ಕೆ ಅಂದು 1500 ಕೋಟಿ ರೂ. ಅಂದಾಜು ಮೊತ್ತ ನಿಗದಿಪಡಿಸಲಾಗಿತ್ತು. ಕೆಲವೆಡೆ ಕಾಮಗಾರಿಯೂ ನಡೆದಿತ್ತು. ಆದರೆ ಕೊನೆಗೆ ಹಲವು ಕಾರಣಕ್ಕೆ ಯೋಜನೆ ನನೆಗುದಿಗೆ ಬಿತ್ತು. ಯೋಜನೆ ವಿಳಂಬದಿಂದ ಈಗ 4000 ಕೋಟಿ ರೂ. ಅನುದಾನದ ಅಗತ್ಯವಿದೆ. ಹೀಗಾಗಿ ಇದಕ್ಕೆ ಸರಕಾರದ ಸ್ಪಂದನೆ ಸಿಗಲಿದೆಯೇ ಎಂಬುದು ಸದ್ಯದ ಪ್ರಶ್ನೆ.
ವ್ಯಾವಹಾರಿಕ, ಮತ ಲೆಕ್ಕಾಚಾರದಿಂದ ಜನರಿಗೆ ನಷ್ಟ: ಜಿಲ್ಲೆಯಲ್ಲಿ ರೈಲು ಯೋಜನೆಗಳ ಅನುಷ್ಠಾನಕ್ಕೆ ಇಲ್ಲಿನ ಎಲ್ಲ ಪಕ್ಷಗಳ ಜನಪ್ರತಿನಿಧಿಗಳ ನಿರಾಸಕ್ತಿ ಹಾಗೂ ಪಟ್ಟು ಹಿಡಿದು ಯೋಜನೆ ತರದಿರುವುದೂ ಕಾರಣ. ಪರಿಸರ ಇಲಾಖೆ, ವನ್ಯಜೀವಿ ಮಂಡಳಿಗಳು ನೆಪ ಮಾತ್ರ. ಇವೆಲ್ಲಾ ಸರ್ಕಾರದ ಅಧಿಧೀನ ಸಂಸ್ಥೆಗಳು. ಜಿಲ್ಲೆಯ ಅಭಿವೃದ್ಧಿಗೆ ರೈಲ್ವೆ ಮಾರ್ಗ ರೂಪಿಸಲು ಹಿಂದೇಟು ಹಾಕುವ ಕಾರಣಗಳ ಹಿಂದೆ ವ್ಯಾವಹಾರಿಕ ಹಾಗೂ ಮತಗಳ ಲೆಕ್ಕಾಚಾರವೇ ಹೆಚ್ಚು ಕೆಲಸ ಮಾಡುತ್ತಿದೆ ಎನ್ನಲಾಗುತ್ತಿದೆ. ಈ ಯೋಜನೆಯಿಂದ ನನಗೆಷ್ಟು ಲಾಭ ಎಂಬ ಧೋರಣೆಯೇ ಜಿಲ್ಲೆಯ ರೈಲ್ವೆ ಯೋಜನೆಗಳು ನನೆಗುದಿಗೆ ಬೀಳಲು ಕಾರಣ ಎಂಬ ಮಾತುಗಳು ಕೇಳಿಬರತೊಡಗಿವೆ. ಎಲ್ಲವನ್ನು ರಾಜಕೀಯ ಲಾಭ ಲೆಕ್ಕಾಚಾರ ಹಾಗೂ ವ್ಯವಹಾರಿಕ ದೃಷ್ಟಿಯ ಕಾರಣದಿಂದ ಯೋಜನೆಗಳು ಕಾಗದದಲ್ಲಿ ಕೊಳೆಯತೊಡಗಿವೆ. ಪ್ರತಿವರ್ಷ 8 ರಿಂದ ಹತ್ತು ಕೋಟಿ ಅನುದಾನ ಮೀಸಲಿಡುತ್ತಿದ್ದ ಯೋಜನೆಗೆ ಈಚೆಗೆ ಅನುದಾನ ಸಹ ನಿಲ್ಲಿಸಲಾಗಿದೆ. 2014 ರಿಂದ 2019-20 ರ ಬಜೆಟ್ ಗಳಲ್ಲಿ ಹುಬ್ಬಳ್ಳಿ ಅಂಕೋಲಾ ರೈಲು ಯೋಜನೆಗೆ ಹಣವನ್ನೇ ಮೀಸಲಿಟ್ಟಿಲ್ಲ. ಒಮ್ಮೆ ಒಪ್ಪಿಗೆ ಸಿಕ್ಕು ಅಂದಿನ ಪ್ರಧಾನಿಗಳೇ ಅಡಿಗಲ್ಲು ಹಾಕಿದ ಯೋಜನೆಯನ್ನು ನಿಲ್ಲಿಸಿದ್ದೇ ದೊಡ್ಡ ದುರಂತ ಹಾಗೂ ಬಹುದೊಡ್ಡ ಲೋಪ. ಪರಿಸರ ರಕ್ಷಣೆ ಹೆಸರಲ್ಲಿ ಮಹತ್ವಾಕಾಂಕ್ಷಿ ಯೋಜನೆಗೆ ಬಾಗಿಲು ಹಾಕಿದ್ದು ಮಾತ್ರ ದುರಂತ. ಈಗ ಮತ್ತೆ ಸರ್ವೇ, ವೈಜ್ಞಾನಿಕ ವರದಿ, ಸ್ಥಳ ವೀಕ್ಷಣೆ, ಅಭಿಪ್ರಾಯ ಸಂಗ್ರಹ ಇವೆಲ್ಲ ಪುನಃ ಆರಂಭಗೊಂಡಿವೆ. ಈ ಯೋಜನೆಯ ಭವಿಷ್ಯ ಈಗ ವನ್ಯಜೀವಿ ಮಂಡಳಿ ಹಾಗೂ ತಜ್ಞರ ವರದಿ ಹಾಗೂ ಹಸಿರುಪೀಠದ ನಿರ್ದೇಶನವನ್ನು ಅವಲಂಬಿಸಿವೆ.
ಜಿಲ್ಲೆಯ ಎಲ್ಲ ರೈಲು ಮಾರ್ಗ ಅನುಷ್ಠಾನಕ್ಕೆ ಸರಕಾರಗಳು ಗಮನಹರಿಸಬೇಕು. ಹಾಗಂತ ಪರಿಸರಕ್ಕೆ ಸಂಪೂರ್ಣ ಧಕ್ಕೆ ತಂದು ಇಲ್ಲಿನ ಕಾಡು, ಮೇಡು, ಗುಡ್ಡ ಇವನ್ನೆಲ್ಲ ನಾಶಪಡಿಸಿ ರೈಲುಮಾರ್ಗ ಆಗಬೇಕೆ? ಎಂಬ ಪ್ರಶ್ನೆಯೂ ಇದೆ. ಅಭಿವೃದ್ಧಿ, ಪರಿಸರ ಎರಡೂ ಜಿಲ್ಲೆಗೆ ಅನಿವಾರ್ಯ. ಹೀಗಾಗಿ ಪರಿಸರವನ್ನೂ ಕಾಪಾಡಿ ರೈಲು ಮಾರ್ಗ ಅನುಷ್ಠಾನಕ್ಕೆ ಸರಕಾರ ಮುಂದಾಗಬೇಕಿದೆ. ಅಲ್ಲದೇ ಮುಖ್ಯವಾಗಿ ಎಲ್ಲದಕ್ಕೂ ತಕರಾರು ತೆಗೆಯುವ ಪರಿಸರ ಹೋರಾಟಗಾರರು ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ರೈಲು ಯೋಜನೆಗಳಿಗೆ ಸಹಕಾರ ನೀಡಬೇಕು ಎಂಬುದು ಜನರ ಒತ್ತಾಯ.
ಕ್ಯಾಸರಲಾಕ್-ಗೋವಾ ಮಾರ್ಗ
ಕ್ಯಾಸರಲಾಕ್-ಗೋವಾ ಮಾರ್ಗ ರೂಪಿಸಿದ್ದು ಬ್ರಿಟಿಷರು. ಜೊಯಿಡಾ ಕಾಡಿನಿಂದ ಮರದ ದಿನ್ನೆಗಳು ಹಾಗೂ ಡಿಗ್ಗಿ ಪ್ರದೇಶದ ಅದಿರು ಗಣಿಯಿಂದ ಅದಿರು ಸಾಗಾಟ ಈ ಮಾರ್ಗದ ಪ್ರಮುಖ ಉದ್ದೇಶ. ಕ್ಯಾಸರಲಾಕ್, ಲೋಂಡಾ ಮಾರ್ಗದಲ್ಲಿ ಸುರಂಗ ಕೊರೆದು ಮಾರ್ಗ ರೂಪಿಸಿದ ಕೀರ್ತಿ ಬ್ರಿಟಿಷರಿಗೆ ಸಲ್ಲುತ್ತದೆ. ಮರದ ದಿನ್ನೆಗಳ ಸಂಪತ್ತು ವಿದೇಶ ಹಾಗೂ ದೇಶದ ಇತರೆ ಭಾಗಗಳಿಗೆ ರವಾನೆಯಾಗುತ್ತಿತ್ತು. ಅದಿರು ಗಣಿಗಾರಿಕೆ ಸಹ ಯತೇಚ್ಚವಾಗಿ ಆ ಕಾಲಕ್ಕೆ ನಡೆದಿದೆ. ಕ್ಯಾಸರಲಾಕ್ ಮಾರ್ಗದ ದ್ವೀಪಥಿಕರಣದ ಯೋಜನೆ ಅನುಷ್ಠಾನಕ್ಕೆ ಸರ್ವೆ ನಡೆದಿದೆ. ಇದಕ್ಕೂ ಸಹ ಪರಿಸರವಾದಿಗಳ ವಿರೋಧ ವ್ಯಕ್ತವಾಗಿತ್ತು.
ಶಿರಸಿ-ಹಾವೇರಿ ರೈಲು ಮಾರ್ಗ
ಶಿರಸಿ-ಹಾವೇರಿ ಮಧ್ಯೆ ರೈಲು ಮಾರ್ಗ ರೂಪಿಸಲು ರೈಲ್ವೆ ಇಲಾಖೆ ಯೋಜನೆ ರೂಪಿಸಿದೆ. ಯೋಜನೆ ಅನುಷ್ಠಾನ, ಮಾರ್ಗದ ಸರ್ವೆಗೆ ಅಸ್ತು ಸಹ ಆಗಿತ್ತು. ನಂತರ ಸರ್ವೇಗೆ ಒಂದಿಷ್ಟು ಅನುದಾನ ಸಹ ಬಿಡುಗಡೆಯಾಗಿತ್ತು. ಅಧಿಕಾರಿಗಳಿಂದ ಒಂದು ಸುತ್ತು ಪಕ್ಷಿ ನೋಟ ಸಹ ಆಗಿದೆ. ಆದರೆ ಸದ್ಯಕ್ಕೆ ಈ ಯೋಜನೆ ಯಾವ ಹಂತದಲ್ಲಿದೆ ಎಂಬುದಕ್ಕೆ ಮಾತ್ರ ಉತ್ತರ ಸಿಗುತ್ತಿಲ್ಲ.
ಹೊನ್ನಾವರ -ತಾಳಗುಪ್ಪ
ಹುಬ್ಬಳ್ಳಿ ಅಂಕೋಲಾ ಅಷ್ಟೇ ಅಲ್ಲ. ಜಿಲ್ಲೆಯಲ್ಲಿ ಇನ್ನೂ ಕೆಲ ರೈಲು ಮಾರ್ಗ ಅನುಷ್ಠಾನಕ್ಕೆ ಜನರ ಒತ್ತಾಯವಿದೆ. ಹೊನ್ನಾವರ-ತಾಳಗುಪ್ಪ ರೈಲು ಯೋಜನೆ ಕೇಂದ್ರ ಸರ್ಕಾರದ ಗಮನದಲ್ಲಿದೆ. ಈ ಯೋಜನೆ ಅನುಷ್ಠಾನಕ್ಕೆ ಸರ್ವೇ ನಡೆದಿದೆ. ಒಂದು ಹಂತದ ಸರ್ವೆ ಸಹ ಮುಗಿದಿದೆ. ಆದರೆ ಈ ಯೋಜನೆ ಸಹ ಕಡತದಿಂದ ಮೇಲೆದ್ದು ಬಂದಿಲ್ಲ. ಪೂರ್ಣವಾಗಿ ರದ್ದೂ ಆಗಿಲ್ಲ.
-ನಾಗರಾಜ್ ಹರಪನಹಳ್ಳಿ