Advertisement

ಡಿವಿಎಸ್‌ –ಸಿದ್ದು ಟ್ವೀಟ್‌ ಸಮರ

12:30 AM Jan 01, 2019 | |

ಬೆಂಗಳೂರು: ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಟ್ವೀಟ್‌ ಸಮರ ಮುಂದುವರಿದಿದೆ.

Advertisement

ಸಿದ್ದರಾಮಯ್ಯ ಕುದುರೆ ವ್ಯಾಪಾರಕ್ಕೆ ನಿಂತಿರುವ ಬಿಜೆಪಿ ಪ್ರತಿ ಶಾಸಕರಿಗೆ 25 ರಿಂದ 30 ಕೋಟಿ ರೂ. ಹಣ ನೀಡಿ ಖರೀದಿಸಲು ಮುಂದಾಗಿದೆ ಎಂದು ಆರೋಪಿಸಿದ್ದರು. ಅದಕ್ಕೆ ಟ್ವೀಟ್‌ ಮಾಡಿದ್ದ ಸದಾನಂದಗೌಡರು, ಕುದರೆ ಏರಲಾದವನು ಶೂರನೂ ಅಲ್ಲ, ಧೀರನೂ ಅಲ್ಲ. ನಿಮ್ಮ ಪಕ್ಷದ ಹುಳುಕು ಮುಚ್ಚಿಹಾಕಿಕೊಳ್ಳಲು ಇದೊಂದು ಹೊಸ ಪ್ರಹಸನ. 

ಮುಲಾಜಿನ ಸರ್ಕಾರ ರಚಿಸಲು ಮುಖ್ಯಮಂತ್ರಿಯವರಿಗೆ ಕೈ ಜೋಡಿಸಿ. ಕನ್ನಡಿಗರು ಮುಗ್ಧರು, ಮೂರ್ಖರು ಅಲ್ಲ. ನಿಮ್ಮ ಗಿಲೀಟು ಮಾತು ನಂಬಲ್ಲ ಎಂದು ಹೇಳಿದ್ದರು.

ಅದಕ್ಕೆ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ, ನಿಮ್ಮ ಅನುಭವ ಸರಿಯಾಗಿ ಹೇಳಿದ್ದೀರಿ. ಕುದುರೆ ಏರಲಾದವನು ಶೂರನೂ ಅಲ್ಲ, ಧೀರನೂ ಅಲ್ಲ. ಎಷ್ಟೆಂದರೂ ಹನ್ನೊಂದು ತಿಂಗಳಲ್ಲಿಯೇ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿದು ಓಡಿ ಹೋದವರಲ್ಲವೇ ನೀವು? ಎಂದು ಕಿಚಾಯಿಸಿದ್ದರು.

ಅದಕ್ಕೆ ಸದಾನಂದಗೌಡರು, ಮಾನ್ಯ ಸಿದ್ದರಾಮಯ್ಯನವರ ಗಮನಕ್ಕೆ. ಕಾಂಗ್ರೆಸ್‌ ಪಡೆದಿದ್ದು 78 ಕ್ಷೇತ್ರ. ನೀವು ಚಾಮುಂಡೇಶ್ವರಿಯಲ್ಲಿ ಸೋತು, ಬಾದಾಮಿಯಲ್ಲಿ ಕೆಲವು ಮತಗಳಿಂದ ಗೆದ್ದಿದ್ದೀರಿ. ನೀವು ಸದ್ಯಕ್ಕೆ ಮುಖ್ಯಮಂತ್ರಿಯಲ್ಲ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದು ಹೈಕಮಾಂಡ್‌ ದೆಸೆಯಿಂದ. 

Advertisement

ನಿಮ್ಮಿಂದ ಅಲ್ಲ. ಸದ್ಯಕ್ಕೆ ನಿಮ್ಮ ಸ್ಥಾನ ಸಮನ್ವಯ ಸಮಿತಿಗೆ ಸೀಮಿತ. ಅದೂ ಕೂಡ ಅಸ್ತಿತ್ವದಲ್ಲಿದ್ದರೆ, ನೀವು ಸದ್ಯಕ್ಕೆ ಉರುಳಿಸುತ್ತಿರುವ ರಾಜಕೀಯ ದಾಳ ಬಹಳ ಹಳೆಯದು. ಇನ್ನೊಬ್ಬರ ಮೇಲೆ ಆರೋಪ ಹೊರಿಸುವ ಮುನ್ನ ಬೆನ್ನು ನೋಡಿ. ಮುಲಾಜಿನಲ್ಲಿ ಹಗ್ಗದ ಮೇಲೆ ನಡೆಯುತ್ತಿರುವವರ ಕಾಳು ಎಳೆದು ಮುಸಿ ಮುಸಿ ನಗಬೇಡಿ. ಸಾಲ ಮನ್ನಾ ಏನಾಯಿತು ಎಂದು ಸ್ವಲ್ಪ ವಿಚಾರಿಸಿ, ಆಡಳಿತ ಪಕ್ಷದಲ್ಲಿ ವಿರೋಧ ಪಕ್ಷ ನಾಯಕ ಸ್ಥಾನ ನಿಮಗೆ ಸಿಕ್ಕಿದ್ದರೆ ನಾಡಿನ ಜನತೆಗೂ ತಿಳಿಸಿ. ಕಳೆದ ಏಳು ತಿಂಗಳ ರಾಜಕೀಯ ಬೆಳವಣಿಗೆಗಳು ನೀವು ಮರೆತಂತೆ ಕಾಣುತ್ತದೆ. ಹೀಗಾಗಿ, ಮತ್ತೂಮ್ಮೆ ಜ್ಞಾಪಿಸೋಣ ಎಂದುಕೊಂಡೆ ಎಂದು ಟ್ವೀಟ್‌ ಮಾಡಿದ್ದರು.

ಇದಕ್ಕೂ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದು, ಪ್ರಿಯ ಡಿವಿಎಸ್‌ ಅವರೇ ಊಟ ಮಾಡಿದ್ದೀರಾ? ಎಂದು ಕೇಳಿದರೆ ಮುಂಡಾಸು ಮೂವತ್ತು ಮೊಳ ಎಂದನಂತೆ ಹಳೆಯ ಕಾಲದ ಜಾಣನೊಬ್ಬ, ಹಂಗಾಯ್ತು ನಿಮ್‌ ಕತೆ. ನಿಮ್ಮದೇ ಪ್ರಶ್ನೆ ನಿಮಗೆ: ಕೊಟ್ಟ ಕುದುರೆ ಯಾಕೆ ಏರಿಲ್ಲ ಹೇಳಿ ಎಂದು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next