ಬೆಂಗಳೂರು : ಕೆ. ಆರ್. ಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಸರ್ಕಾರಿ (ಕೇಂದ್ರ) ಸ್ವಾಮ್ಯದ ಐಟಿಐ ಆಸ್ಪತ್ರೆಯನ್ನು ರಾಜ್ಯ ಸರ್ಕಾರದ ಸಹಕಾರದೊಂದಿಗೆ ಪುನಶ್ಚೇತನಗೊಳಿಸಿ ತಾತ್ಕಾಲಿಕವಾಗಿ ಕೋವಿಡ್ ಕೇಂದ್ರವಾಗಿ ಪರಿವರ್ತಿಸಲಾಗುವುದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಹೇಳಿದ್ದಾರೆ.
ಪತ್ರಿಕಾ ಹೇಳಿಕೆಯೊಂದರಲ್ಲಿ ಈ ವಿಷಯ ತಿಳಿಸಿದ ಸಚಿವರು ತಾವು ಈಗಾಗಲೇ ಸಂಬಂಧಪಟ್ಟ ಸಚಿವರಿಗೆ (ರವಿಶಂಕರ್ ಪ್ರಸಾದ್) ಈ ಬಗ್ಗೆ ಪತ್ರ ಬರೆದಿದ್ದು ಅಗತ್ಯ ಸಹಕಾರ ದೊರೆಯುವ ವಿಶ್ವಾಸವಿದೆ ಎಂದರು.
ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇರುವ ಆಸ್ಪತ್ರೆಗಳು ಸಾಲುತ್ತಿಲ್ಲ. ಹೆಚ್ಚೆಚ್ಚು ತಾತ್ಕಾಲಿಕ ಕೋವಿಡ್ ಕೇಂದ್ರಗಳನ್ನು ಕಲ್ಪಿಸುವುದು ಅನಿವಾರ್ಯವಾಗಿದೆ. ಕೆ ಆರ್ ಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಐಟಿಐ ಆಸ್ಪತ್ರೆಯು ವಿಸ್ತಾರವಾದ ಸ್ಥಳಾವಕಾಶ ಹೊಂದಿದೆ. ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ಅವರೊಂದಿಗೆ ಈ ಬಗ್ಗೆ ಚರ್ಚಿಸಲಾಗಿದೆ. ಸ್ಥಳೀಯ ಶಾಸಕರೂ ಆಗಿರುವ ಅವರು ಈ ಬಗ್ಗೆ ಸಂಪೂರ್ಣ ಸಹಕಾರದ ಭರವಸೆ ನೀಡಿದ್ದಾರೆ. ಆಕ್ಸಿಜಿನೇಟೆಡ್ ಹಾಸಿಗೆಗಳು, ತೀವ್ರ ನಿಗಾ ಘಟಕ ಸೇರಿದಂತೆ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಅಗತ್ಯವಾದ ಎಲ್ಲ ಶುಶ್ರೂಷಾ ಸೌಲಭ್ಯ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ಕೇಂದ್ರ ಸಚಿವರು ತಿಳಿಸಿದರು.
ಇದನ್ನೂ ಓದಿ :ಜನರ ಪ್ರಾಣ ಉಳಿಸಲು ಮೊಬೈಲ್ ಆಕ್ಸಿಜನ್ ಪೂರೈಕೆ ವ್ಯವಸ್ಥೆ ಜಾರಿಗೆ ತರಲು ಚಿಂತನೆ : ಬೊಮ್ಮಾಯಿ
ಸ್ಯಾನಿಟೈಸೇಶನ್: ಈ ಮಧ್ಯೆ ಸಚಿವರು ಇಂದು ಹೆಬ್ಬಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಿವಿಧ ವಾರ್ಡುಗಳಲ್ಲಿ ರೋಗನಿರೋಧಕ ದ್ರಾವಣ ಸಿಂಪರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಜೆಪಿ ಹೆಬ್ಬಾಳ ಮಂಡಲವು ಸದಾಸ್ಮಿತ ಪ್ರತಿಷ್ಠಾನ (ಡಿವಿಎಸ್ ಪೋಷಿತ) ಮತ್ತು ವೈಏಎನ್ ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ಈ ಕಾರ್ಯಕ್ರಮ ಕೈಗೊಂಡಿದೆ.
ಕೋವಿಡ್ ಕಿಟ್: ಅದೇ ರೀತಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ 20 ಸಾವಿರ ಕೋವಿಡ್ ಔಷಧ ಕಿಟ್’ಗಳನ್ನು ವಿತರಿಸುವ ಕಾರ್ಯಕ್ರಮಕ್ಕೂ ಚಾಲನೆ ನೀಡಲಾಯಿತು. ಇದರಲ್ಲಿ ಕೋವಿಡ್ ಚಿಕಿತ್ಸೆಗೆ ಬಳಸುವ ಸಾಮಾನ್ಯ ಮಾತ್ರೆಗಳು, ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ವಿಟಾಮಿನ್ ಮಾತ್ರಗಳು, ನಾಲ್ಕು ಎನ್-95 ಮಾಸ್ಕುಗಳು, ಸ್ಯಾನಿಟೈಸರ್’ಗಳು ಇರಲಿದ್ದು ಗೃಹಶುಶ್ರೂಷೆಯಲ್ಲಿ ಇರುವ ಕೋವಿಡ್ ಸೋಂಕಿತರು ಇದನ್ನು ಬಳಸಬಹುದಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸದಾನಂದ ಗೌಡ – ಮೊದಲ ಹಂತದಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವ 10 ಸಾವಿರ ಬಡವರಿಗೆ ಈ ಕೋವಿಡ್ ಕಿಟ್’ಗಳನ್ನು ವಿತರಿಸಲಾಗುವುದು. ಎರಡನೇ ಹಂತದಲ್ಲಿಯೂ 10 ಸಾವಿರ ಕಿಟ್’ಗಳನ್ನು ವಿತರಿಸಲಾಗುವುದು. ನಿಜಕ್ಕೂ ನೆರವಿನ ಅವಶ್ಯಕತೆ ಇರುವವರು ಇದರ ಲಾಭ ಪಡೆಯಬೇಕು ಎಂದರು. ವಿಧಾನ ಪರಿಷತ್ ಸದಸ್ಯ ಡಾ ವೈ ಎನ್ ನಾರಾಯಣಸ್ವಾಮಿ, ಜಿಲ್ಲಾಧ್ಯಕ್ಷ ಬಿ ನರಾಯಣ, ಮಂಡಲಾಧ್ಯಕ್ಷ ರಿಷಿಕುಮಾರ್ ಪಟೇಲ್, ಬಿಜೆಪಿ ವಾರ್ಡ್ ಅಧ್ಯಕ್ಷರುಗಳು, ಮಾಜಿ ಬಿಬಿಎಂಪಿ ಸದಸ್ಯರು, ಪಕ್ಷದ ಪ್ರಮುಖರು, ಯುವಮೊರ್ಚಾ ಪದಾಧಿಕಾರಿಗಳು ಉಪಸ್ಥಿತರಿದ್ದರು.