Advertisement

ಡಿ.ವಿ., ನಳಿನ್‌, ಶೋಭಾಗೆ ಸೋಲು ಖಚಿತ: ಡಿಕೆಶಿ

12:44 PM Apr 02, 2019 | Team Udayavani |
ಪುತ್ತೂರು : ಜಿಲ್ಲೆಯ ಜನತೆಯ ಬೆಂಬಲದ ಫಲವಾಗಿ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡ ಡಿ.ವಿ. ಸದಾನಂದ ಗೌಡ, ಶೋಭಾ ಕರಂದ್ಲಾಜೆ ಹಾಗೂ ನಳಿನ್‌ ಕುಮಾರ್‌ ಕಟೀಲು ಅವರು ಸಂಸತ್‌ ಸದಸ್ಯರಾಗಲು ಅರ್ಹರಲ್ಲ. ಈಗಲಾದರೂ ಡಿ.ವಿ. ಸದಾನಂದ ಗೌಡರು ರಾಜೀನಾಮೆ ನೀಡಲಿ ಎಂದು ಸಚಿವ ಡಿ.ಕೆ. ಶಿವಕುಮಾರ್‌ ಆಗ್ರಹಿಸಿದ್ದಾರೆ.
ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿ ಮಿಥುನ್‌ ರೈ ಪರ ಪುತ್ತೂರಿನ ದರ್ಬೆಯಲ್ಲಿ ನಡೆದ ಪ್ರಚಾರ ಸಭೆಯನ್ನು ಅವರು ಉದ್ಘಾಟಿಸಿದರು. ಜಿಲ್ಲೆಯ ಹೆಮ್ಮೆಯ ಶಕ್ತಿಯಾಗಿ ವಿಜಯ ಬ್ಯಾಂಕ್‌ನ್ನು ಗುಜರಾತ್‌ ಮೂಲದ ಬರೋಡಾ ಬ್ಯಾಂಕ್‌ ಜತೆ ವಿಲೀನ ಮಾಡುವಾಗಲೂ ಇವರು ಮಾತನಾಡಿಲ್ಲ. ಈ ಜಿಲ್ಲೆಯ ಯಾವುದೇ ಅಭಿವೃದ್ಧಿಗೆ ಪ್ರಯತ್ನ ನಡೆಸಿಲ್ಲ. ಮತದಾರನ ತೀರ್ಪು ಬುಲೆಟ್‌ಗಿಂತಲೂ ತೀವ್ರವಾಗಿರುವುದರಿಂದ ಈ ಮೂವರು ಸಂಸದರಿಗೆ ಇದು ಕೊನೆಯ ಚುನಾವಣೆಯಾಗಲಿದೆ ಎಂದು ಹೇಳಿದರು.
ಬಿಜೆಪಿಯವರು ದೇಶದ ಪ್ರೇಮಿಗಳಲ್ಲ, ದ್ವೇಷದ ಪ್ರೇಮಿಗಳು. ವಿಭಜನೆ ಮಾಡುವುದೇ ಇವರ ಕೆಲಸ ಎಂದು ಆರೋಪಿಸಿದ ಡಿ.ಕೆ.ಶಿವಕುಮಾರ್‌, ಯಾವುದೇ ಷರತ್ತು ಇಲ್ಲದೆ ಜಾತ್ಯಾತೀತ ತತ್ತÌದ ಆಧಾರದಲ್ಲಿ ರಾಜ್ಯದಲ್ಲಿ ಸರಕಾರ ರಚನೆಯಾಗಿದೆ. ನಾವೆಲ್ಲರೂ ಒಂದೇ ಎಂಬ ಪರಿಕಲ್ಪನೆಯ ಆಡಳಿತ ನೀಡುತ್ತಿರುವ ಮೈತ್ರಿ ಸರಕಾರದ ಜಿಲ್ಲೆಯ ಅಭ್ಯರ್ಥಿ ಮಿಥುನ್‌ ರೈ ಅವರನ್ನು ಗೆಲ್ಲಿಸಿಕೊಡಬೇಕು ಎಂದು ವಿನಂತಿಸಿದರು.
ಚೌಕೀದಾರನ ಅಗತ್ಯವಿಲ್ಲ
ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ವಿದ್ಯಾವಂತರ, ಬುದ್ಧವಂತರ ಜಿಲ್ಲೆಯಿಂದ ಸೂಕ್ತ ಆಯ್ಕೆ ಆಗಬೇಕಿದೆ. ಯಾರಿಗೂ ಚೌಕೀದಾರನ ಅಗತ್ಯವಿಲ್ಲ. ಬಂಡವಾಳಶಾಹಿಗಳು, ಶ್ರೀಮಂತರಿಗೆ ಮೋದಿಯವರು ಚೌಕೀದಾರ ಆಗಿರುವುದರಿಂದ ಅವರು ಶ್ರೀಮಂತರ ಚೌಕೀದಾರ ಎಂದು ವ್ಯಂಗ್ಯವಾಡಿದರು.
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಮಾತನಾಡಿ, ಭವಿಷ್ಯದ ಸಮಾನತೆಯ, ಸೌಹಾರ್ದದ ಭಾರತಕ್ಕಾಗಿ ಬದಲಾವಣೆ ಆಗಬೇಕು. ಭಾವನಾತ್ಮಕ ವಿಚಾರಗಳಿಗೆ ತಲೆಕೆಡಿಸಿಕೊಳ್ಳದೆ ಆತ್ಮಾವಲೋಕನ ಮಾಡಿಕೊಂಡು ಮತ ಚಲಾಯಿಸಬೇಕು. ಎಲ್ಲ ಅರ್ಹತೆಗಳನ್ನು ಹೊಂದಿರುವ ಯುವಕ ಮಿಥುನ್‌ ರೈ ಅವರನ್ನು ಗೆಲ್ಲಿಸಬೇಕು ಎಂದು ವಿನಂತಿಸಿದರು.
ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಎಂ.ಬಿ. ಸದಾಶಿವ ಮಾತನಾಡಿ, ಮತೀಯ ಶಕ್ತಿಗಳ ಒಧ್ದೋಡಿಸುವ ಸಂಕಲ್ಪವನ್ನು ನಾವು ಮಾಡಬೇಕು. ಜನರ ರಕ್ಷಣೆ, ಅಭಿವೃದ್ಧಿಗಾಗಿ ಈ ಬಾರಿ ಬಿಜೆಪಿಯನ್ನು ದೂರ ಸರಿಸಬೇಕು ಎಂದು ಹೇಳಿದರು. ಮಾಜಿ   ಶಾಸಕಿ  ಶಕುಂತಳಾ ಟಿ. ಶೆಟ್ಟಿ, ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ  ಅವರು ಮಿಥುನ್‌ ರೈ ಪರ ಮತ ಚಲಾಯಿಸುವಂತೆ ಕಾರ್ಯಕರ್ತರಿಗೆ ವಿನಂತಿಸಿದರು.ಅಭ್ಯರ್ಥಿ ಮಿಥುನ್‌ ರೈ ಮತಯಾಚನೆ ನಡೆಸಿದರು.
ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹಾಗೂ ವಿಧಾನ ಪರಿಷತ್‌ ಸದಸ್ಯ ಹರೀಶ್‌ ಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಅಮರನಾಥ ಶೆಟ್ಟಿ, ಜಿಲ್ಲಾಧ್ಯಕ್ಷ ಮಹಮ್ಮದ್‌ ಕುಂಞಿ, ಮಾಜಿ ಶಾಸಕ ಮೊದೀನ್‌ ಬಾವಾ, ಎಐಸಿಸಿ ಸದಸ್ಯ ಶ್ರೀನಿವಾಸ್‌, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಸವಿತಾ ರಮೇಶ್‌, ಎಂ.ಎಸ್‌. ಮಹಮ್ಮದ್‌, ಮುಖಂಡರಾದ ಡಾ| ರಘು, ಹೇಮನಾಥ ಶೆಟ್ಟಿ, ಅನಿತಾ ಹೇಮನಾಥ ಶೆಟ್ಟಿ, ರವೀಂದ್ರದಾಸ್‌, ಮಂಜುಳಾ ಮಾಧವ ಮಾವೆ, ಧನಂಜಯ ಅಡ³ಂಗಾಯ, ಕಣಚೂರು ಮೋನು ಹಾಜಿ, ಯಶೋದಾ ಆಚಾರ್ಯ, ಭರತ್‌ ಮುಂಡೋಡಿ, ಅಶ್ರಫ್‌ ಕಲ್ಲೇಗ ಸೇರಿದಂತೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷದ ಮುಖಂಡರು, ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸೇರ್ಪಡೆ
ಸಮಾವೇಶದಲ್ಲಿ ಹಲವು ಯುವಕರು ವಿವಿಧ ಪಕ್ಷಗಳಿಂದ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಸಚಿವ ಡಿ.ಕೆ. ಶಿವಕುಮಾರ್‌ ಪಕ್ಷದ ಧ್ವಜ ನೀಡಿ ಸ್ವಾಗತಿಸಿದರು. ಪುತ್ತೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹಮ್ಮದ್‌ ಬಡಗನ್ನೂರು ಸ್ವಾಗತಿಸಿ, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್‌ ರೈ ಕಾರ್ಯಕ್ರಮ ನಿರ್ವಹಿಸಿದರು.
ಮೆರವಣಿಗೆ
ಆರಂಭದಲ್ಲಿ ಬೊಳುವಾರು ಹಳೆಯ ಮಯೂರ ಚಿತ್ರಮಂದಿರದ ಬಳಿಯಿಂದ ದರ್ಬೆಯ ತನಕ ಪ್ರಚಾರದ ಮೆರವಣಿಗೆ ನಡೆಯಿತು. ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಸಹಿತ ಹಲವು ಮುಖಂಡರು, ಕಾರ್ಯಕರ್ತರು ಪಾಲ್ಗೊಂಡರು.
ಎಲ್ಲದಕ್ಕೂ ಉತ್ತರ ನೀಡುವೆ
ವಿನಾಕಾರಣ ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಶತಾಯಗತಾಯ ಪ್ರಯತ್ನ ನಡೆಸುತ್ತಿರುವ ಬಿಜೆಪಿಯವರ ವಂಚನೆಗಳ ಕುರಿತೂ ದಾಖಲೆಗಳನ್ನು ಸಿದ್ಧಪಡಿಸಿಕೊಂಡಿದ್ದೇನೆ. ಈ ನಿಟ್ಟಿನಲ್ಲಿ ನಾಲ್ವರು ವಕೀಲರೂ ಜತೆಗಿದ್ದಾರೆ. ಯಾರಿಗೂ ಹೆದರುವ ಮಗ ಡಿ.ಕೆ.ಶಿ. ಅಲ್ಲ. ಎಲ್ಲದಕ್ಕೂ ಉತ್ತರ ನೀಡುತ್ತೇನೆ. ಕೋರ್ಟು ನೀಡುವ ತೀರ್ಪಿಗೆ ಬದ್ಧನಾಗಿದ್ದೇನೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.
Advertisement

Udayavani is now on Telegram. Click here to join our channel and stay updated with the latest news.

Next