ಕಲಬುರಗಿ: ಸಮಸ್ಯೆಗಳ ಪರಿಹಾರಕ್ಕಾಗಿ, ನ್ಯಾಯಕ್ಕಾಗಿ ದೂರು ಸಲ್ಲಿಸಲು, ವ್ಯಾಜ್ಯ ಪರಿಹಾರಕ್ಕಾಗಿ ಪೊಲೀಸ್ ಠಾಣೆಗೆ ಬರುವ ಸಾರ್ವಜನಿಕರೊಡನೆ ಜನಸ್ನೇಹಿಯಾಗಿ ವರ್ತಿಸುವುದು ಪೊಲೀಸರ ಆದ್ಯ ಕರ್ತವ್ಯವಾಗಿದೆ. ಜಿಲ್ಲೆಯಲ್ಲಿ ಪೊಲೀಸ್ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಣೆ ಮಾಡುವ ಉದ್ದೇಶದಿಂದ “ಜನಸ್ನೇಹಿ ಪೊಲೀಸ್ ಅಭಿಯಾನ” ಆರಂಭಿಸಲಾಗಿದೆ ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟರು.
ಸೊಮವಾರ ಕಲಬುರಗಿ ನಗರದ ಪೊಲೀಸ್ ಭವನದಲ್ಲಿ ಜನಸ್ನೇಹಿ ಅಭಿಯಾನ ಅಂಗವಾಗಿ ಪೊಲೀಸ್ ಠಾಣೆಯಲ್ಲಿ ಪೊಲೀಸರು ಸಾರ್ವಜನಿಕರೊಂದಿಗೆ ಸ್ಪಂದಿಸುವ ಕುರಿತು ಸಾರ್ವಜನಿಕರೇ ಮುಕ್ತವಾಗಿ ಪ್ರತಿಕ್ರಿಯೆಸುವ “ಪೊಲೀಸ್ ಫೀಡ್ ಬ್ಯಾಕ್ ಆಪ್” ಕ್ಯೂ ಆರ್ ಕೋಡ್ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ನಡೆ ನುಡಿಯಲ್ಲಿ ಪಾರದರ್ಶಕತೆ, ಕಟ್ಟುನಿಟ್ಟಿನ ಕರ್ತವ್ಯ ಪ್ರಜ್ಞೆ, ನಮ್ಮ ವರ್ತನೆ ಸರಿ ಇದ್ದಾಗ ಮಾತ್ರ ಜನಸಾಮಾನ್ಯರು ನಮ್ಮನ್ನು ನಂಬುತ್ತಾರೆ ಎಂದರು.
ಪೊಲೀಸ್ ವ್ಯವಸ್ಥೆಯನ್ನು ಜನ ಸ್ನೇಹಿಯಾಗಿಸುವತ್ತ ಮಹತ್ವಾಕಾಂಕ್ಷಿ ಹೆಜ್ಜೆ ಇರಿಸಲಾಗಿದೆ. ಸಮಸ್ಯೆಗಳ ಪರಿಹಾರಕ್ಕಾಗಿ ಠಾಣೆಗೆ ಬರುವ ಜನಸಾಮಾನ್ಯರು ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳ ವರ್ತನೆ ಕುರಿತಂತೆ ಕ್ಯೂ.ಆರ್.ಕೋಡ್ ಮೂಲಕ ದಾಖಲಿಸಬಹುದಾಗಿದೆ. ಈ ಕೋಡ್ ಅಳವಡಿಕೆ ಹಿಂದೆ ನಿಮ್ಮ ಕರ್ತವ್ಯ ನಿರ್ವಹಣೆ ಕಣ್ಗಾವಲು ಜೊತೆಗೆ ಜನಸಾಮಾನ್ಯರ ಹಿತಾಸಕ್ತಿ ಸಿಗುತ್ತದೆ. ಕ್ಯೂ.ಆರ್.ಕೋಡನ್ನು ಕಲಬುರಗಿ ನಗರದ ಮತ್ತು ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಕಡ್ಡಾಯವಾಗಿ ಸಾರ್ವಜನಿಕರಿಗೆ ಕಾಣುವಂತೆ ಪ್ರವೇಶ ದ್ವಾರದಲ್ಲಿಯೇ ಪೋಸ್ಟರ್ ಅಂಟಿಸಬೇಕು. ಅಲ್ಲದೇ ಜಿಲ್ಲೆಯ ಎಲ್ಲಾ ಸಾರ್ವಜನಿಕ ಪ್ರದೇಶಗಳಲ್ಲಿ ಕೂಡ ಇಲಾಖೆ ವತಿಯಿಂದ ಲಗತ್ತಿಸಬೇಕು ಎಂದರು.
ಜನಸಾಮಾನ್ಯರೊಂದಿಗೆ ಪೊಲೀಸರು ಉತ್ತಮ ಭಾಂದವ್ಯ ಹೊಂದಿದಾಗ ಮಾತ್ರ ಸಮಾಜದಲ್ಲಿ ಏನು ನಡೆಯುತ್ತಿದೆ ಎನ್ನುವ ಮಾಹಿತಿ ಸಿಗುತ್ತದೆ ಎಂದ ಸಚಿವರು, ಜನರ ನಡುವೆ ನಡೆಯುವ ಜಗಳ ಮನಸ್ತಾಪ ಮತ್ತು ಕೋಮುಗಲಭೆಯನ್ನು ತಡೆಯಲು ಗುಪ್ತಚರ ಇಲಾಖೆಗೆ ಕ್ಯೂ.ಆರ್.ಕೋಡ್ ವ್ಯವಸ್ಥೆ ಸಹಕಾರಿಯಾಗಲಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮತ್ತಷ್ಟು ಜನಸ್ನೇಹಿಯಾಗುವ ಅನಿವಾರ್ಯತೆ ಇದೆ ಎಂದು ಅವರು ಒತ್ತಿ ಹೇಳಿದರು.
ಪೊಲೀಸರು ಒತ್ತಡದಲ್ಲಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಕರ್ತವ್ಯ ನಿರ್ವಹಣೆಯಲ್ಲಿ ಕೆಲ ಪೊಲೀಸರು ಅನಾರೋಗ್ಯಕ್ಕೂ ತುತ್ತಾಗಿದ್ದಾರೆ. ಒಂದೆಡೆ ಕರ್ತವ್ಯ, ಮತ್ತೊಂದೆಡೆ ವಿಐಪಿಗಳ ಭದ್ರತೆಯ ನಡುವೆಯೂ ಕೆಲಸ ಮಾಡಬೇಕಾಗುತ್ತದೆ. ನಿಮ್ಮ ಸಮಸ್ಯೆಗಳ ಪರಿಹಾರಕ್ಕೆ ನಿಮ್ಮೊಂದಿಗೆ ಸರ್ಕಾರ ಸದಾ ಇದೆ ಎಂದು ಅಭಯ ನೀಡಿದರು.
ಬೆಂಗಳೂರಿನಲ್ಲಿ ಈ ತರಹದ ಕೋಡ್ ಅವಳವಡಿಕೆ ಆಗಿದೆ. ಇದೀಗ ಕಲಬುರಗಿಯಲ್ಲಿ ಈ ಕೋಡ್ ಅಳವಡಿಸಲಾಗುತ್ತಿದೆ. ಯೋಜನೆ ಸಾಕಾರಕ್ಕೆ ಕಾರಣೀಕರ್ತರಾದ ಗೃಹ ಸಚಿವ ಡಾ.ಜಿ.ಪರಮೇಶ್ವರ ಹಾಗೂ ಡಿ.ಜಿ.ಪಿ. ಅವರಿಗೆ ಧನ್ಯವಾದಗಳು ತಿಳಿಸುವೆ ಎಂದು ಸಚಿವರು, ಇದೇ ತರಹದ ಕ್ಯೂ.ಆರ್. ಕೋಡ್ ನ್ನು ಸಚಿವರ ಕಾರ್ಯಾಲಯದಲ್ಲಿ ಕೂಡಾ ಅಳವಡಿಸಲಾಗುವುದು ಎಂದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಗುಲಬರ್ಗಾ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ ಮತ್ತು ವಿಧಾನ ಪರಿಷತ್ತಿನ ಶಾಸಕ ತಿಪ್ಪಣ್ಣಪ್ಪ ಕಮಕನೂರು ಅವರು ಮಾತನಾಡಿದರು. ಎಸ್.ಪಿ.ಇಶಾ ಪಂತ್ ಅವರು ಕ್ಯೂ.ಆರ್.ಕೋಡ್ ಕಾರ್ಯವೈಖರು ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ಈಶಾನ್ಯ ವಲಯದ ಪೊಲೀಸ್ ಮಹಾನಿರೀಕ್ಷಕ ಅನುಪಮ್ ಅಗರವಾಲ್, ಕಲಬುರಗಿ ನಗರ ಪೊಲೀಸ್ ಆಯುಕ್ತ ಆರ್. ಚೇತನ, ಡಿಸಿಪಿ ಅಡ್ಡೂರು ಶ್ರೀನಿವಾಸಲು, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಜಿಪಂ ಸಿ.ಇ.ಓ ಭಂವರ ಸಿಂಗ್ ಮೀನಾ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಇದ್ದರು.