Advertisement

ಪಿಯು ಉಪನ್ಯಾಸಕರಿಗೆ ಹೋರಾಟಕ್ಕಿಂತ ಕರ್ತವ್ಯ ಮುಖ್ಯ

07:23 AM Mar 20, 2019 | Team Udayavani |

ಚಿಕ್ಕಬಳ್ಳಾಪುರ: ಪದವಿ ಪೂರ್ವ ಕಾಲೇಜು ಉಪನ್ಯಾಸಕರು ತಮ್ಮ ಹಕ್ಕುಗಳನ್ನು ಪಡೆಯಲು ಸಂಘಟಿತರಾಗಬೇಕು. ಹೋರಾಟವನ್ನು ನಡೆಸಬೇಕು. ಆದರೆ ಕರ್ತವ್ಯ ಪ್ರಜ್ಞೆಯನ್ನು ರೂಢಿಸಿಕೊಂಡು ಕೆಲಸಕ್ಕೆ ಮೊದಲ ಆದ್ಯತೆ ನೀಡಬೇಕೆಂದು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್‌.ಜನಾರ್ದನ್‌ ಪಿಯು ಮೌಲ್ಯಮಾಪನ ಬಹಿಷ್ಕರಿಸುವುದಾಗಿ ಹೇಳುತ್ತಿರುವ ಉಪನ್ಯಾಸಕರಿಗೆ ಕಿವಿಮಾತು ಹೇಳಿದರು.

Advertisement

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸೋಮವಾರ ರಾಜ್ಯ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಉಪ ನಿರ್ದೇಶಕರಿಗೆ, ಮತ್ತು ನಿವೃತ್ತ  ಪ್ರಾಂಶುಪಾಲರಿಗೆ ಹಾಗೂ ಉಪನ್ಯಾಸಕರಿಗೆ ಸನ್ಮಾನ ಹಾಗೂ ಉಪನ್ಯಾಸಕರ ಸಂಘದ ಚುನಾವಣೆಯಲ್ಲಿ ಆಯ್ಕೆಯಾದ ನೂತನ ಪದಾಧಿಕಾರಿಗಳ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ನಮ್ಮ ಹಕ್ಕುಗಳಿಗೆ ನಾವು ಹೋರಾಡುವುದರಲ್ಲಿ ತಪ್ಪಿಲ್ಲ. ಆದರೆ ನಮ್ಮ ಕರ್ತವ್ಯಗಳಿಗೂ ಚ್ಯುತಿ ಬಾರದಂತೆ ನಾವು ಕೆಲಸ ಮಾಡಬೇಕಿದೆ. ಈ ಹಿಂದೆ ರಾಜ್ಯದಲ್ಲಿ ಪದವಿ ಪೂರ್ವ ಉಪನ್ಯಾಸಕರ ಸಂಘ ಬಲಿಷ್ಟವಾಗಿಲ್ಲದಿದ್ದಾಗಲೂ ಅನೇಕ ಹೋರಾಟಗಳನ್ನು ನಡೆಸಲಾಗಿದೆ. ಬಲಿಷ್ಟವಾದ ಮೇಲೂ ಹೋರಾಟಗಳಿಗೆ ಯಶಸ್ಸು ಸಿಕ್ಕಿಲ್ಲ. ಹೋರಾಟದ ಜೊತೆಗೆ ಉಪನ್ಯಾಸಕರಿಗೆ ಕರ್ತವ್ಯ ಪ್ರಜ್ಞೆ  ಮುಖ್ಯ.

3000 ವಿದ್ಯಾರ್ಥಿಗಳ ಸಂಖ್ಯೆ ಇದ್ದ ಕಾಲೇಜುಗಳಲ್ಲಿ ಈಗ 800  ಮಕ್ಕಳು ಇದ್ದಾರೆ. ಪದವಿ ಪೂರ್ವ ಕಾಲೇಜುಗಳು ಉಳಿದರೆ ಮಾತ್ರ ಉಪನ್ಯಾಸಕರಿಗೆ ಉಳಿಗಾಲ ಎಂಬ ಅರಿವು ಅವಶ್ಯ. ಸರ್ಕಾರಿ ಪಿಯು ಕಾಲೇಜಿನಲ್ಲಿ ಇದ್ದಿದ್ದಕ್ಕೆ ನಾನು ಉಪನ್ಯಾಸಕನಿಂದ ಪ್ರಾಂಶುಪಾಲನಾಗಿ, ಇಲಾಖೆಯ ಉಪ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗುತ್ತಿದ್ದೇನೆ. ಮೊದಲು ಸರ್ಕಾರಿ ಕಾಲೇಜುಗಳ ಉಳಿವಿಗೆ ಶ್ರಮಿಸಬೇಕು. ಇಲ್ಲಿ ಬಹುತೇಕ ಬಡ, ನಿರ್ಗತಿಕ ಮಕ್ಕಳು ಸೇರುತ್ತಾರೆ. ಅವರನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು ಎಂದರು.

ಬೇಸಿಗೆ ರಜೆ ಕಡಿತಕ್ಕೆ ಆಕ್ರೋಶ: ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಮುನಿರೆಡ್ಡಿ ಮಾತನಾಡಿ, ರಾಜ್ಯದ ಪದವಿ ಪೂರ್ವ ಕಾಲೇಜು ಉಪನ್ಯಾಸಕರಿಗೆ  ಇಲಾಖೆ  ತಿಂಗಳ ಕಾಲ ಬೇಸಿಗೆ ರಜೆಯನ್ನು  ಕಡಿತಗೊಳಿಸಿದೆಯೆಂದು  ಕಿಡಿಕಾರಿದರು. ಪಿಯು ಉಪನ್ಯಾಸಕ ಸಂಘವೇ ಇಲ್ಲದೇ ಹೋಗಿದ್ದರೆ ಇಲಾಖೆ ಉಪನ್ಯಾಸಕರನ್ನು ಇನ್ನಷ್ಟು ತುಳಿದು ಬಿಡುತ್ತಿತ್ತು. ನಮ್ಮ  ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸುವ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕು.

Advertisement

ಇಲ್ಲದಿದ್ದರೆ ಪಿಯುಸಿ ಮೌಲ್ಯಮಾಪನ ಬಹಿಷ್ಕಾರ ಅನಿರ್ವಾಯ ಎಂದು ಎಚ್ಚರಿಸಿದರು. ಒಂದರೆಡು ದಿನದಲ್ಲಿ ಇಲಾಖೆ ಉಪನ್ಯಾಸಕರ ಪರವಾದ ನಿಲುವು ಹೊಂದಿದ್ದಲ್ಲಿ ರಾಜ್ಯ ಸಂಘ ಕೈಗೊಳ್ಳುವ ತಿರ್ಮಾನಕ್ಕೆ ಜಿಲ್ಲಾ ಸಂಘ ಬದ್ಧವಾಗಿರಲಿದೆ ಎಂದರು. ಜಿಲ್ಲೆಯಲ್ಲಿ ಹಲವು ವರ್ಷಗಳಿಂದಲೂ ಉಪನ್ಯಾಸಕರ ಸಂಘಕ್ಕೆ ಅಧ್ಯಕ್ಷರು ಇರಲಿಲ್ಲ. ಆದರೆ ಜಿಲ್ಲೆಯ ಉಪನ್ಯಾಸಕ ಸಂಘವನ್ನು ಬಲಿಷ್ಠಗೊಳಿಸಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿಕ್ಕಬಳ್ಳಾಪುರದ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಎನ್‌.ಮಂಜುನಾಥ ವಹಿಸಿದ್ದರು.

ವೇದಿಕೆಯಲ್ಲಿ ಕೋಲಾರ ಜಿಲ್ಲಾ ಪಿಯು ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ನಟರಾಜ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬೋಜಿರೆಡ್ಡಿ, ಚಿಕ್ಕಬಳ್ಳಾಪುರ ಕಾರ್ಯಾಧ್ಯಕ್ಷ ಎಂ.ಜಿ.ರವಿಚಂದ್ರ, ಜಿಲ್ಲಾ ಕಾರ್ಯದರ್ಶಿ ಎಚ್‌.ಸಿ.ಬಸವರಾಜ್‌, ಜಿಲ್ಲಾ ಖಜಾಂಚಿ ನಂಜರೆಡ್ಡಿ, ಚಿಂತಾಮಣಿ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಆರ್‌.ರಾಮಸುಬ್ಟಾರೆಡ್ಡಿ, ಖಜಾಂಚಿ ನಾಗಪ್ಪ, ಶಿಡ್ಲಘಟ್ಟ ತಾಲೂಕು ಅಧ್ಯಕ್ಷ ಹೆಚ್‌.ವಿ.ಶಿವಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ, ಕಾರ್ಯಾಧ್ಯಕ್ಷ ಸಿ.ವೆಂಕಟಶಿವಾರೆಡ್ಡಿ ಮತ್ತಿತರರು ಹಾಜರಿದ್ದರು.

ನಿವೃತ್ತಿಯಾಗಲಿರುವ ಉಪ ನಿರ್ದೇಶಕರಿಗೆ ಸನ್ಮಾನ: ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್‌.ಜನಾರ್ದನ್‌, ಗೌರಿಬಿದನೂರು ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಡಿ.ವಿ.ಬ್ರಹ್ಮರಾಯಪ್ಪ, ಚಿಕ್ಕಬಳ್ಳಾಪುರದ ಪಂಚಗಿರಿ ಪಿಯು ಕಾಲೇಜಿನ ಪ್ರಾಂಶುಪಾಲೆ ಸಿ.ಆರ್‌.ಕೋಮಲಾದೇವಿ.

ಚಿಂತಾಮಣಿಯ ಕೈವಾರದ ಸರ್ಕಾರಿ ಕಾಲೇಜಿನ ಉಪನ್ಯಾಸಕ ನೆರೇಂದ್ರ ಸೇರಿದಂತೆ ಸೇವೆಯಿಂದ ನಿವೃತ್ತಿಯಾಗುತ್ತಿರುವ ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರನ್ನು ಹಾಗೂ ಉಪನ್ಯಾಸಕರನ್ನು ಉಪನ್ಯಾಸಕರ ಸಂಘದಿಂದ ನೆನೆಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಇದೇ ವೇಳೆ 2019 ರಿಂದ 2024ನೇ ಸಾಲಿನ ಉಪನ್ಯಾಸಕ ಸಂಘದ ಚುನಾವಣೆಯಲ್ಲಿ ಆಯ್ಕೆಯಾದ ತಾಲೂಕು ಘಟಕದ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next