ಕೋಲಾರ: ನಿಮ್ಮ ಕುಟುಂಬಗಳಿಗೆ ಅನ್ನ ನೀಡುತ್ತಿರುವ ಬ್ಯಾಂಕ್‌ನ ಪ್ರಗತಿಗೆ ನಿಮ್ಮ ಕೊಡುಗೆ ಏನು ಎಂಬುದರ ಕುರಿತು ಆತ್ಮಾವಲೋಕನ ಮಾಡಿಕೊಳ್ಳಿ, ಠೇವಣಿ ಸಂಗ್ರ ಹ, ಸಾಲ ವಸೂಲಾತಿ, ಗಣಕೀಕೃತ ಲೆಕ್ಕಪರಿ ಶೋಧನೆಗೆ ನೀಡಿರುವ ಗುರಿ ಸಾಧಿಸಲು ಬದ್ಧತೆಯಿಂದ ಕೆಲಸ ಮಾಡಿ ಎಂದು ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಾಕೀತು ಮಾಡಿದರು.
ಭಾನುವಾರ ಜಿಲ್ಲಾ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ನಡೆದ ಬ್ಯಾಂಕಿನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬ್ಯಾಂಕ್ ನಿಮ್ಮೆಲ್ಲಾ ಬೇಡಿಕೆ ಈಡೇರಿಸಿದೆ. ವೇತನ ಭತ್ಯೆ, ಆರೋಗ್ಯ ವಿಮೆ ನೀಡಿದ್ದೇವೆ ಆದರೂ ನಿಮ್ಮಲ್ಲಿ ಇನ್ನೂ ಬದ್ಧತೆ ಮೂಡಿಲ್ಲ ಎಂದು ಕಿಡಿಕಾರಿದರು.
ದಿವಾಳಿಯಾಗಿದ್ದ ಬ್ಯಾಂಕನ್ನು ಇಂದು ಪ್ರಗತಿಯತ್ತ ತಂದಿದ್ದೇವೆ. ಕೆಲವರು ವಿನಾಕಾರಣ ಬ್ಯಾಂಕಿಗೆ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿದ್ದಾರೆ. ಬ್ಯಾಂಕಿನ ಋಣದ ಲ್ಲಿರುವ ಸಿಬ್ಬಂದಿ ಇದೆಲ್ಲವನ್ನು ಮೆಟ್ಟಿನಿಂತು ಬ್ಯಾಂಕಿನ ಘನತೆ ಹೆಚ್ಚಿಸಲು ಶ್ರಮಿಸುವ ಅಗತ್ಯವಿದೆ ಎಂದರು.
ಬ್ಯಾಂಕನ್ನು ಉಳಿಸೋದು, ಹಾಳು ಮಾಡೋದು ಎರಡೂ ನಿಮ್ಮ ಕೈಯಲ್ಲಿದೆ. ಬ್ಯಾಂಕ್ ಚೆನ್ನಾಗಿದ್ದರೆ ವೇತನ,ಭತ್ಯೆ ಸಿಗುತ್ತದೆ. ಬೇಜವಾಬ್ದಾರಿತನ ಬಿಟ್ಟು ಗುರಿಸಾಧನೆಗೆ ಕ್ರಮವಹಿಸಿ ಎಂದರು. ಡಿಸಿಸಿ ಬ್ಯಾಂಕಿನ ಎಲ್ಲಾ ಶಾಖೆಗಳನ್ನು ವಾಣಿಜ್ಯ ಬ್ಯಾಂಕುಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಆಧುನೀಕರಿಸಲಾಗಿದೆ. ಆದರೆ ಕೆಲವು ಶಾಖೆಗಳಲ್ಲಿ ಸ್ವತ್ಛತೆಗೆ ಒತ್ತು ನೀಡಿಲ್ಲ ಎಂದು ವ್ಯವಸ್ಥಾಪಕರನ್ನು ತರಾಟೆಗೆ ತೆಗೆದುಕೊಂಡರು.
ಬ್ಯಾಂಕಿನ ಎಜಿಎಂಗಳಾದ ಎಂ.ಆರ್. ಶಿವಕುಮಾರ್, ಖಲೀಮುಲ್ಲಾ, ಹುಸೇನ್‌ಸಾಬ್ ದೊಡ್ಡಮುನಿ,ಬೆ„ರೇಗೌಡ, ಅರುಣ್‌ಕುಮಾರ್, ಭಾನುಪ್ರಕಾಶ್, ನಾಗೇಶ್, ವಿ-ಸಾಫ್ಟ್ ಸಿಬ್ಬಂದಿ ರಾಜಶೇಖರ್, ಫರ್ನಾಂಡೀಸ್ ಸೇರಿದಂತೆ ಎರಡೂ ಜಿಲ್ಲೆಯ ಎಲ್ಲ ಶಾಖೆಗಳ ವ್ಯವಸ್ಥಾಪಕರು ಸಿಬ್ಬಂದಿ ಹಾಜರಿದ್ದರು.
ಐದು ಶಾಖೆಗಳ ಆಡಿಟ್ ಪೂರ್ಣ
ಗಣಕೀಕೃತ ಆಡಿಟ್ ಪೂರ್ಣಗೊಳಿಸಿ ಆನ್‌ಲೈನ್ ಬ್ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಿರುವ ಅವಿಭಜಿತ ಜಿಲ್ಲೆಯ ಐದು ಶಾಖೆಗಳಾದ ಗೌರಿಬಿದನೂರು, ಬಂಗಾರಪೇಟೆ, ಶ್ರೀನಿವಾಸಪುರ, ಮುಳಬಾಗಿಲು, ಶಿಡ್ಲಘಟ್ಟ ಶಾಖೆಗಳ ಅಧಿಕಾರಿ,ಸಿಬ್ಬಂದಿಯನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅಭಿನಂದಿಸಿದರು. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಪ್ಯಾಕ್ಸ್‌ಗಳ ಗಣಕೀಕರಣದ ಮೂಲಕ ಸಾರ್ವಜನಿಕರು, ಗ್ರಾಹಕರಿಗೆ ಪಾರದರ್ಶನ ವಹಿವಾಟಿದ ಸ್ವಷ್ಟ ಸಂದೇಶ ನೀಡಲಾಗಿದೆ, ಇದೇ ಮಾದರಿಯಲ್ಲಿ ವಾರದೊಳಗೆ ಅವಿಭಜಿತ ಜಿಲ್ಲೆಯ ಉಳಿದೆಲ್ಲಾ ಶಾಖೆಗಳು ಪೂರ್ಣವಾಗಿ ಗಣಕೀಕೃತ ಆಡಿಟ್ ಮುಗಿಸಿರಬೇಕು ಎಂದು ಮಿಕ್ಕ ಅಧಿಕಾರಿಗಳಿಗೆ ಸೂಚಿಸಿದರು.