ಬೆಂಗಳೂರು: ಬಿಎಂಟಿಸಿಯಲ್ಲಿ ಈಗ ನೂರಾರು ಕಿ.ಮೀ. ದೂರದ ಉತ್ತರ ಕರ್ನಾಟಕ ಮೂಲದವರಿಗೆ ಅನಾಯಾಸವಾಗಿ “ಡ್ಯೂಟಿ’ ಸಿಗುತ್ತಿದೆ. ಆದರೆ, ನಗರದ ಪಕ್ಕದಲ್ಲೇ ಇದ್ದರೂ “ಡ್ಯೂಟಿ’ ಪಡೆಯುವುದು ಸವಾಲಾಗಿದೆ. ಯಾಕೆಂದರೆ, ಕಲಬುರಗಿ, ವಿಜಯಪುರ, ಯಾದಗಿರಿ ಮತ್ತಿತರ ಕಡೆಯಿಂದ ಬಂದವರು ನಗರದಲ್ಲೇ ಮನೆ ಮಾಡಿಕೊಂಡಿದ್ದಾರೆ. ಹಾಗಾಗಿ, ಸಾಮಾನ್ಯ ಪಾಳಿ (ಬೆಳಗ್ಗೆ 7ರಿಂದ ಸಂಜೆ 7)ಗೆ ಸುಲಭವಾಗಿ ಕರ್ತವ್ಯ ಹಾಜರಾಗಲು ಸಾಧ್ಯವಾಗುತ್ತಿದೆ. ಆದರೆ, ಕೆಲವರು ಮಂಡ್ಯ, ಮೈಸೂರು, ರಾಮನಗರ, ಚಾಮರಾಜನಗರ, ಗುಂಡ್ಲುಪೇಟೆ, ತುಮ ಕೂರು ಮತ್ತಿತರ ಕಡೆ ನೆಲೆಸಿದ್ದಾರೆ.
ಅವರು ಕೋವಿಡ್-19 ಸಂದರ್ಭದಲ್ಲಿ ಬಸ್ ಹಿಡಿದು, ಸಾಮಾನ್ಯಪಾಳಿಗೆ ಹಾಜರಾಗುವುದೇ ಸವಾಲಾಗಿದೆ. ಇದೇ ಕಾರಣಕ್ಕೆ ಹಲವರು “ಡ್ಯೂಟಿ’ಯಿಂದ ವಂಚಿತ ರಾಗುತ್ತಿದ್ದು, ವೇತ ನಕ್ಕೆ ಕತ್ತರಿ ಬಿದ್ದೀತು ಎಂಬ ಆತಂಕದಲ್ಲಿದ್ದಾರೆ. ಬಿಎಂಟಿಸಿಯಲ್ಲಿ ಕಾರ್ಯ ನಿರ್ವಹಿಸುವ ಚಾಲನಾ ಸಿಬ್ಬಂದಿ ಕಡ್ಡಾಯ ವಾಗಿ ಕೇಂದ್ರ ಭಾಗ ದಲ್ಲೇ ಇರಬೇಕು ಎಂಬ ನಿಯಮವಿದೆ. ಅದಕ್ಕೆ ತಕ್ಕಂತೆ ಮನೆ ಬಾಡಿಗೆ ಭತ್ಯೆ ಉಳಿದ ಮಹಾನಗರಗಳಿಗಿಂತ ಹೆಚ್ಚು ಅಂದರೆ ಶೇ. 24ರಷ್ಟು ನೀಡಲಾಗುತ್ತಿದೆ. ಆದರೆ, ಬೆಂಗಳೂರಿಗೆ ಹತ್ತಿರದಲ್ಲಿರುವ ಕೆಲ ಸಿಬ್ಬಂದಿ ನಿಯಮ ಬಾಹಿರವಾಗಿ ತಮ್ಮ ಸ್ವಂತ ಊರಿನಲ್ಲೇ ಮನೆ ಮಾಡಿದ್ದು, ನಿತ್ಯ ಹೋಗಿ-ಬರುತ್ತಾರೆ. ಲಾಕ್ ಡೌನ್ ಅವಧಿಯಲ್ಲಿ ಇದು ಕರ್ತವ್ಯಕ್ಕೆ ಅಡ್ಡಿಯಾಗಿದೆ.
ಸಮಸ್ಯೆ ಹೇಗೆ?: ಚಾಲನಾ ಸಿಬ್ಬಂದಿ ಬೆಳಗ್ಗೆ 8 ಗಂಟೆಗೇ ಕಡ್ಡಾಯವಾಗಿ ಆಯಾ ಘಟಕಗಳಲ್ಲಿ ಹಾಜರಿ ಪುಸ್ತಕಕ್ಕೆ ಸಹಿ ಹಾಕಬೇಕು. ಬಸ್‌ಗಳು ಲಭ್ಯವಿದ್ದರೆ, ತಕ್ಷಣ ಡ್ಯೂಟಿ ದೊರೆಯುತ್ತದೆ. ಇಲ್ಲದಿದ್ದರೆ, ಮಧ್ಯಾಹ್ನದವರೆಗೆ ಕಾದು, ಮಧ್ಯಾಹ್ನ ಪಾಳಿಯಲ್ಲಿ ಡ್ಯೂಟಿ ಗಿಟ್ಟಿಸಿಕೊಳ್ಳತಕ್ಕದ್ದು ಎಂದು ಸಂಸ್ಥೆ ಸೂಚಿಸಿದೆ. ಆದರೆ, ಮಂಡ್ಯ ಅಥವಾ ತುಮಕೂರಿನಿಂದ ಈ ಅವಧಿಯೊಳಗೆ ಹಾಜರಾಗುವುದು ಕಷ್ಟವಾಗಿದೆ ಎಂದು ಸ್ಥಳೀಯ ಕೆಎಸ್‌ಆರ್‌ಟಿಸಿ ಚಾಲನಾ ಸಿಬ್ಬಂದಿ ಹೇಳುತ್ತಿದ್ದಾರೆ. ಅದರಲ್ಲೂ ಶೆಡ್ಯುಲ್ ಗಳ ಸಂಖ್ಯೆ ಕಡಿಮೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗಿರುವುದರಿಂದ ಇದು ಸಮಸ್ಯೆಯಾಗಿದೆ ಎಂದು ಮಂಡ್ಯ ಮೂಲದ ಚಾಲನಾ ಸಿಬ್ಬಂದಿ ಮಹೇಶ್ ಅಲವತ್ತುಕೊಳ್ಳುತ್ತಾರೆ.
“ಬೆಳಗ್ಗೆ ಡ್ಯೂಟಿಗೆ ಹಾಜರಾಗುವುದು ಮಾತ್ರವಲ್ಲ, ಸಂಜೆ ಕೆಲಸ ಮುಗಿಸಿಕೊಂಡು ಗೂಡು ಸೇರುವುದೂ ಸಮಸ್ಯೆಯಾಗಿದೆ. ಹೇಗೆಂದರೆ, ಸಂಜೆ 6ರ ನಂತರ ಕೆಎಸ್‌ಆರ್‌ಟಿಸಿ ಬಸ್‌ಗಳು ಕಡಿಮೆ. ಇತ್ತ ಸಾಮಾನ್ಯ ಪಾಳಿಯಲ್ಲಿ ಸಂಜೆ 7ಕ್ಕೆ ಕೆಲಸ ಮುಗಿಯುತ್ತದೆ. ಡಿಪೋಗೆ ಬಸ್ ನಿಲ್ಲಿಸಿ, ಹತ್ತಿರದ ನಿಲ್ದಾಣಕ್ಕೆ ಬಂದು, ಊರಿನ ಬಸ್ ಹಿಡಿಯಲು ತಾಸುಗಟ್ಟಲೆ ಸಮಯ ವ್ಯಯ ಆಗುತ್ತದೆ. ಈ ಮೊದಲೇ 12 ತಾಸು ಡ್ಯೂಟಿ ಮಾಡಿರುತ್ತೇವೆ’ ಎಂದು ಗುಂಡ್ಲುಪೇಟೆಯ ಮಾದೇಶ್ ತಿಳಿಸಿದರು.
ಫಸ್ಟ್ ಕಂ ಫಸ್ಟ್?: ಬೇಡಿಕೆ ಮತ್ತು ಆದಾಯ ಕಡಿಮೆ ಇರುವುದರಿಂದ ಬೆಳಗಿನ ಪಾಳಿ (ಬೆಳಗ್ಗೆ 6ರಿಂದ ಮಧ್ಯಾಹ್ನ 1ಗಂಟೆ)ಯನ್ನು ಬಿಎಂಟಿಸಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಎರಡನೇ ಪಾಳಿ (ಮಧ್ಯಾಹ್ನ 2ರಿಂದ ರಾತ್ರಿ 10) ಮಹಿಳೆಯರು, 50 ವರ್ಷ ಮೇಲ್ಪಟ್ಟವರಿಗೆ ಆದ್ಯತೆ ನೀಡಲಾಗಿರುತ್ತದೆ. ರಾತ್ರಿಪಾಳಿಗೆ ಹೆಚ್ಚು ಬೇಡಿಕೆ ಇದೆ. ಆದರೆ, ಕಡಿಮೆ ಶೆಡ್ಯುಲ್‌ಗಳಿವೆ. ಇದೆಲ್ಲದರಿಂದ “ಮೊದಲು ಬಂದವರಿಗೆ ಡ್ಯೂಟಿ ತಡವಾಗಿ ಬಂದವರಿಗೆ ಸೂಟಿ (ರಜೆ)’ ಎನ್ನುವಂತಾಗಿದೆ. ಈ ಹಿನ್ನೆಲೆಯಲ್ಲಿ ಡ್ಯುಟಿ ಗಿಟ್ಟಿಸಿಕೊಳ್ಳಲು ಬಿಎಂಟಿಸಿ ಸಿಬ್ಬಂದಿಗೆ ಪ್ರಸ್ತುತ ಎರಡು ಆಯ್ಕೆಗಳಿವೆ. ಒಂದು ಬೆಂಗಳೂರು ಸುತ್ತಮುತ್ತಲಿನಿಂದ ಕಾರ್ಯಾಚರಣೆ ಮಾಡುವ ಕೆಎಸ್‌ಆರ್‌ಟಿಸಿಯ ಪ್ರತಿ ಬಸ್‌ಗಳಲ್ಲಿ ಕನಿಷ್ಠ ಐದು ಜನ ಬಿಎಂಟಿಸಿ ಸಿಬ್ಬಂದಿಗೆ ಅವಕಾಶ ಕಲ್ಪಿಸಬೇಕು. ಅಥವಾ ಮಂಡ್ಯ, ಮೈಸೂರು, ತುಮಕೂರು, ಚಾಮರಾಜನಗರ ಮತ್ತಿತರ ಕಡೆ ಇರುವ ಸಿಬ್ಬಂದಿ ನಿಯಮದ ಪ್ರಕಾರ ಕೇಂದ್ರಭಾಗಕ್ಕೆ ಶಿಫ್ಟ್ ಆಗಬೇಕಾಗಿದೆ.
ಹೆಚ್ಚಿದ ಸಿಬ್ಬಂದಿ: ದೀರ್ಘಾವಧಿಯ ಗೈರುಹಾಜರಿದ್ದವರು ಈಗ ಒಮ್ಮೆಲೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಇನ್ನು ವೋಲ್ವೋ ಬಸ್ ಗಳು ಅಷ್ಟಾಗಿ ಕಾರ್ಯಾಚರಣೆ ಆಗದಿರುವುದರಿಂದ ಪ್ರತಿ ಘಟಕಕ್ಕೆ ತಲಾ 30-40 ಚಾಲನಾ ಸಿಬ್ಬಂದಿಯನ್ನು ಹಾಕಲಾಗಿದೆ. ಜತೆಗೆ ಮೊದಲ ಪಾಳಿ ಸ್ಥಗಿತಗೊಂಡಿದ್ದರಿಂದ 2ನೇ ಪಾಳಿಗೆ ಬೇಡಿಕೆ ಹೆಚ್ಚಾಗಿದೆ. ಜತೆಗೆ ಪ್ರತಿ ಶಿಫ್ಟ್ನಲ್ಲಿ ಸಾಮಾನ್ಯವಾಗಿ ಅಗತ್ಯ ಸೇವೆ ಇರುವುದರಿಂದ ಶೇ. 8ರಿಂದ 9ರಷ್ಟು ಸಿಬ್ಬಂದಿ ಹೆಚ್ಚಿರುತ್ತಾರೆ. ಅಂದರೆ 300 ಜನ ಬೇಕಾಗಿದ್ದರೆ, 330 ಜನ ಇರುತ್ತಾರೆ. ಇದೆಲ್ಲಾ ಕಾರಣದಿಂದ ಮೊದಲು ಬಂದವರಿಗೆ ಡ್ಯೂಟಿ ಸಿಗುತ್ತಿದೆ. ಆಮೇಲೆ ಬಂದವರಿಗೆ “ವೇಟಿಂಗ್’ ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಎಂಟಿಸಿ ಸಿಬ್ಬಂದಿಯನ್ನು ಸಾಮಾನ್ಯವಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಕರೆತರಲಾಗುತ್ತದೆ. ಯಾರಿಗೂ ತಡೆಯೊಡ್ಡುವುದಿಲ್ಲ. ಅಷ್ಟಕ್ಕೂ ಈಗ ಬಸ್‌ಗಳಲ್ಲಿ ಪ್ರಯಾಣಿಕರ ಕೊರತೆ ಇರುವುದರಿಂದ ಈ ಸಮಸ್ಯೆಯೇ ಉದ್ಭವಿಸುವುದಿಲ್ಲ.
ಈ ಸಮಸ್ಯೆ ನಮ್ಮ ಗಮನಕ್ಕೂ ಬಂದಿಲ್ಲ.
-ಪ್ರಭಾಕರ ರೆಡ್ಡಿ, ಮುಖ್ಯ ಸಂಚಾರ ವ್ಯವಸ್ಥಾಪಕರು, ಕೆಎಸ್‌ಆರ್‌ಟಿಸಿ
*ವಿಜಯಕುಮಾರ ಚಂದರಗಿ