ಶ್ರವಣಬೆಳಗೊಳ: ಆತ್ಮಕಲ್ಯಾಣದ ಜತೆಗೆ ಸಮಾಜ ಕಲ್ಯಾಣ ಮಾಡುವುದು ಮಠಾಧೀಶರ ಕರ್ತವ್ಯವಾಗಿದ್ದು, ಸರ್ವ ಧರ್ಮ ಸಮನ್ವಯತೆ ಸಾಧಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು. ಶ್ರವಣಬೆಳಗೊಳ ಚಾವುಂಡರಾಯ ಸಭಾಮಂಟಪದಲ್ಲಿ ನಡೆದ 50ನೇ ವರ್ಷದ ದೀಕ್ಷಾ ಸುವರ್ಣ ಮಹೋತ್ಸವ ಸಮಾರಂಭ ದಲ್ಲಿ ಸೇರಿದ್ದ ಭಕ್ತರಿಗೆ ಆಶೀರ್ವಚನ ನೀಡಿದ ಅವರು, ರಾಜಕೀಯದಿಂದ ಮಠಾಧಿಪತಿಗಳು ದೂರ ಇರಬೇಕು. ಆಗ ಮಠ-ಮಾನ್ಯಗಳು ಸಮಾಜಮುಖೀ ಯಾಗಿರುತ್ತವೆ. ಮಠದಲ್ಲಿ ರಾಜಕೀಯ ಬೆರೆತರೆ ಭಕ್ತರಿಂದ ನಂಬಿಕೆ ಕಳೆದುಕೊಳ್ಳಬೇಕಾಗುತ್ತದೆ ಎಂದರು.
ತಮಿಳುನಾಡಿದ ಜೈನ ಮಠದ ಧವಲಕೀರ್ತಿ ಭಟ್ಟಾರಕರು ಮಾತನಾಡಿ, ಜೈನ ಮಠದ ಪೀಠಾಧ್ಯಕ್ಷರಾದ ಚಾರುಕೀರ್ತಿ ಭಟ್ಟಾರಕರು ಭಗವಾನ್ ಬಾಹುಬಲಿ ಸ್ವಾಮಿಯ 4 ಮಹಾ ಮಸ್ತಕಾಭಿಷೇಕವನ್ನು ವಿಜೃಂಭಣೆಯಿಂದ ನೆರವೇರಿಸುವ ಮೂಲಕ ವಿಶ್ವಕ್ಕೆ ಅಹಿಂಸಾ ಸಂದೇಶವನ್ನು ಸಾರುತ್ತಿದ್ದಾರೆ ಎಂದು ಪ್ರಶಂಸಿಸಿದರು. ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕರು ಮತ್ತು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಜೈನ ಸಮಾಜಕ್ಕೆ ಎರಡು ಕಣ್ಣುಗಳಿದ್ದಂತೆ. ಇವರ ಮಾತು ಮೀರಿ ಜೈನ ಸಮುದಾಯದ ಭಕ್ತರು ಒಂದು ಹೆಜ್ಜೆ ಮುಂದೆ ಇಡಬಾರದು. ಒಗ್ಗಟ್ಟು ಒಡೆಯುವ ಶಕ್ತಿಗಳು ಹೆಚ್ಚುತ್ತಿವೆ.
ಇದಕ್ಕೆ ಕಡಿವಾಣ ಹಾಕಲು ರಾಜ್ಯದಲ್ಲಿ ಹನ್ನೊಂದು ಮಠಾಧೀಶರಿದ್ದೇವೆ ಎಂದರು. ಕಂಬದಹಳ್ಳಿ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ, ಮೂಡುಬಿದರೆ ಚಾರುಕೀರ್ತಿ ಭಟ್ಟಾರಕರು, ಹೊಂಬುಜದ ದೇವೇಂದ್ರಕೀರ್ತಿ ಭಟ್ಟಾರಕರು, ಮಹಾ ರಾಷ್ಟ್ರದ ಸೋಂದಾ ಕ್ಷೇತ್ರದ ಭಟ್ಟಾಕಲಂಕ ಭಟ್ಟಾರಕರು, ಎನ್‌ಆರ್‌ಪುರ ಲಕ್ಷ್ಮೀಸೇನ ಭಟ್ಟಾರಕರು, ಅರತಿಪುರದ ಸಿದ್ಧಾಂತಕೀರ್ತಿ ಭಟ್ಟಾರಕರು, ನಾಂದಣಿ ಜಿನಸೇನ ಭಟ್ಟಾ ರಕರು, ಲಕ್ಕವಳ್ಳಿ ವೃಷಭಸೇನ ಭಟ್ಟಾರಕರು, ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಕಬ್ಬಳಿ ಶಿವಪುತ್ರ ಸ್ವಾಮೀಜಿ ಶ್ರೀಗಳಿಗೆ ಗೌರವ ಅರ್ಪಿಸಿದರು.
ಇದಕ್ಕೂ ಮೊದಲು ಜೈನ ಮಠದ ಪೀಠಾಧ್ಯಕ್ಷ ಚಾರುಕೀರ್ತಿ ಭಟ್ಟಾರಕರ ದೀಕ್ಷಾ ಸ್ವೀಕಾರ ಸುವರ್ಣ ಮಹೋತ್ಸವ ನಿಮಿತ್ತ ಬೃಹತ್ ಮೆರವಣಿಗೆ ನಡೆಯಿತು. ಮೆರವಣಿಗೆ ಮುಕ್ತಾಯವಾದ ಮೇಲೆ ಶ್ರೀಗಳಿಗೆ ಪಾದಪೂಜೆ ನೆರವೇರಿತು. ರಾಜ್ಯದ ಗಡಿ ಜಿಲ್ಲೆ ಬೆಳಗಾವಿಯಿಂದ ಶಾಸಕರು, ಹೊರ ರಾಜ್ಯದ ಸಾಂಗ್ಲಿಯಿಂದ ಗಣ್ಯರು ಆಗಮಿಸಿದ್ದರು. ಆದರೆ, ಅವರಿಗೆ ಯಾರೂ ಆಮಂತ್ರಣ ಪತ್ರಿಕೆ ನೀಡಿರಲಿಲ್ಲ. ಆದರೂ ಶ್ರೀಗಳ ಮೇಲಿನ ಅಭಿಮಾನದಿಂದ ಆಗಮಿಸಿ ವೇದಿಕೆ ಮುಂಭಾಗದಲ್ಲಿ ಸಾಮಾನ್ಯ ಜನರೊಟ್ಟಿಗೆ ಕುಳಿತು ಚಾರು ಕೀರ್ತಿ ಶ್ರೀಗಳಿಗೆ ನೆರವೇರಿದ ಪಾದಪೂಜೆಯನ್ನು ಕಣ್ತುಂಬಿಕೊಂಡರು.
ರಾಜ್ಯಪಾಲ ವಜುಭಾಯಿ ವಾಲಾ, ಸಿಎಂ ಬಿ.ಎಸ್.ಯಡಿಯೂರಪ್ಪ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸೇರಿ ಗಣ್ಯರು ಕಳುಹಿಸಿದ್ದ ಸಂದೇಶವನ್ನು ಚಾರು ಕೀರ್ತಿ ಶ್ರೀಗಳ ಮುಂದೆ ಓದಲಾಯಿತು.