Advertisement
ಒಂದೇ ತರಗತಿಯ ಮಕ್ಕಳು ಬೇರೆ ಬೇರೆ ಆರ್ಥಿಕ, ಸಾಮಾಜಿಕ ಹಿನ್ನೆಲೆಯಿಂದ ಬಂದಿರುತ್ತಾರೆ. ಅವರ ಉಡುಗೆ- ತೊಡುಗೆಗಳಲ್ಲೂ ಈ ವ್ಯತ್ಯಾಸ ಕಂಡುಬರುತ್ತದೆ. ಇದರಿಂದಾಗಿ ಮಕ್ಕಳಲ್ಲಿ ಮೇಲರಿಮೆ- ಕೀಳರಿಮೆಯ ಭಾವನೆ ಬರಬಾರದೆಂದು ಸಮವಸ್ತ್ರದ ಪರಿಕಲ್ಪನೆ ಜಾರಿಗೆ ಬಂತು. ಒಮ್ಮೆ ಯಾವಾಗ ಜಾಗತೀಕರಣಕ್ಕೆ ನಮ್ಮ ದೇಶವೂ ತೆರೆದುಕೊಂಡಿತೋ ಆವಾಗ ವಿದ್ಯಾರ್ಥಿಗಳು ಧರಿಸುವ ಬಟ್ಟೆಯ ವಿನ್ಯಾಸಗಳು ಬದ ಲಾಗತೊಡಗಿದವು. ಕೆಲವು ಕಾಲೇಜು ವಿದ್ಯಾರ್ಥಿಗಳ ಉಡುಪು ನೋಡಿದರಂತೂ ಅವರು ಹೋಗುತ್ತಿರುವುದು ವಿದ್ಯೆ ಕಲಿ ಯಲೇ? ಎಂದು ಕೇಳುವಂತಾಯಿತು. ಈ ತೆರತೆರನಾದ ವಸ್ತ್ರ ವಿನ್ಯಾಸದ ಮೇಲೆ ನಿಯಂತ್ರಣವಿರಿಸಲು ಸಮಾನ ವಸ್ತ್ರಸಂಹಿತೆ ಹೆಚ್ಚಿನ ಕಾಲೇಜುಗಳಲ್ಲೂ ಜಾರಿಗೆ ಬಂತು. ಮೊದಮೊದಲು ವಾರದ ಐದು ದಿನಕ್ಕೆ ಮಾತ್ರ ಸಮವಸ್ತ್ರವಿತ್ತು. ಶನಿವಾರದಂದು ಬೇಕಾದ ಬಟ್ಟೆ ಧರಿಸಬಹುದಿತ್ತು.
Related Articles
Advertisement
ಖಾಸಗಿ ಶಾಲೆಗಳಲ್ಲಿ ಸಮವಸ್ತ್ರದ ವಿಚಾರದಲ್ಲಿ ಶಿಕ್ಷಣ ಸಂಸ್ಥೆಗಳ ಆಡಳಿತ ವರ್ಗ, ಬೋಧಕ ವರ್ಗ ಮಾತ್ರ ವಲ್ಲದೆ ವಿದ್ಯಾರ್ಥಿಗಳು ಮತ್ತವರ ಹೆತ್ತವರು ಮತ್ತು ಪೋಷಕರು ಕೂಡ ಶೈಕ್ಷಣಿಕ ನಿಯಮಾವಳಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲು ಬದ್ಧರಾಗಿರುತ್ತಾರೆ. ಆದರೆ ಸರಕಾರಿ ಶಾಲಾ-ಕಾಲೇಜುಗಳಲ್ಲಂತೂ ಈ ಸಮಸ್ಯೆ ತುಸು ಗಂಭೀರ ವಾಗಿಯೇ ಇದೆ. ಸರಕಾರಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಈ ವಿಚಾರದಲ್ಲಿ ವಿದ್ಯಾರ್ಥಿಗಳು ಮತ್ತು ಹೆತ್ತವರ ಅಸಡ್ಡೆಯ ಧೋರಣೆ ಬಲು ದೊಡ್ಡ ಸಮಸ್ಯೆಯಾಗಿ ಮಾರ್ಪಾಡಾಗುತ್ತಿದೆ. ಇತ್ತೀಚಿನ ದಿನಗ ಳಲ್ಲಿ ಇದೇ ವಿಚಾರವಾಗಿ ಹಲವೆಡೆ ಸಂಘರ್ಷದ ವಾತಾವರಣ ಸೃಷ್ಟಿಯಾದ ನಿದರ್ಶನಗಳು ನಮ್ಮ ಕಣ್ಣ ಮುಂದೆ ಇವೆ.
ಇಲ್ಲಿ ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಒಂದು ತಿಳಿವಳಿಕೆ ಇರುವುದು ಅಗತ್ಯ. ತಾವು ವಿದ್ಯಾರ್ಥಿಗಳು, ಒಂದು ಸಂಸ್ಥೆಯಲ್ಲಿ ಕಲಿಯುತ್ತಿದ್ದೇವೆ, ಅಲ್ಲಿಯ ನೀತಿ- ನಿಯಮ ಗಳನ್ನು ಪಾಲಿಸಬೇಕಾದದ್ದು ನಮ್ಮ ಮೊದಲ ಕರ್ತವ್ಯ ಎಂಬುದು ಅವರಿಗೆ ತಿಳಿದಿರಬೇಕು. ಈ ತರಹದ ಅನಗತ್ಯ ವಿವಾದಗಳನ್ನು ಸೃಷ್ಟಿಸುತ್ತಿದ್ದರೆ ತೊಂದರೆ ಆಗುವುದು ತಮ್ಮದೇ ಪಾಠ ಪ್ರವಚನಗಳಿಗೆ ಎಂಬ ಅರಿವಿರಬೇಕು. ಹಾಗೆಯೇ ಈ ವಿಚಾರದಲ್ಲಿ ಅವರ ಹೆತ್ತವರು/ಪೋಷಕರು ಕೂಡ ಅವರಿಗೆ ತಿಳಿಹೇಳಬೇಕು. ನಮ್ಮ ಧಾರ್ಮಿಕ ಆಚರಣೆಗಳು ಏನಿದ್ದರೂ ಮನೆಯಲ್ಲಿ, ಒಮ್ಮೆ ಯಾವಾಗ ವಿದ್ಯಾಸಂಸ್ಥೆಯ ಒಳಗೆ ಪ್ರವೇಶ ಪಡೆಯುತ್ತೇವೆಯೋ ಆಗ ಅಲ್ಲಿಯ ರೀತಿ- ನೀತಿಗಳನ್ನು ಪಾಲಿಸಬೇಕಾದದ್ದು ನಮ್ಮ ಧರ್ಮ ಎಂಬುದನ್ನು ವಿದ್ಯಾರ್ಥಿಗಳು ಮೊದಲು ಅರ್ಥ ಮಾಡಿಕೊಳ್ಳಬೇಕು.
ಹಾಗೊಂದು ವೇಳೆ ತಮ್ಮ ತಮ್ಮ ಮತ ಯಾ ಧರ್ಮದ ಆಚರಣೆಯನ್ನು ಕೈಬಿಡಲು ಸಾಧ್ಯವಿಲ್ಲದ ಮನೋಸ್ಥಿತಿಯನ್ನು ಹೊಂದಿರುವ ವಿದ್ಯಾರ್ಥಿಗಳು ತಮ್ಮ ಆಚರಣೆಯನ್ನು ತರಗತಿಯಲ್ಲಿಯೂ ಪಾಲಿಸಲು ಅವಕಾಶ ನೀಡುವ ಶೈಕ್ಷಣಿಕ ಸಂಸ್ಥೆಯಲ್ಲಿ ಪ್ರವೇಶ ಪಡೆದುಕೊಳ್ಳುವುದು ವಸ್ತ್ರ ಸಂಹಿತೆ ಸಮಸ್ಯೆಗೆ ಮತ್ತೂಂದು ಪರಿಹಾರ ಮಾರ್ಗವಾಗಿದೆ. ಇದರಿಂದ ಶೈಕ್ಷಣಿಕ ವಾತಾವರಣ ಹದಗೆಡುವಂಥ ಪರಿಸ್ಥಿತಿ ಸೃಷ್ಟಿಯಾಗುವುದು ತಪ್ಪುತ್ತದೆ.
ಈ ಸಮವಸ್ತ್ರ ಗೊಂದಲ ಈ ರೀತಿ ಮುಂದುವರಿದರೆ ಮುಂದೊಮ್ಮೆ ವಿದ್ಯಾರ್ಥಿಗಳನ್ನು ಶಾಲಾ-ಕಾಲೇಜಿಗೆ ಸೇರಿಸುವಾಗ ಮುಂದಿನ ಸಾಧ್ಯಾಸಾಧ್ಯತೆಗಳ ಬಗ್ಗೆ ಮುಚ್ಚಳಿಕೆ ಯನ್ನು ಪಡೆದುಕೊಂಡೇ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬೇಕಾಗಬಹುದು. ಇಂತಹ ಅನಗತ್ಯ ವಿಚಾರಗಳ ಬಗೆಗೆ ಗದ್ದಲ, ಸಂಘರ್ಷಗಳನ್ನು ಸೃಷ್ಟಿಸುವ ಬದಲಾಗಿ ವಿದ್ಯಾರ್ಥಿಗಳು ಶಿಕ್ಷಣದತ್ತ ತಮ್ಮೆಲ್ಲ ಗಮನವನ್ನು ಕೇಂದ್ರೀಕರಿಸಬೇಕಿದೆ. ಅಷ್ಟು ಮಾತ್ರವಲ್ಲದೆ ಈ ವಿಚಾರದಲ್ಲಿ ವಿದ್ಯಾರ್ಥಿಗಳ ಹೆತ್ತವರು/ಪೋಷಕರು ತಮ್ಮ ಮಕ್ಕಳ ಭವಿಷ್ಯವನ್ನು ಗಮನದಲ್ಲಿರಿಸುವುದು ಅತೀ ಮುಖ್ಯ. ಕೊರೊನಾ ಸಾಂಕ್ರಾಮಿಕದ ಈ ಕಾಲಘಟ್ಟದಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಭೌತಿಕ ತರಗತಿಗಳನ್ನು ನಡೆಸುವುದೇ ಕಷ್ಟಸಾಧ್ಯ ಎನ್ನುವ ಪರಿಸ್ಥಿತಿಯಲ್ಲಿ ಇಂಥ ಕ್ಷುಲ್ಲಕ ವಿಚಾರಗಳು ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ಕೊಳ್ಳಿ ಇಡುವಂತಾಗಬಾರದು.
-ಶಾಂತಲಾ ಎನ್. ಹೆಗ್ಡೆ, ಸಾಲಿಗ್ರಾಮ