ಹೊಸದಿಲ್ಲಿ: ದೆಹಲಿ ವಿಶ್ವವಿದ್ಯಾಲಯದಲ್ಲಿ ನಡೆದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಖುಷಿಯ ವಿಚಾರವೆಂಬಂತೆ ವಿದ್ಯಾರ್ಥಿ ಸಂಘಟನೆ ಎನ್‌ಎಸ್‌ಯುಐ ಭರ್ಜರಿ ಪುನರಾಗಮನ ಮಾಡಿದ್ದು, ಅಧ್ಯಕ್ಷ ಸ್ಥಾನ ಮತ್ತು ಉಪಾಧ್ಯಕ್ಷ ಸ್ಥಾನ ಗೆದ್ದು ಸಂಭ್ರಮಿಸಿದೆ. 2012 ರ ಬಳಿಕ ಇದೇ ಮೊದಲ ಬಾರಿಗೆ ಅಧ್ಯಕ್ಷ ಸ್ಥಾನ ತನ್ನದಾಗಿಸಿಕೊಂಡಿದೆ.
ಕಳೆದ ಬಾರಿ ನಾಲ್ಕರ ಪೈಕಿ 3 ಸ್ಥಾನಗಳನ್ನು ಗೆದ್ದಿದ್ದ ಎಬಿವಿಪಿ ಈ ಬಾರಿ ಕಾರ್ಯದರ್ಶಿ ಮತ್ತು ಜತೆ ಕಾರ್ಯದರ್ಶಿ ಸ್ಥಾನ ಮಾತ್ರ ಗೆಲ್ಲವಲ್ಲಿ ಸಫಲವಾಗಿದ್ದು ಅಧ್ಯಕ್ಷ ಸ್ಥಾನ ಕಳೆದುಕೊಂಡು ಹಿನ್ನಡೆ ಅನುಭವಿಸಿದೆ.
ಎನ್‌ಎಸ್‌ಐಯುನ ರಾಕಿ ತುಸೀದ್ ಅಧ್ಯಕ್ಷ ಸ್ಥಾನ ಗೆದ್ದರೆ, ಕುನಾಲ್ ಶೆರಾವತ್ ಉಪಾಧ್ಯಕ್ಷ ಸ್ಥಾನ ಗೆದ್ದಿದ್ದಾರೆ.
ಎಬಿವಿಪಿ ನಿಕುಂಜ್ ಮಕ್ವಾನ್ ಕಾರ್ಯದರ್ಶಿ ಸ್ಥಾನ ಗೆದ್ದರೆ, ಪಂಕಜ್ ಕೇಸರಿ ಜೊತೆ ಕಾರ್ಯದರ್ಶಿ ಸ್ಥಾನ ಗೆದ್ದಿದ್ದಾರೆ.
‘ಕಳೆದ 4 ವರ್ಷಗಳಿಂದ ನಾವೇ ಗೆಲ್ಲುತ್ತಿದ್ದೆವು ಆದರೆ ಎನ್‌ಎಸ್‌ಐಯು ತಂತ್ರ ಹೂಡಿ ಎಡ ಪಕ್ಷಗಳ ಬೆಂಬಲಿತ ವಿದ್ಯಾರ್ಥಿ ಸಂಘದೊಂದಿಗೆ ಮೈತ್ರಿ ಮಾಡಿಕೊಂಡು ನಮ್ಮ ಸೋಲಿಗೆ ಕಾರಣವಾಗಿವೆ’ ಎಂದು ಎಬಿವಿಪಿ ಮುಖಂಡರೊಬ್ಬರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.