Advertisement

ಸಿಟಿ ಬಸ್‌ನೊಳಗೆ ಕಸದ ಬುಟ್ಟಿ

10:08 AM Nov 05, 2018 | |

ಮಹಾನಗರ: ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಕನಸು ನನಸಾಗಿಸಲು ಮಂಗಳೂರು ಸಿಟಿ ಬಸ್‌ ಮಾಲಕರ ಸಂಘ ಕೂಡ ಕೈಜೋಡಿಸಿದ್ದು, ನಗರದಲ್ಲಿ ಸಂಚರಿಸುವ ಎಲ್ಲ ಸಿಟಿ ಬಸ್‌ಗಳಲ್ಲಿ ಶೀಘ್ರದಲ್ಲೇ ಹಂತ ಹಂತವಾಗಿ ಕಸದ ಡಬ್ಬ ಅಳವಡಿಸಿ, ಸ್ವಚ್ಛತೆಯ ಬಗ್ಗೆ ಪ್ರಯಾಣಿಕರಲ್ಲಿ ಅರಿವು ಮೂಡಿಸಲು ಚಿಂತನೆ ನಡೆಸಿದೆ.

Advertisement

ನಗರದಿಂದ ವಿವಿಧ ಪ್ರದೇಶಗಳಿಗೆ ಪ್ರತಿನಿತ್ಯ ಸುಮಾರು 360 ಸಿಟಿ ಬಸ್‌ಗಳು ಕಾರ್ಯಾಚರಿಸುತ್ತದೆ. ಬೆಳಗ್ಗೆ ಸುಮಾರು 6 ಗಂಟೆಯಿಂದ ರಾತ್ರಿ 10.20ರ ವರೆಗೆ ಬಸ್‌ ಕಾರ್ಯಾಚರಿಸುತ್ತಿದ್ದು, ಪ್ರತಿಯೊಂದು ಬಸ್‌ ಸರಾಸರಿ 8 ಟ್ರಿಪ್‌ ನಡೆಸುತ್ತದೆ. ದಿನಂಪ್ರತಿ ಲಕ್ಷದಷ್ಟು ಮಂದಿ ಸಂಚರಿಸುತ್ತಿದ್ದು, ಅದರಲ್ಲಿ ಶೇ.25ರಷ್ಟು ವಿದ್ಯಾರ್ಥಿಗಳು ಸಿಟಿ ಬಸ್‌ಗಳನ್ನು ಅವಲಂಭಿಸಿದ್ದಾರೆ. ಹೀಗಿರು ವಾಗ ಬಸ್‌ ಒಳಗೆ ಸ್ವಚ್ಛವಿರುವುದು ಅಗತ್ಯ.

ಬಸ್‌ಗಳಲ್ಲಿ ಸಂಚರಿಸುವವರಲ್ಲಿ ಕೆಲವು ಮಂದಿ ಬಸ್‌ ಟಿಕೆಟ್‌, ಚಾಕೋಲೆಟ್‌ ರ್ಯಾಪರ್‌, ಹಣ್ಣಿನ ಸಿಪ್ಪೆ, ತಿನಿಸುಗಳು, ಕಾಗದ, ಬಾಟಲ್‌ ಸಹಿತ ಮತ್ತಿತರ ವಸ್ತುಗಳನ್ನು ಬಸ್‌ನ ಒಳಗಡೆ ಬಿಸಾಕುತ್ತಾರೆ. ಇದರಿಂದಾಗಿ ಬಸ್‌ಗಳಲ್ಲಿ ಸಂಚರಿಸುವ ಇತರೇ ಮಂದಿಗೆ ಕಿರಿ ಕಿರಿ ಉಂಟಾಗುತ್ತದೆ. ಇದನ್ನು ತಡೆದು ಬಸ್‌ ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಇದೀಗ ಕೆಲವೊಂದು ಬಸ್‌ ಮಾಲಕರು ಡಸ್ಟ್‌ ಬಿನ್‌ ಅಳವಡಿಸಲು ಮುಂದಾಗಿದ್ದಾರೆ.

ಲಾಂಗ್‌ರೂಟ್‌ ಬಸ್‌ಗಳಲ್ಲಿ ಯಶಸ್ವಿ
ಜಿಲ್ಲೆಯಲ್ಲಿ ಲಾಂಗ್‌ರೂಟ್‌ ಸಂಚರಿಸುವ ಕೆಲವೊಂದು ಬಸ್‌ ಗಳಲ್ಲಿ ಈಗಾಗಲೇ ಕಸದ ಬುಟ್ಟಿಗಳನ್ನು ಅಳವಡಿಸಲಾಗಿದೆ. ಧರ್ಮಸ್ಥಳ- ಕುಂದಾಪುರ, ಕಾರ್ಕಳ- ಬೆಳ್ತಂಗಡಿ, ಬೆಳ್ತಂಗಡಿ- ಉಡುಪಿ ಸಹಿತ ಇನ್ನಿತರ ಪ್ರದೇಶಗಳಿಗೆ ಸಂಚರಿಸುವ ಕೆಲವೊಂದು ಖಾಸಗಿ ಬಸ್‌ಗಳಲ್ಲಿ ಈಗಾಗಲೇ ಕಸದಬುಟ್ಟಿ ಇರಿಸಲಾಗಿದೆ. ಅಲ್ಲದೆ, ಪ್ರಯಾಣಿಕರು ಕೂಡ ಸ್ಪಂದಿಸಿ ಡಸ್ಟ್‌ಬಿನ್‌ಗೆ ಕಸ ಹಾಕುತ್ತಿದ್ದಾರೆ.

ಖಾಸಗಿ ಬಸ್‌ ನಿರ್ವಾಹಕ ದೇವದಾಸ ಸಾಲ್ಯಾನ್‌ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ‘ಬಸ್‌ಗಳಲ್ಲಿ ಕಸದ  ಬುಟ್ಟಿ ಇಟ್ಟು ಅದರ ನಿರ್ವಹಣೆ ಕೂಡ ಸರಿಯಾದ ರೀತಿಯಲ್ಲಿ ಮಾಡಬೇಕು. ನಾನು ನಿರ್ವಾಹಕನಾಗಿ ದುಡಿಯುವ ಬಸ್‌ನಲ್ಲಿ ಒಂದು ವರ್ಷಗಳಿಂದ ಕಸದ ಬುಟ್ಟಿ ಇರಿಸಿದ್ದೇವೆ. ಪ್ರಯಾಣಿಕರು ಕೂಡ ಜಾಗೃತರಾಗಿ ಬುಟ್ಟಿಗೇ ಕಸ ಹಾಕುತ್ತಿದ್ದಾರೆ. ಇದರಿಂದಾಗಿ ಸ್ವಚ್ಛ ಭಾರತ ಕನಸಿಗೆ ಕಿಂಚಿತ್ತು ಸಹಾಯ ಮಾಡಿದಂತಾಗುತ್ತದೆ’ ಎನ್ನುತ್ತಾರೆ. 

Advertisement

ಸದ್ಯದಲ್ಲೇ ಕಸದ ಬುಟ್ಟಿ ಅಳವಡಿಕೆ 
ದ.ಕ. ಜಿಲ್ಲಾ ಖಾಸಗಿ ಸಿಟಿ ಬಸ್‌ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್‌ ಆಳ್ವ ಅವರು ‘ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ ಬಸ್‌ಗಳಲ್ಲಿ ಸ್ವಚ್ಛತೆ ಅರಿವು ಮೂಡಿಸುವ ಸಲುವಾಗಿ ಸ್ಟೇಟ್‌ಬ್ಯಾಂಕ್‌ನಿಂದ ಮಂಗಳಾದೇವಿಗೆ ಸಂಚರಿಸುವ 27 ನಂಬರ್‌ನ 5 ಬಸ್‌ ಗಳಲ್ಲಿ ಮೊದಲನೇ ಹಂತದಲ್ಲಿ ಮುಂದಿನ ವಾರದಿಂದ ಕಸದ ಬುಟ್ಟಿ ಅಳವಡಿಸುತ್ತೇವೆ. ಬಳಿಕ ಮತ್ತಷ್ಟು ಬಸ್‌ಗಳಲ್ಲಿ ವಿಸ್ತರಿಸಲಿದ್ದೇವೆ ಎಂದು ತಿಳಿಸಿದ್ದಾರೆ.

ಸ್ವಚ್ಛವಾಗಿಡುವುದು ಕರ್ತವ್ಯ
ಬಸ್‌ಗಳಲ್ಲಿ ಕಸ ಬಿಸಾಕದೆ ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರಯಾಣಿಕರ ಕರ್ತವ್ಯವಾಗಿದೆ. ನಗರದಲ್ಲಿ ಸಂಚರಿಸುವ ಬಸ್‌ಗಳು ಸ್ವಚ್ಛವಾಗಿಡುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಸಿಟಿ ಬಸ್‌ ಒಳಗೆ ಕಸದ ಬುಟ್ಟಿ ಅಳವಡಿಕೆ ಮಾಡುತ್ತೇವೆ.
– ದಿಲ್‌ರಾಜ್‌ ಆಳ್ವ,
ಅಧ್ಯಕ್ಷ, ಖಾಸಗಿ ಸಿಟಿ ಬಸ್‌
ಮಾಲಕರ ಸಂಘ

ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next