ಗದಗ: ಗ್ರಾಮೀಣ ಸಾರ್ವಜನಿಕ ಗ್ರಂಥಾಲಯಗಳು ಸಮಸ್ಯೆಗಳ ಆಗರವಾಗಿವೆ. ಒಂದೆಡೆ ಅಗತ್ಯ ಮೂಲ ಸೌಲಭ್ಯಗಳಿಲ್ಲದೇ ಜನರಿಂದ ದೂರವಾಗುತ್ತಿವೆ. ಮತ್ತೂಂದೆಡೆ
ಸರಕಾರ ಒದಗಿಸಿದ ವಿವಿಧ ಸಾಮಗ್ರಿಗಳನ್ನು ಗ್ರಾಮೀಣ ಗ್ರಂಥಾಲಯಕ್ಕೆ ಸಾಗಿಸಲು ವೆಚ್ಚ ಭರಿಸಲಾಗದೇ, ಲಕ್ಷಾಂತರ ರೂ. ಮೌಲ್ಯದ ರ್ಯಾಕ್, ಅತ್ಯಾಧುನಿಕ ಕುರ್ಚಿ ಹಾಗೂ ಟೇಬಲ್‌ಗಳು ಮೂಲೆಯಲ್ಲೇ ಧೂಳು ತಿನ್ನುತ್ತಿವೆ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಂಥಾಲಯಗಳ ಪೈಕಿ ಹಲವು ವಾಚನಾಲಯಗಳಲ್ಲಿ ಓದುಗರಿಗೆ ಕೂಡ್ರಲು ಕುರ್ಚಿ-ಮೇಜುಗಳಿಲ್ಲ. ಸೂಕ್ತ ರ್ಯಾಕ್‌ಗಳಿಲ್ಲದೇ, ಪುಸ್ತಕಗಳು ಇಲಿ-ಹೆಗ್ಗಣಗಳಿಗೆ ತುತ್ತಾಗುತ್ತಿವೆ ಎಂಬ ಕೊರಗು ಗ್ರಂಥಾಲಯ ಮೇಲ್ವಿಚಾರಕರನ್ನು ಕಾಡುತ್ತಿದೆ.
ಹಿಂದಿನ ಖರ್ಚೇ ಮರಳಿಲ್ಲ: ಜಿಲ್ಲೆಯಲ್ಲಿ ಒಟ್ಟು 107 ಗ್ರಾಮಗಳಲ್ಲಿ ಗ್ರಂಥಾಲಯಗಳು ಕಾರ್ಯ ನಿರ್ವಹಿಸುತ್ತಿದ್ದು, ಕೆಲ ವರ್ಷಗಳಿಂದ ಇವುಗಳಿಗೆ ಪೀಠೊಪ ಕರಗಳು ಪೂರೈಕೆಯಾಗಿಲ್ಲ. ಈ ಹಿಂದೆ ಒದಗಿಸಿದ್ದ ರ್ಯಾಕ್‌ಗಳು ತುಕ್ಕು ಹಿಡಿದಿದ್ದು, ಕುರ್ಚಿಗಳು ಹಾಳಾಗಿವೆ. ಕೆಲ ಗ್ರಂಥಾಲಯ ಸಹಾಯಕರು ತಮ್ಮ ಸ್ವಂತ ಖರ್ಚಿನಲ್ಲೇ ದುರಸ್ತಿಗೊಳಿಸಿದ್ದಾರೆ. ಆ ಖರ್ಚೆ ಇನ್ನೂ ಮರಳಿಲ್ಲ.
ರ್ಯಾಕ್ ಸಾಗಿಸುವುದೇ ಸಮಸ್ಯೆ: ಈ ಸಮಸ್ಯೆ ನಿವಾರಿಸಲು ಗ್ರಂಥಾಲಯ ಇಲಾಖೆ ಮೂಲಕ ಕಳೆದ ವರ್ಷ 100 ಕಬ್ಬಿಣದ ರ್ಯಾಕ್(ಕಪಾಟು)ಗಳು, ಕುಷನ್ ಚೇರ್ ಮತ್ತು ಕಬ್ಬಿಣದ ಟೇಬಲ್‌ಗಳನ್ನು ಒದಗಿಸಿದೆ. ಆದರೆ, ಅವುಗಳನ್ನು ಜಿಲ್ಲಾ ಗ್ರಂಥಾಲಯದಿಂದ ತಮ್ಮ ಗ್ರಾಮಗಳಿಗೆ ಸಾಗಿಸುವುದೇ ಸವಾಲಿನ ಕೆಲಸವಾಗಿದೆ. ಗದಗ ತಾಲೂಕು ಹೊರತಾಗಿ ಇನ್ನುಳಿದ ಯಾವುದೇ ತಾಲೂಕಿನ ಹಳ್ಳಿಗೆ ಸಾಗಿಸಬೇಕೆಂದರೂ, ಕನಿಷ್ಠ ಒಂದೂವರೆ ಸಾವಿರ ರೂ. ಗಾಡಿ ಬಾಡಿಗೆ ತೆರಬೇಕಾಗುತ್ತದೆ. ಈ ಬಗ್ಗೆ ಕೇಳಿದರೆ, ಜಿಲ್ಲಾ ಗ್ರಂಥಾಲಯ ಅಧಿಕಾರಿಗಳು ಅದು ನಮ್ಮ ಜವಾಬ್ದಾರಿಯಲ್ಲ ಎನ್ನುತ್ತಿದ್ದಾರೆ. ನಮಗೆ ಬರುವ 7 ಸಾವಿರ ರೂ. ಗೌರವಧನದಲ್ಲಿ ಇದನ್ನೆಲ್ಲಾ ಹೇಗೆ ನಿಭಾಯಿಸಬೇಕು ಎಂಬುದು ಗ್ರಾಮೀಣ ಗ್ರಂಥಪಾಲಕರ ಅಸಹಾಯಕ ಮಾತು.
ಈಗಾಗಲೇ ಗ್ರಾಮೀಣ ಗ್ರಂಥಾಲಯಗಳನ್ನು ಗ್ರಾಪಂ ಸುಪರ್ದಿಗೆ ವಹಿಸಲಾಗಿದ್ದು, ಆಯಾ ಗ್ರಂಥಾಲಯಗಳಿಗೆ ಗ್ರಂಥ, ಪೀಠೊಪಕರಣಗಳನ್ನು ಒದಗಿಸಲಾಗುತ್ತದೆ. ಅವುಗಳನ್ನು ಅವರೇ ಕೊಂಡೊಯ್ಯಬೇಕು ಎಂಬುದು ಗ್ರಂಥಾಲಯ ಇಲಾಖೆ ಅಧಿಕಾರಿಗಳ ವಾದ. ಒಟ್ಟಾರೆ, ಪೀಠೊಪಕರಣ ವೆಚ್ಚದಲ್ಲಿ ಗ್ರಂಥಾಲಯ ಇಲಾಖೆ ಹಾಗೂ ಗ್ರಾಮೀಣ ಗ್ರಂಥಪಾಲಕರ ನಡುವಿನ ಹಗ್ಗಜಗ್ಗಾಟ ನಡೆದಿದೆ. ಪರಿಣಾಮ ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತಾಗಿದೆ ಗ್ರಾಮೀಣ ಗ್ರಂಥಾಲಯಗಳ ಸ್ಥಿತಿ.
-ವೀರೇಂದ್ರ ನಾಗಲದಿನ್ನಿ