Advertisement

ನಗರದ ದೇವಾಲಯಗಳಲ್ಲಿ ದಸರಾ ವೈಭವ

10:47 AM Oct 16, 2021 | Team Udayavani |

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಗುರುವಾರ ಮತ್ತು ಶುಕ್ರವಾರ ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ಸಂಭ್ರಮ ಕಂಡು ಬಂತು. ವರ್ಷಧಾರೆಯ ನಡುವೆ ಅಲ್ಲಲ್ಲಿ ವಾಹನಗಳ ಪೂಜೆ ಸಲ್ಲಿಸಲಾಯಿತು. ವಿಜಯ ದಶಮಿ ಅಂಗವಾಗಿ ಮನೆಯಲ್ಲಿನ ಯಂತ್ರೋಪಕರಣಗಳು, ಆಯುಧಗಳಿಗೆ, ಅಂಗಡಿ- ಮುಂಗಟ್ಟುಗಳಿಗೂ ಇದೇ ವೇಳೆ ಪೂಜೆ ನೆರವೇರಿಸಲಾಯಿತು.

Advertisement

ಶರನ್ನವರಾತ್ರಿ ಹಿನ್ನೆಲೆಯಲ್ಲಿ ನಗರದ ಐತಿಹಾಸ ಪ್ರಸಿದ್ಧ ಬನಶಂಕರಿ ದೇವಾಲಯ, ರಾಜರಾಜೇಶ್ವರಿನಗರದ ರಾಜರಾಜೇಶ್ವರಿ ದೇವಸ್ಥಾನ ಸೇರಿದಂತೆ ನಾನಾ ದೇವಸ್ಥಾನಗಳಲ್ಲಿ ಸರಳ ಪಲ್ಲಕ್ಕಿ ಉತ್ಸವ ನಡೆಯಿತು. ಈ ವೇಳೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು. ಶುಕ್ರವಾರದ ಹಿನ್ನೆಲೆಯಲ್ಲಿ ಶಕ್ತಿ ದೇವತೆಗಳಿಗೆ ಮಹಿಳೆಯರು ದೀಪ ಹಚ್ಚಿ ನಮಿಸಿದರು.

ಅಧಿಕ ಸಂಖ್ಯೆಯಲ್ಲಿ ನೆರೆದ ಭಕ್ತರು: ದಸರಾ ಹಿನ್ನೆಲೆಯಲ್ಲಿ ಬನಶಂಕರಿ ದೇವಾಲಯದಲ್ಲಿ ಅಮ್ಮನಿಗೆ ಮಲ್ಲಿಗೆ ಹೂವಿನ ಅಲಂಕಾರ ನಡೆಯಿತು. ಜತೆಗೆ ಚಂಡಿಕಾ ಹೋಮ ಜರುಗಿತು. ದಸರಾ ವಿಶೇಷ ಪೂಜೆಯ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ 5 ಗಂಟೆಯಿಂದಲೇ ಭಕ್ತರು ಬನಶಂಕರಿ ದೇವಾಲಯದ ಎದುರು ಸಾಲುಗಟ್ಟಿದ್ದರು. ಸರದಿ ಸಲ್ಲಿನಲ್ಲಿ ಬಂದ ದೇವರಿಗೆ ಪೂಜೆ ಸಲ್ಲಿಸಿದರು. ಸಂಜೆ ವೇಳೆ ಬನಶಂಕರಿ ದೇವಾಲಯ ಸುತ್ತಮುತ್ತ ಮಳೆ ಸುರಿಯಿತು.

ಮಳೆ ನಡೆಯೂ ಭಕ್ತರ ದೇವರ ದರ್ಶನ ಪಡೆದರು ಎಂದು ಬನಶಂಕರಿ ದೇವಾಲಯದ ಆರ್ಚಕರು ಮಾಹಿತಿ ನೀಡಿದ್ದಾರೆ. ದೇವಾಲಯದ ಆವರಣದಲ್ಲೇ ಅನ್ನದಾಸೋಹ ನಡೆಯಿತು. ಆವರಣದಲ್ಲಿ ಒಂದೆಡೆ ಪೂಜೆಗೆ ಬಂದವರು, ಮತ್ತೂಂದೆಡೆ ಊಟಕ್ಕೆ ನೆರೆದಿದ್ದವರು ಸೇರಿ ಸಾಕಷ್ಟು ಜನಸಂದಣಿ ಉಂಟಾಗಿತ್ತು. ಅಲ್ಲಿನ ಸಿಬ್ಬಂದಿ ಕೂಡ ಭಕ್ತರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು.

ಸರ್ಕಲ್‌ ಮಾರಮ್ಮ ದೇವಾಲಯದಲ್ಲಿ ಪೂಜೆ: ದಸರಾ ಅಂಗವಾಗಿ ಯಶವಂತಪುರರ ವೃತ್ತದ ಬಳಿಯ ಗಾಯತ್ರಿ ದೇವಸ್ಥಾನ, ಚಿನ್ನಯ್ಯನಪಾಳ್ಯದ ಮಾರಮ್ಮ ಮತ್ತು ಆಂಜನೇಯಸ್ವಾಮಿ ದೇವಾಲಯ, ಜೆ.ಪಿ ನಗರದ ಬ್ರಹ್ಮ ವಿಷ್ಣು ಮಹೇಶ್ವರ ದೇವಸ್ಥಾನ, ಎಚ್‌ಎಂಟಿ ಬಡಾವಣೆಯ ಚೌಡೇಶ್ವರಿ ದೇವಾಲಯ, ಶಂಕರಪುರದ ಮಹೇಶ್ವರಮ್ಮ ದೇವಿ ದೇವಾಲಯ, ಕೃಷ್ಣರಾಜಪುರದ ದುರ್ಗಾ ಮಹೇಶ್ವರಮ್ಮ ದೇವಾಲಯ, ಶಂಕರಪುರದ ಶೃಂಗೇರಿ ಶಂಕರ ಮಠ, ಜೆ.ಪಿ.ನಗರದ ವಿಜಯ ಗಣಪತಿ ಮತ್ತು ಶಾರದಾ ಚಂದ್ರಮೌಳೀಶ್ವರ ದೇವಸ್ಥಾನ, ಕೋಣನಕುಂಟೆಯ ಮಾತಾ ಅನ್ನಪೂರ್ಣೇಶ್ವರಿ ದೇವಾಲಯ, ನಂದಿನಿ ಬಡಾವಣೆಯ ದುರ್ಗಾಪರಮೇಶ್ವರಿ ದೇವಾಲಯ ಸೇರಿದಂತೆ ಹಲವೆಡೆ ವಿಶೇಷ ಪೂಜೆ ನಡೆಯಿತು.

Advertisement

ಅಧಿಕ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು. ಮಲ್ಲೇಶ್ವರದ ಸರ್ಕಲ್‌ ಮಾರಮ್ಮ ದೇವಾಲಯದಲ್ಲಿ ವಿಜಯ ದಶಮಿ ಹಿನ್ನೆಲೆಯಲ್ಲಿ ವಾಹನಗಳಿಗೆ ವಿಶೇಷ ಪೂಜೆ ನಡೆಯಿತು. ಆಯುಧ ಪೂಜೆಯ ಅಂಗವಾಗಿ ಅಧಿಕ ಸಂಖ್ಯೆಯಲ್ಲಿ ವಾಹನಗಳು ನರೆದಿದ್ದವು. ಇದೇ ವೇಳೆ ತರಕಾರಿ ಮಾರಾಟಗಾರರು ಕೂಡ ಸಾಲಾಗಿ ತಳ್ಳುಗಾಡಿಗಳನ್ನು ನಿಲ್ಲಿಸಿ ಪೂಜೆ ಸಲ್ಲಿಸಿದರು. ಒಳ್ಳೆಯ ದಿನವೆಂದು ವಿಜಯದಶಮಿಯಂದು ಹಲವರು ಗೃಹಪ್ರವೇಶ ಸೇರಿದಂತೆ ಮತ್ತಿತರರ ಶುಭ ಸಮಾರಂಭಗಳು ನಡೆದವು.

ದುರ್ಗಾ ದೇವಿ ಮೂರ್ತಿ ವಿಸರ್ಜನೆ

ಹಲಸೂರು ಭಾಗದ ವ್ಯಾಪ್ತಿಯಲ್ಲಿ ಬೆಂಗಾಳಿ ಸಮುದಾಯದವರು ಅದ್ಧೂರಿಯಾಗಿ ದುರ್ಗಾ ದೇವಿ ಪೂಜೆಯನ್ನು ಪ್ರತಿ ವರ್ಷ ಅಚರಿಸುತ್ತಾರೆ. ಆದರೆ ಕೋವಿಡ್‌ ಹಿನ್ನೆಲೆಯಲ್ಲಿ ಈ ಬಾರಿ ಸರಳವಾಗಿ ಆಚರಿಸಲಾಯಿತು. ಹಲಸೂರು ಕೆರೆ ಬಳಿ ಬೆಂಗಾಳಿ ಸಮುದಾಯದವರು ಶುಕ್ರವಾರ ದುರ್ಗಾದೇವಿ ಮೂರ್ತಿಯನ್ನು ವಿಸರ್ಜಿಸಿದ್ದು, ಸೀಮಿತ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಇದೇ ರೀತಿ ಬೇರೆ ಬೇರೆ ಬಡಾವಣೆಗಳಲ್ಲೂ ದುರ್ಗಾಪೂಜೆ ಮತ್ತು ಮೂರ್ತಿಯ ವಿಸರ್ಜನೆ ಕಾರ್ಯಕ್ರಮಗಳು ಕೂಡ ನಡೆದವು.

ಗಾಳಿ ಆಂಜನೇಯ ದೇವಾಲಯದಲ್ಲಿ ಪೂಜೆ

ಆಯುಧ ಪೂಜೆ ಹಾಗೂ ವಿಜಯ ದಶಮಿ ಹಿನ್ನೆಲೆಯಲ್ಲಿ ಮೈಸೂರು ರಸ್ತೆಯ ಗಾಳಿ ಆಂಜನೇಯ ಸ್ವಾಮಿ ದೇವಾಲಯ ಸೇರಿದಂತೆ ಮತ್ತಿತರರ ವಾಹನಗಳಿಗೆ ವಿಶೇಷ ಪೂಜೆ ನಡೆಯಿತು. ವಾಹನ ಮಾಲೀಕರು ಪೂಜೆಗಾಗಿ ಸಾಲಲ್ಲಿ ನಿಂತು ಅರ್ಚಕರಿಂದ ವಾಹನಗಳಿಗೆ ಪೂಜೆ ಮಾಡಿಸಿದರು. ಇನ್ನು ಕೆಲವರು ಮನೆಗಳಿಗೇ ಅರ್ಚಕರನ್ನು ಕರೆಸಿ ಮನೆ ಹಾಗೂ ತಮ್ಮ ವಾಹನಗಳಿಗೆ ಪೂಜೆ ಸಲ್ಲಿಸಿದರು.

ಇಸ್ಕಾನ್‌ನಲ್ಲಿ ವಿಜಯ ದಶಮಿ

ಬೆಂಗಳೂರು: ಇಸ್ಕಾನ್‌ನ ಹರೇಕೃಷ್ಣ ಗಿರಿಯಲ್ಲಿ ಶ್ರದ್ಧಾಭಕ್ತಿಯಿಂದ ಶುಕ್ರವಾರ ವಿಜಯದಶಮಿ ಆಚರಿಸಲಾಯಿತು. ವಿಜಯ ದಶಮಿ ಹಿನ್ನೆಲೆಯಲ್ಲಿ ಶ್ರೀಕೃಷ್ಣ ಬಲರಾಮ ದೇವರ ಹಾಗೂ ರಾಮ ಲಕ್ಷ್ಮಣರ ಅಲಂಕಾರ ಮಾಡಲಾಗಿತ್ತು. ಜತೆಗೆ ದಸರಾ ಹಬ್ಬದ ಹಿನ್ನೆಲೆಯಲ್ಲಿ ವಿಶೇಷ ಪೂಜೆಗಳು ನಡೆದವು. ಇದೇ ಸಂದರ್ಭದಲ್ಲಿ ಇಸ್ಕಾನ್‌ ಅಧ್ಯಕ್ಷ ಶ್ರೀ ಮಧುಪಂಡಿತ ದಾಸರು ವಿಜಯದಶಮಿ ಹಬ್ಬದ ಕುರಿತು ಪ್ರವಚನ ನೀಡಿದರು.

ಸಂಜೆ ವೇಳೆ ಶ್ರೀರಾಮ ತಾರಕ ಯಜ್ಞ ಹಾಗೂ ಶ್ರೀ ರಾಮ ಕೀರ್ತನೆಗಳು ನಡೆದವು. ಕೋವಿಡ್‌ ಹಿನ್ನೆಲೆಯಲ್ಲಿ ಇಡೀ ಕಾರ್ಯಕ್ರಮವನ್ನು ಯೂಟ್ಯೂಬ್‌ ನಲ್ಲಿರುವ ದೇವಸ್ಥಾನದ ಅಧಿಕೃತ ಚಾನೆಲ್‌ ಹಾಗೂ ಫೇಸ್‌ ಬುಕ್‌ನಲ್ಲಿ ನೇರ ಪ್ರಸಾರ ಮಾಡಲಾಯಿತು. ಅಧಿಕ ಸಂಖ್ಯೆಲ್ಲಿ ಭಕ್ತರು ಸಾಮಾಜಿಕ ಜಾಲತಾಣಗಳ ಮೂಲಕ ದೇವಾಲಯದಲ್ಲಿ ಜರುಗಿದ ಕಾರ್ಯಕ್ರಮಗಳನ್ನು ವೀಕ್ಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next