Advertisement
ಕಳೆದ ಒಂದೆರಡು ದಿನಗಳ ಹಿಂದಷ್ಟೇ ಪ್ರತಿ ಕೆ.ಜಿ. 600ರಿಂದ 700 ರೂ.ವರೆಗೂ ಮಾರಾಟವಾಗುತ್ತಿದ್ದ ಉತ್ತಮ ಗುಣಮಟ್ಟದ ಕನಕಾಂಬರ ಹೂವು ಶನಿವಾರ ಕೆ.ಆರ್.ಮಾರುಕಟ್ಟೆಯಲ್ಲಿ 1 ಸಾವಿರ ರೂ.ಗೆ ಖರೀದಿಯಾಯಿತು. ಕೆ.ಜಿಗೆ 15ರಿಂದ 20 ರೂ.ಗೆ ಮಾರಾಟ ಆಗುತ್ತಿದ್ದ ಬಿಡಿ ಹೂ ಕೂಡ 30ರಿಂದ 40 ರೂ.ವರೆಗೂ ಮಾರಾಟವಾಗಿದೆ.
ಕೆಲವು ದಿನಗಳ ಹಿಂದೆ ಸೇವಂತಿಗೆ ಹೂವನ್ನು ಕೇಳುವವರೇ ಇರಲಿಲ್ಲ. ಆದರೆ ಶನಿವಾರ ಉತ್ತಮ ಗುಣಮಟ್ಟದ ವಿವಿಧ ಬಣ್ಣಗಳ ಬಿಡಿ ಸೇವಂತಿಗೆ ಹೂವು ಪ್ರತಿ ಕೇಜಿಗೆ 30ರಿಂದ 40 ರೂ.ವರೆಗೂ ಖರೀದಿಯಾಯಿತು ಎನ್ನುತ್ತಾರೆ ಹೂವಿನ ವ್ಯಾಪಾರಿ ಎಳಂಗೋವನ್.
Related Articles
ಈ ಹಿಂದೆ ಉತ್ತಮ ಗುಣಮಟ್ಟದ ಮಲ್ಲಿಗೆ ಮೊಗ್ಗು ಪ್ರತಿ ಕೆ.ಜಿಗೆ 400 ರೂ.ದಿಂದ 500 ರೂ.ವರೆಗೂ ಖರೀದಿಯಾಗುತ್ತಿತ್ತು. ಆದರೆ ಶನಿವಾರ ತಮಿಳುನಾಡು ಭಾಗದ ಶ್ರೇಷ್ಠ ದರ್ಜೆಯ ಮಲ್ಲಿಗೆ ಮೊಗ್ಗು ಕೇಜಿಗೆ 600ರಿಂದ 700 ರೂ.ವರೆಗೂ ಮಾರಾಟವಾಯಿತು. ಮಲ್ಲಿಗೆ ಮೊಳಕ್ಕೆ 50 ರೂ.ವರೆಗೆ, ವಿವಿಧ ಬಗೆಯ ಸೇವಂತಿಗೆ ಬಿಡಿ ಹೂವು ಮಾರಿಗೆ 70 ರೂ. ನಿಂದ 80 ರೂ.ವರೆಗೂ ಖರೀದಿಯಾಗಿದೆ.
Advertisement
ಸಾವಿರ ರೂ.ದಾಟಿದ ಮಲ್ಲಿಗೆ ಮೊಗ್ಗಿನ ಹಾರದೊಡ್ಡ ಗಾತ್ರದ ಗುಲಾಬಿ ಹೂವಿನ ಹಾರಕ್ಕೂ ಬೇಡಿಕೆ ಉಂಟಾಗಿದೆ. ಕೆಂಪು ಗುಲಾಬಿ ಬಣ್ಣದ ದೊಡ್ಡಗಾತ್ರದ ಹೂವಿನ ಹಾರ 1,400 ರೂ. ವರೆಗೆ ಖರೀದಿಯಾಗಿದೆ. ಹಾಗೆಯೇ ಮಲ್ಲಿಗೆ ಮೊಗ್ಗಿನ ಹಾರಕ್ಕೂ ಡಿಮ್ಯಾಂಡ್ ಬಂದಿದೆ. ಮಲ್ಲಿಗೆ ಹೂವಿನ ಹಾರ 1,300ರಿಂದ 1,400 ರೂ.ವರೆಗೆ ಮಾರಾಟವಾಯಿತು. ಮಲ್ಲಿಗೆ ಹೂವಿನ ದಿಂಡು 120ರೂ.ಗೆ, ಸುಗಂಧರಾಜ ಕೆ.ಜಿ 100 ರೂ.ಗೆ ಜನರು ಖರೀದಿ ಮಾಡಿದರು. ಕಳೆದ ಒಂದೆರಡು ತಿಂಗಳಿಂದ ಹೂವಿಗೆ ಹೆಚ್ಚಿನ ಬೇಡಿಕೆ ಇರಲಿಲ್ಲ. ಆದರೆ, ದಸರಾ ಹಬ್ಬದ ಸೀಜನ್ ಆರಂಭವಾಗಿರುವುದರಿಂದ ಮಲ್ಲಿಗೆ, ಕನಕಾಂಬರ ಮತ್ತಿತರರ ಹೂವುಗಳಿಗೆ ಬೇಡಿಕೆ ಉಂಟಾಗಿದೆ ಎಂದು ಹೂವಿನ ವ್ಯಾಪಾರಿ ಮುನಿಯಮ್ಮ ಹೇಳುತ್ತಾರೆ. ಹಬ್ಬದ ದಿನಗಳಲ್ಲಿ ಎಲ್ಲ ಹೂವಿನ ಬೆಲೆಗಳಲ್ಲಿ ಹೆಚ್ಚಳವಾಗುವ ಸಾಧ್ಯತೆಯಿದೆ ಎನ್ನುತ್ತಾರೆ. ಬೆಂಗಳೂರು ಮಾರುಕಟ್ಟೆಗೆ ಕೋಲಾರ, ಚಿಕ್ಕಬಳ್ಳಾಪುರ ಸೇರಿ ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಿಂದ ರೈತರು ಹೂವು ಪೂರೈಸುತ್ತಾರೆ. ತಮಿಳುನಾಡಿನಿಂದಲೂ ಮಲ್ಲಿಗೆ ಮೊಗ್ಗು ಪೂರೈಕೆ ಆಗುತ್ತಿದೆ. ಕಳೆದ ಹಲವು ದಿನಗಳಿಂದ ಹೂವಿನ ಬೆಳೆಯಲ್ಲಿ ಅಂತಹ ಹೆಚ್ಚಳ ಕಂಡು ಬರಲಿಲ್ಲ. ಆದರೆ, ಹಬ್ಬದ ಸೀಜನ್ ಹಿನ್ನೆಲೆಯಲ್ಲಿ ಈಗ ಮಲ್ಲಿಗೆ, ಕನಕಾಂಬರ, ಸೇವಂತಿಗೆ ಸೇರಿ ಇನ್ನಿತರ ಹೂವಿನ ಬೆಲೆಯಲ್ಲಿ ಹೆಚ್ಚಳವಾಗಿದೆ.
– ಮಂಜುನಾಥ್,
ಹೋಲ್‌ಸೇಲ್ ಹೂವಿನ ವ್ಯಾಪಾರಿ – ದೇವೇಶ ಸೂರಗುಪ್ಪ