ಮೈಸೂರು: ದಸರಾ ಮಹೋತ್ಸವ ಸಮೀಪಿಸುತ್ತಿರುವ ಹಿನ್ನೆಲೆ ಜಂಬೂ ಸವಾರಿಗೆ ಗಜಪಡೆ ಆಯ್ಕೆ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು, ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಹಲವು ಆನೆ ಕ್ಯಾಂಪ್‌ಗ್ಳಿಗೆ ಭೇಟಿ ನೀಡಿ ಆನೆಗಳ ಆರೋಗ್ಯ ಸ್ಥಿತಿಯನ್ನು ಪರಿಶೀಲನೆ ನಡೆಸಿದರು.
ಮೈಸೂರು ವೈಲ್ಡ್‌ಲೈಫ್ ವಿಭಾಗದ ಡಿಸಿಎಫ್ ಅಲೆಕ್ಸಾಂಡರ್ ನೇತೃತ್ವದಲ್ಲಿ ಪಶು ವೈದ್ಯ ಡಾ.ಡಿ.ಎನ್.ನಾಗರಾಜು ಹಾಗೂ ಇನ್ನಿತರ ಸಿಬ್ಬಂದಿ ನಾಗರಹೊಳೆ ಅಭಯಾರಣ್ಯದ ವ್ಯಾಪ್ತಿಗೆ ಒಳಪಡುವ ಬಳ್ಳೆ, ತಿತಿಮತಿ, ದುಬಾರೆ ಆನೆ ಕ್ಯಾಂಪ್‌ಗೆ ತೆರಳಿ ದಸರಾ ಮಹೋತ್ಸವದಲ್ಲಿ ಕರೆತರಲು ಉದ್ದೇಶಿಸಿರುವ ಆನೆಗಳ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿದರು. ಈ ವೇಳೆ ನಾಗರಹೊಳೆ ಅರಣ್ಯ ಪ್ರದೇಶ ವ್ಯಾಪ್ತಿಯ ಪಶುವೈದ್ಯ ಡಾ.ಮುಜೀಬ್ ಆನೆಗಳ ಚಲನವಲಗಳ ಬಗ್ಗೆ ಮಾಹಿತಿ ನೀಡಿದರು.
ಈ ಬಾರಿಯ ದಸರಾ ಮಹೋತ್ಸವ ಸೆ.29ರಿಂದ ಆರಂಭವಾಗಲಿದ್ದು, ಅಕ್ಟೋಬರ್ 8ರಂದು ಜಂಬೂ ಸವಾರಿ ನೆರವೇರಲಿದ್ದು, ಈ ಹಿನ್ನೆಲೆ ವಿವಿಧ ಆನೆ ಕ್ಯಾಂಪ್‌ಗ್ಳಿಂದೆರಡು 50ದಿನಗಳ ಮುನ್ನವೇ ಆನೆಗಳನ್ನು ಮೈಸೂರು ಅರಮನೆ ಅಂಗಳಕ್ಕೆ ಕರೆತರುವ ಸಂಪ್ರದಾಯ. ಈ ನಿಟ್ಟಿನಲ್ಲಿ ಅಧಿಕಾರಿಗಳ ಬಳ್ಳೆ, ತಿತಿಮತಿ, ದುಬಾರೆ ಆನೆ ಕ್ಯಾಂಪ್‌ಗೆ ತೆರಳಿ ಎಂಟು ಆನೆಗಳ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಲಾಯಿತು.
ಬಳ್ಳೆ ಶಿಬಿರದಲ್ಲಿರುವ ಅರ್ಜುನ, ತಿತಿಮತಿ ಕ್ಯಾಂಪ್‌ನಲ್ಲಿ ಬಲರಾಮ, ದುಬಾರೆ ಕ್ಯಾಂಪ್‌ನಿಂದ ವಿಜಯ, ಹರ್ಷ, ವಿಕ್ರಮ, ಕಾವೇರಿ, ಧನಂಜಯ ಹಾಗೂ ಈಶ್ವರ ಆನೆಗಳ ಚಲನವಲನ ಹಾಗೂ ಆರೋಗ್ಯದ ಬಗ್ಗೆ ಮಾಹಿತಿ ಪಡೆಯಲಾಯಿತು.
ನಾಗರಹೊಳೆ ವ್ಯಾಪ್ತಿಯ ಹಾಗೂ ದುಬಾರೆ ಆನೆ ಕ್ಯಾಂಪ್‌ಗ್ಳಲ್ಲಿರುವ ಆನೆಗಳ ಆರೋಗ್ಯ ಸ್ಥಿತಿ ಪರಿಶೀಲಿಸಲಾಗಿದೆ. ಆನೆಗಳ ಆರೋಗ್ಯ ಸ್ಥಿತಿ, ಮದ ಬಂದಿರುವ ಬಗ್ಗೆ, ಅನಾರೋಗ್ಯಕ್ಕೀಡಾಗಿರುವ ಬಗ್ಗೆ, ಹೆಣ್ಣಾನೆಗಳು ಗರ್ಭಿಣಿಯಾಗಿದೆಯಾ ಎಂದು ಪರಿಶೀಲಿಸಲಾಗಿದೆ. ಸಧ್ಯಕ್ಕೆ ಎಲ್ಲಾ ಆನೆಗಳ ಆರೋಗ್ಯ ಸ್ಥಿತಿ ಉತ್ತಮವಾಗಿದೆ.
-ಡಾ.ಡಿ.ಎನ್.ನಾಗರಾಜು, ಪಶುವೈದ್ಯ