ಮೈಸೂರು: “ಈ ಬಾರಿಯ ದಸರಾ ಮಹೋತ್ಸವ ಉದ್ಘಾಟನೆಗೆ ಸರ್ಕಾರ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಸಂತೋಷವಾಗಿದೆ. ಇದಕ್ಕಾಗಿ ಸರ್ಕಾರಕ್ಕೆ ನನ್ನ ಧನ್ಯವಾದ ತಿಳಿಸುತ್ತೇನೆ’ ಎಂದು ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಪ್ರತಿಕ್ರಿಯಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಸರಾ ಕೇವಲ ಆಚರಣೆಯಷ್ಟೇ ಅಲ್ಲ, ಅದೊಂದು ಭಾವನಾತ್ಮಕ ವಾಗಿ ಬೆಳೆದು ಬಂದ ಹಬ್ಬವಾಗಿದೆ.
1949ರಲ್ಲಿ ಮೊದಲ ಬಾರಿಗೆ ಮೈಸೂರಿಗೆ ಬಂದಾಗಿನಿಂದಲೂ ದಸರಾ ನೋಡುತ್ತಾ ಬಂದಿದ್ದೇನೆ. 2-3 ಬಾರಿ ಹತ್ತಿರದಿಂದ ದಸರಾ ನೋಡಿದ್ದೇನೆ ಅಷ್ಟೇ. ಹಿಂದೆ ಅರಮನೆ ಮತ್ತು ಅರಸರ ಕೇಂದ್ರೀಕೃತವಾಗಿ ವಿಜೃಂಭಣೆಯಿಂದ ದಸರಾ ನಡೆಯುತ್ತಿತ್ತು. ಆಗೆಲ್ಲಾ ಮಹಾರಾಜರು ಅಂಬಾರಿಯಲ್ಲಿ ಕುಳಿತು ಹೋಗುತ್ತಿದ್ದರು. ಈಗ ಅದರ ಬಗ್ಗೆ ಮಾತನಾ ಡುವಷ್ಟು ನೆನಪುಗಳು ನನ್ನಲ್ಲಿ ಇಲ್ಲ. ಮಹಾರಾಜರು ವೈಭವದಿಂದ ದಸರಾ ನಡೆಸುತ್ತಿದ್ದರು ಎಂದರು.
ದಸರಾಕ್ಕೆ ನೀಡುವ ಹಣ ವ್ಯರ್ಥವಾಗುವುದಿಲ್ಲ: ಹಿಂದೆ ಎಲ್ಲರ ಮನೆಯಲ್ಲೂ ನೆಂಟರಿಷ್ಟರು ತುಂಬಿರುತ್ತಿದ್ದರು. ಆದರೆ ಈಗ ಸಾರಿಗೆ, ಸಂಪರ್ಕ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಯಾಗಿ ಮತ್ತಷ್ಟು ಮೆರುಗು ಪಡೆದುಕೊಂಡಿದೆ. ದೇಶ, ವಿದೇಶಗಳಿಂದ ಜನರು ದಸರಾ ವೀಕ್ಷಣೆಗೆ ಬರುತ್ತಾರೆ. ಇಲ್ಲಿನ ಪ್ರವಾಸೋದ್ಯಮ, ವ್ಯಾಪಾರ ಸೇರಿದಂತೆ ಎಲ್ಲವೂ ಅಭಿವೃದ್ಧಿಯಾಗುತ್ತದೆ.
ಹೀಗಾಗಿ, ಸರ್ಕಾರ ದಸರಾಕ್ಕೆ ನೀಡುವ ಹಣ ವ್ಯರ್ಥವಾಗುವುದಿಲ್ಲ. ಅದಕ್ಕಿಂತ ಎರಡು ಪಟ್ಟು ಹಣ ಸಂಪಾದನೆ ಆಗಲಿದೆ ಎಂದರು. “ರಾಜ್ಯದಲ್ಲಿನ ಅತಿವೃಷ್ಟಿ ಹಿನ್ನೆಲೆಯಲ್ಲಿ ದಸರಾವನ್ನು ಯಾವ ರೀತಿ ಆಚರಣೆ ಮಾಡಬೇಕು ಎಂಬುದು ಸರ್ಕಾರಕ್ಕೆ ಬಿಟ್ಟದ್ದು. ಈ ಬಗ್ಗೆ ನಾನು ಏನನ್ನು ಹೇಳುವುದಿಲ್ಲ. ಏಕೆಂದರೆ ಸರ್ಕಾರಕ್ಕೆ ಏನು ಮಾಡಬೇಕು ಎಂಬುದು ಗೊತ್ತಿದೆ’ ಎಂದು ಹೇಳಿದರು.
ನೆರೆ ಪರಿಹಾರಕ್ಕೆ ತಮಿಳುನಾಡಿನಿಂದ ಹಣ ಕೇಳಿ: “ಕಳೆದ ವರ್ಷ ಮಳೆಯಿಂದಾಗಿ ಕೊಡಗಿನಲ್ಲಿ ಸಾಕಷ್ಟು ಹಾನಿಯಾಗಿತ್ತು. ಸೋನೆ ಮಳೆ ಬಿದ್ದ ತಕ್ಷಣ ನೀರು ಕೇಳುವ ತಮಿಳುನಾಡಿನಿಂದ ಕೊಡಗಿನ ಪುನರ್ ನಿರ್ಮಾಣಕ್ಕೆ ಹಣ ಕೇಳಿ ಎಂದು ಅಂದಿನ ಮುಖ್ಯಮಂತ್ರಿಗೆ ಪತ್ರ ಬರೆದಿದ್ದೆ. ಆದರೆ, ನನ್ನ ಪತ್ರಕ್ಕೆ ಅವರು ಉತ್ತರವನ್ನೇ ಬರೆಯಲಿಲ್ಲ. ಈಗಲೂ ಅದೇ ಒತ್ತಾಯ ಮಾಡುತ್ತೇನೆ. ರಾಜ್ಯದಲ್ಲಿ ಹೆಚ್ಚು ನೆರೆ ಬಂದಿದೆ.
ನಮ್ಮ ಬಳಿ ಇಲ್ಲದಿದ್ದಾಗಲೂ ನೀರು ಕೇಳುವ ತಮಿಳುನಾಡಿನ ನಿಲುವು ಏನು ಅಂತ ಕೇಳಿ? ಅವರು ಎಷ್ಟು ಹಣವನ್ನು ನಮ್ಮ ರಾಜ್ಯಕ್ಕೆ ಕೊಡುತ್ತಾರೆ ಎಂದು ಕೇಳಬೇಕು. ಈ ಸಂದರ್ಭದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದರೆ ನಾಳೆ ಅದು ಉಪಯೋಗ ಆಗಲಿದೆ. ದಸರಾ ಉದ್ಘಾಟಕರಾಗಿ ನನ್ನನ್ನು ಆಯ್ಕೆ ಮಾಡಿದ ಸರ್ಕಾರವನ್ನು ಈ ಬಗ್ಗೆ ಒತ್ತಾಯಿಸುತ್ತೇನೆ’ ಎಂದು ಭೈರಪ್ಪ ಹೇಳಿದರು.
ನನಗೆ ಹಾರ- ತುರಾಯಿಗಳು ಮುಖ್ಯ ಅನಿಸುವುದಿಲ್ಲ. ಬದಲಿಗೆ ನಾ ಬರೆದ ಪುಸ್ತಕಗಳು ಮುಂದಿನ ನೂರು, ಇನ್ನೂರು ವರ್ಷಗಳವರೆಗೂ ಜೀವಂತವಾಗಿರುತ್ತವೆಯೇ ಎಂಬುದು ನನಗೆ ಮುಖ್ಯವಾಗುತ್ತದೆ.
-ಡಾ.ಎಸ್.ಎಲ್.ಭೈರಪ್ಪ, ಸಾಹಿತಿ