Advertisement

ಇಲ್ಲಿ ದುರ್ಯೋಧನನಿಗೂ ದೇವಾಲಯ ಕಟ್ಟಿ ಪೂಜೆ ಸಲ್ಲಿಸುತ್ತಿದ್ದಾರೆ…!

06:12 PM Nov 30, 2018 | Sharanya Alva |

ಮಹಾಭಾರತದ ಖಳನಾಯಕ  ದುರ್ಯೋಧನನಿಗೂ ಕೂಡಾ ದೇವಾಲಯ ಕಟ್ಟಿ ಪೂಜಿಸಲಾಗುತ್ತಿದೆ. ದುರ್ಯೋಧನ ಮಹಾಭಾರತದ ಖಳನಾಯಕ. ಆದರೆ ಅವನ ಕುಲದವರು ಇಂದಿಗೂ ಜೀವಂತವಾಗಿದ್ದಾರೆ. ಅವರು ತಮ್ಮ ಮೂಲ ಪುರುಷನಿಗಾಗಿ ದೇವಾಲಯ ನಿರ್ಮಿಸಿದ್ದಾರೆ.

Advertisement

ಉತ್ತರಾಖಂಡದ ಮೋರಿ ಹಳ್ಳಿಯ ಜನರ ದಂತಕಥೆಗಳ ಪ್ರಕಾರ ಅವರು ಕುರುವಂಶದವರು. ಅವರ ಪಾಲಿಗೆ ದುರ್ಯೋಧನ ತಮ್ಮ ಪೂರ್ವಜ ಮಾತ್ರವೇ ಅಲ್ಲ, ಪೂಜಾರ್ಹ ದೇವರು.

ಮೋರಿ ಹಳ್ಳಿಯ ಜಾಖೋಲ್ ಎಂಬಲ್ಲಿ ದುರ್ಯೋಧನನ ಪ್ರಾಚೀನ ದೇವಾಲಯ ನಿರ್ಮಿಸಿದ್ದಾರೆ ಇವರು. ಈ ದೇವಾಲಯದ ಒಳಗೆ ದುರ್ಯೋಧನ ಮಾತ್ರವಲ್ಲದೆ, ಕರ್ಣನ ಮೂರ್ತಿ ಕೂಡ ಇದೆ. ಪಾಂಡವರಂತೆ ದುರ್ಯೋಧನ ಬ್ರಾಹ್ಮಣ ಪಕ್ಷಪಾತಿ ಆಗಿರಲಿಲ್ಲ, ಎಲ್ಲ ಜಾತಿಪಂಗಡಗಳನ್ನು ಮೀರಿ, ಕರ್ಣನನ್ನು ತನ್ನ ಬಂಧುವಾಗಿ ಸ್ವೀಕರಿಸಿದ್ದ ಎಂದು ಮೋರಿ ಜನರಿಗೆ ಅಭಿಮಾನ.

ಈ ದೇವಾಲಯದಲ್ಲಿ ಜನರು ದುರ್ಯೋಧನನಿಗೆ ನಿತ್ಯಪೂಜೆ ಸಲ್ಲಿಸುತ್ತಾರೆ. ಪ್ರತಿವರ್ಷ ಇಲ್ಲಿ ಉತ್ಸವ, ಜಾತ್ರೆ ಕೂಡ ನೆಡೆಯುತ್ತದೆ.

Advertisement

ಮಹಾಭಾರತ ಯುದ್ಧದ ಕೊನೆಯಲ್ಲಿ ದುರ್ಯೋಧನ ತೀರಿಕೊಂಡಾಗ ಇಲ್ಲಿಯವರು ತಮ್ಮ ಬಂಧುವಿಗಾಗಿ ಸಾಮೂಹಿಕ ಶೋಕಾಚರಣೆ ನೆಡಸಿದ್ದರು. ಇವರ ಕಣ್ಣೀರು ಸೇರಿಯೇ ತೋಂಸ್ (ತಮಸ್) ನದಿ ಸೃಷ್ಟಿಯಾಯಿತು ಎನ್ನುತ್ತಾರೆ. ಹೀಗಾಗಿ ಇಲ್ಲಿನ ಜನರಿಗೆ ಈ ನದಿಯ ನೀರು ಪರಮ ಪವಿತ್ರ. ಈ ನೀರನ್ನು ಇವರು ಕುಡಿಯಲು ಬಳಸುವುದಿಲ್ಲ. ದೇವಾಲಯದಲ್ಲಿ ಪಂಚಾಮೃತವಾಗಿ ಮಾತ್ರ ಕೊಡುತ್ತಾರೆ.

ಕೇರಳದ ಪೊರುವಾಝಿ ಪೆರುವಿರುತಿ ಮಲನಾಡಾ ಎಂಬ ದೇವಾಲಯ ಕೂಡ ದುರ್ಯೋಧನನಿಗಾಗಿ ನಿರ್ಮಾಣವಾಗಿದೆ. ದುರ್ಯೋಧನ ಹಿಂದೆ ಈ ದೇವಾಲಯಕ್ಕಾಗಿ ನೂರಾರು ಎಕರೆ ಜಮೀನುದತ್ತಿ ನೀಡಿದ್ದ ಎಂದು ಸ್ಥಳಪುರಾಣ ಹೇಳುತ್ತದೆ.

ದುರ್ಯೋಧನ ಮಾತ್ರವೇ ಯಾಕೆ? ಮಹಾಭಾರತದ ಕುತಂತ್ರಿ ಶಕುನಿಗೂ  ಕೇರಳದಲ್ಲಿ ಒಂದು ದೇವಾಲಯವಿದೆ! ಇದು ಇರುವುದು ತಿರುವನಂತಪುರಂನಿಂದ 65 ಕಿಲೋಮೀಟರ್  ದೂರದಲ್ಲಿರುವ ಕೊಟ್ಟಾರಕ್ಕಾರ ಎಂಬಲ್ಲಿ. ಮಹಾಭಾರತ ಯುದ್ಧ ಮುಗಿದ ಬಳಿಕೆ ಶಕುನಿ ಇಲ್ಲಿ ಆಗಮಿಸಿ, ಇಲ್ಲಿನ ಬೆಟ್ಟಗಳಲ್ಲಿ ತಪಸ್ಸು ಮಾಡಿ ಮೋಕ್ಷ ಪಡೆದಿದ್ದ ಎನ್ನುತ್ತದೆ ಸ್ಥಳಪುರಾಣ.

ನಿಶಾಂತ್ (ತರಂಗ ನವೆಂಬರ್ 8)

Advertisement

Udayavani is now on Telegram. Click here to join our channel and stay updated with the latest news.

Next