ಕಿತ್ತೋದ ಚಪ್ಪಲಿಗಿರೋ ಬೆಲೆ, ನೀ ಹೆಣವಾದ ಮರು ಘಳಿಗೆ ಇರದು…’ ಈ ಮಾತು ಅಕ್ಷರಶಃ ನಿಜ. ಯಾಕೆಂದರೆ, ಮನುಷ್ಯ ಇರೋವರೆಗಷ್ಟೇ ಬೆಲೆ. ಅವನು ಮಣ್ಣು ಸೇರಿದ ಮೇಲೆ ಎಲ್ಲವೂ ಗೌಣ. ಈಗ ಈ ವಿಷಯ ಹೇಳ್ಳೋಕೆ ಕಾರಣ, ಒಂದು ಕಿರುಚಿತ್ರ. ಅದರ ಹೆಸರು “ದುರ್ವಿಧಿ’ ಕಿರುಚಿತ್ರದ ಹೆಸರು ಕೇಳಿದ ಮೇಲೆ, ಇದೊಂದು ಮಾನವೀಯ ಮೌಲ್ಯ ಕುರಿತ ಕಥಾಹಂದರ ಹೊಂದಿರುವ ಕಥೆ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ ಬಿಡಿ. ಹೌದು, ಅಪ್ಪುವರ್ಧನ್ ಎಂಬ ಹೊಸ ಪ್ರತಿಭೆ ಕಥೆ, ಚಿತ್ರಕಥೆ ಬರೆದು “ದುರ್ವಿಧಿ ‘ ಕಿರುಚಿತ್ರ ನಿರ್ದೇಶಿಸಿ ದ್ದಾರೆ.
ಈ ಕಿರುಚಿತ್ರಕ್ಕೆ ಮಹೇಶ್ ರುದ್ರಪ್ಪ ನಿರ್ಮಾ ಪಕರು. ಈಗಾಗಲೇ ಚಿತ್ರೀ ಕರಣ ಮುಗಿಸಿರುವ ಈ ಕಿರುಚಿತ್ರ ಅಂತಾ ರಾಷ್ಟ್ರೀಯ ಕಿರುಚಿತ್ರೋತ್ಸವಕ್ಕೆ ಹೋಗಲು ತಯಾರಾಗುತ್ತಿದೆ. ಸದ್ಯಕ್ಕೆ ಸಂಕಲನ ಕೆಲಸ ಮುಗಿಸಿರುವ ಈ ಚಿತ್ರದ ವಿಶೇಷತೆ ಅಂದರೆ, ಇಲ್ಲಿ ಯಾವುದೇ ಡೈಲಾಗ್ ಗಳಿಲ್ಲ. ಇಡೀ ಸಿನಿಮಾ ಕೇವಲ ನಟನೆ ಹಾಗು ಹಿನ್ನೆಲೆ ಸಂಗೀತದಲ್ಲೇ ಸಾಗಲಿದೆ. ಈಗಾಗಲೇ ಯಾವುದೇ ಸಂಭಾಷಣೆಗಳಿಲ್ಲದೆ ಸಿನಿಮಾಗಳು, ಕಿರುಚಿತ್ರಗಳು ಬಂದಿವೆಯಾ ದರೂ, ಒಂದು ಮೌಲ್ಯಾಧಾರಿತ ವಿಷಯ ಇಟ್ಟುಕೊಂಡು ಕೇವಲ ಭಾವನೆಗಳಲ್ಲೇ ಕಟ್ಟಿಕೊಡುವ ಪ್ರಯತ್ನವನ್ನು “ದುರ್ವಿಧಿ ‘ ಮೂಲಕ ಮಾಡಲು ಹೊರಟಿದ್ದಾರೆ ಅಪ್ಪು ವರ್ಧನ್.
ಕಿರುಚಿತ್ರದ ಕಥೆ ಬಗ್ಗೆ ಹೇಳುವುದಾದರೆ, ಚಪ್ಪಲಿ ಹೊಲೆದು ಬದುಕು ಸಾಗಿಸುವ ಕುಟುಂಬದ ಸುತ್ತ ಸಾಗುವ ಕಥೆ ಇಲ್ಲಿದೆ. ಇಂದು ಅಂತಹವರ ಬದುಕು ಸಂಕಷ್ಟದಲ್ಲಿದೆ. ಒಂದೊತ್ತಿನ ಊಟಕ್ಕೂ ಪರದಾಡು ವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಂದೆ ಇದ್ದಂತಹ ದುಡಿಮೆ ಈಗಿಲ್ಲ. ಅಂತಹ ಕುಟುಂಬದ ಯಜಮಾನ ಅಂಗವೈಕಲ್ಯ ಹೊಂದಿದ್ದರೂ, ಬದುಕಿನ ಬಂಡಿ ಸಾಗಿಸಲು ಹರಸಾಹಸ ಪಡುತ್ತಾನೆ. ಕೊನೆಗೆ ತನ್ನ ಕುಟುಂಬ ಸಾಕಲು ಆಗದಂತಹ ಸ್ಥಿತಿ ತಲುಪಿ ಆತ್ಮಹತ್ಯೆಗೆ ಶರಣಾಗುತ್ತಾನೆ. ಅತ್ತ, ಹೆಂಡತಿ, ಸಣ್ಣ ಮಗು ತುತ್ತು ಅನ್ನಕ್ಕಾಗಿ ಪರದಾಡುವ ಸ್ಥಿತಿ ಹೇಗಿರುತ್ತೆ.
ಕೊನೆಗೆ ಅವರು ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಾರೋ, ಇಲ್ಲವೋ ಅನ್ನೋದೇ ಈ ಕಿರುಚಿತ್ರದ ಕಥೆ. ಇಲ್ಲಿ ಎಮೋಷನ್ಸ್, ತಾಯಿ, ಮಗುವಿನ ಬಾಂಧವ್ಯ, ಉಳ್ಳವರ ಕ್ರೌರ್ಯ ಇತ್ಯಾದಿ ಕಥೆಯಲ್ಲಿದೆ. ಚಿತ್ರಕ್ಕೆ ವಾಸುಕಿ ವೈಭವ್ ಹಿನ್ನೆಲೆ ಸಂಗೀತ ನೀಡಲಿದ್ದಾರೆ. ರಮೇಶ್ ಕೊಯಿರ ಛಾಯಾಗ್ರಹಣವಿದೆ. ಲಾಕ್‌ಡೌನ್ ಸಂಪೂರ್ಣ ನಿಂತ ಬಳಿಕ ಚಿತ್ರದ ಇತರೆ ಕೆಲಸಗಳು ನಡೆದು, ಆ ನಂತರ ಅವಾರ್ಡ್‌ಗೆ ಕಳುಹಿಸುವ ಯೋಚನೆ ನಿರ್ದೇಶಕರಿಗಿದೆ. ಕಿರುಚಿತ್ರದಲ್ಲಿ ಬಹುತೇಕ ಹೊಸ ಕಲಾವಿದರಿದ್ದಾರೆ. ಆರು ಪಾತ್ರಗಳು ಇಲ್ಲಿ ಹೈಲೈಟ್. ಕರಿಯ ನಾಣಿ, ಪವಿತ್ರಾ, ರೆಡ್ಡಿ, ಸೌಭಾಗ್ಯ ಇತರರು ನಟಿಸಿದ್ದಾರೆ.