Advertisement

ದುರುಗಮ್ಮನಹಳ್ಳ ಕಾಯಕಲ್ಪ ಅಂತಿಮ ಹಂತಕ್ಕೆ

10:36 AM Jul 01, 2019 | Team Udayavani |

ಗಂಗಾವತಿ: ನಗರದ ಮಧ್ಯೆ ಭಾಗದಲ್ಲಿರುವ ದುರುಗಮ್ಮನಹಳ್ಳದ ಕಾಯಕಲ್ಪ ಕಾರ್ಯ ಅಂತಿಮ ಹಂತಕ್ಕೆ ಬಂದಿದ್ದು, ನಮ್ಮೂರು ನಮ್ಮ ಹಳ್ಳ ಸ್ವಚ್ಛತಾ ಸಮಿತಿಯ ಶ್ರಮ ಇದೀಗ ಸಾರ್ಥಕವಾಗುತ್ತಿದೆ. ನಗರದ ಎಸ್‌ಬಿಐ ಬ್ಯಾಂಕ್‌ನಿಂದ ಗುಂಡಮ್ಮನಕ್ಯಾಂಪ್‌ ಬಾಲಾಜಿ ಗ್ಯಾಜ್‌ ಕಂಪನಿವರೆಗೆ ಇಡೀ ಹಳ್ಳವನ್ನು ಸ್ವಚ್ಛಗೊಳಿಸುವ ಜತೆಗೆ ಇದೇ ಪ್ರಥಮಬಾರಿ ಹೂಳು ತೆಗೆದು ಸುಂದರವಾಗಿಸಲಾಗಿದೆ. ದುರುಗಮ್ಮನಹಳ್ಳವೋ ಚರಂಡಿಯೋ ಎಂದು ಅನುಮಾನ ಮೂಡಿಸುತ್ತಿದ್ದ ಹಳ್ಳ ಇದೀಗ ಘನತ್ಯಾಜ್ಯ, ನಗರದ ಕಸವನ್ನು ಸ್ವಚ್ಛಗೊಳಿಸಿ ಸುಂದರವಾಗಿ ಕಾಣುವಂತೆ ಮಾಡಲಾಗಿದೆ.

Advertisement

ಹಳ್ಳಕ್ಕೆ ಸಂತೆಯಲ್ಲಿ ಉಳಿದ, ಕೊಳೆತ ತರಕಾರಿ ಮತ್ತು ಹೋಟೆಲ್ನಲ್ಲಿ ಉಳಿದ ಆಹಾರ ಸುರಿಯುವ ಮೂಲಕ ಚರಂಡಿಯನ್ನಾಗಿಸಿದ ಪರಿಣಾಮ ಇಡೀ ದುರುಗಮ್ಮನಹಳ್ಳ ಗಬ್ಬೆದ್ದು ನಾರುತ್ತಿತ್ತು. ಹಳ್ಳದ ಪಕ್ಕದ ರಸ್ತೆಯಲ್ಲಿ ನಡೆದುಕೊಂಡು ಹೋಗುವವರು ಮೂಗು ಮುಚ್ಚಿಕೊಂಡು ಹೋಗುವಂತಹ ಸ್ಥಿತಿಯುಂಟಾಗಿತ್ತು. ಜತೆಗೆ ಪೌರಕಾರ್ಮಿಕರು ನಗರದಲ್ಲಿ ಉತ್ಪಾದನೆಯಾಗುತ್ತಿದ್ದ ಹಸಿ ಮತ್ತು ಒಣ ತ್ಯಾಜ್ಯವನ್ನು ಹಳ್ಳಕ್ಕೆ ಸುರಿದು ಬೆಂಕಿ ಹಚ್ಚುತ್ತಿದ್ದರು. ಈ ಗಾಳಿಯನ್ನು ಸೇವಿಸುವ ಜನರಿಗೆ ಅಲರ್ಜಿ, ಅಸ್ತಮಾ ಸೇರಿ ಉಸಿರಿನ ತೊಂದರೆಯಾಗುತ್ತಿತ್ತು. ಈ ಎಲ್ಲಾ ಸಮಸ್ಯೆಗಳ ಕುರಿತು ‘ಉದಯವಾಣಿ’ ಪತ್ರಿಕೆಯಲ್ಲಿ ವರದಿ ಪ್ರಕಟಿಸಿತ್ತು.

ನಂತರ ಎಚ್ಚೆತ್ತ ಡಾ| ಶಿವಕುಮಾರ ಮಾಲೀಪಾಟೀಲ್ ನೇತೃತ್ವದ ನಮ್ಮೂರು ನಮ್ಮ ಹಳ್ಳ ಸ್ವಚ್ಛತಾ ಸಮಿತಿ ಸದಸ್ಯರು ಹಳ್ಳ ಸ್ವಚ್ಛತೆ ಬಗ್ಗೆ ಆಗಾಗ ಸಭೆ ನಡೆಸಿ, ವಿವಿಧ ಸಂಘ ಸಂಸ್ಥೆಗಳು, ವಿದ್ಯಾರ್ಥಿಗಳ, ವೈದ್ಯರ ಸಹಕಾರದಿಂದ ಹಳ್ಳದಲ್ಲಿದ್ದ ಕಸ, ಪ್ಲಾಸ್ಟಿಕ್‌ ವಿವಿಧ ಅಪಾಯಕಾರಿ ಘನತ್ಯಾಜ್ಯವನ್ನು ನಗರಸಭೆಯ ಸ್ವಚ್ಛತಾ ಸಿಬ್ಬಂದಿ ನೆರವಿನೊಂದಿಗೆ ಸ್ವಚ್ಛಗೊಳಿಸಿ ಮಲಕನಮರಡಿ ಯಾರ್ಡ್‌ಗೆ ಸಾಗಿಸಲಾಯಿತು.

ಈ ಮಧ್ಯೆ ದುರುಗಮ್ಮನಹಳ್ಳಕ್ಕೆ ಎರಡು ಕಡೆ ಗೋಡೆ ನಿರ್ಮಿಸಿ ವಾಹನ ನಿಲುಗಡೆ ಮಾಡಲು ಯೋಜನೆ ಸಿದ್ಧಪಡಿಸಿ ಸರಕಾರ ಟೆಂಡರ್‌ ಕರೆದು ಗುತ್ತಿಗೆ ನೀಡಿತ್ತು. ಈ ಕಾಮಗಾರಿ ಅವೈಜ್ಞಾನಿಕವಾಗಿದ್ದು ಹಳ್ಳವನ್ನು ಸ್ವಚ್ಛಗೊಳಿಸಿ ಹೂಳೆತ್ತಿದ ನಂತರವೇ ಹಳ್ಳದಲ್ಲಿ ಅಮೃತಸಿಟಿ ಕಾಮಗಾರಿ ನಡೆಯುವಂತೆ ನಮ್ಮೂರು ನಮ್ಮ ಹಳ್ಳ ಸಮಿತಿಯವರು ಜಿಲ್ಲಾಧಿಕಾರಿ ಮತ್ತು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು. ಈ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ವಚ್ಛತಾ ಕಾರ್ಯದ ನಂತರವೇ ಅಮೃತಸಿಟಿ ಕಾಮಗಾರಿಯನ್ನು ಕೆಲ ಬದಲಾವಣೆ ಮಾಡಿ ನಡೆಸುವಂತೆ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಸೂಚನೆ ನೀಡಿ ಹೂಳೆತ್ತಲು ಜಿಲ್ಲಾಡಳಿತದಿಂದ 5 ಲಕ್ಷ ಮಂಜೂರಿ ಮಾಡಿದರು.

5 ಲಕ್ಷ ರೂ. ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದ್ದರಿಂದ ಸಮಿತಿಯವರು ಶಾಸಕ ಪರಣ್ಣ ಮುನವಳ್ಳಿಗೆ ಮನವಿ ಮಾಡಿದ್ದರಿಂದ ಶಾಸಕರು ಹೂಳೆತ್ತುವ ಕಾಮಗಾರಿ ನಡೆಯಲಿ. ಸರಕಾರ ಮತ್ತು ಸಾರ್ವಜನಿಕರ ವಂತಿಗೆ ಪಡೆದು ಹಳ್ಳವನ್ನು ಸೌಂದರ್ಯ ಮಾಡುವ ಸಂಕಲ್ಪ ಮಾಡಿದರು. ಉದ್ಯಮಿ ಕಳಕನಗೌಡ ತಮ್ಮ ಯಂತ್ರೋಪಕರಣಗಳ ಮೂಲಕ 16 ದಿನಗಳಿಂದ ಹೂಳೆತ್ತಿ ಇಡೀ ಹಳ್ಳವನ್ನು ಸ್ವಚ್ಛ, ಸುಂದರವಾಗಿಸಿದ್ದಾರೆ. ಹೂಳೆತ್ತಿದ ನಂತರ ಹಳ್ಳದ ಎರಡು ಕಡೆ ಗೋಡೆ ನಿರ್ಮಿಸಿ ಬದಿಯಲ್ಲಿ ಸಸಿ ನೆಟ್ಟು ಬೆಳೆಸುವ ಉದ್ದೇಶ ಹೊಂದಿದ್ದಾರೆ.

Advertisement

 

•ಕೆ.ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next