ಶೃಂಗೇರಿ: ಆದಿ ಶಂಕರಾಚಾರ್ಯ ಸ್ಥಾಪಿತ ದಕ್ಷಿಣಾಮ್ನಾಯ ಶಾರದಾ ಪೀಠದ ಶಕ್ತಿ ದೇವತೆ ಶ್ರೀ ದುರ್ಗಾಂಬಾ ದೇವಿ ಮಹಾರಥೋತ್ಸವ ಮಂಗಳವಾರ ದುರ್ಗಾ ದೇವಸ್ಥಾನದಲ್ಲಿ ಅದ್ಧೂರಿಯಾಗಿ ನೆರವೇರಿತು. ವಿಕಾರಿ ಸಂವತ್ಸರದ ಪಾಲ್ಗುಣ ಶುಕ್ಲ ನವಮಿಯ ಮೃಗಶಿರ ನಕ್ಷತ್ರದಂದು ಆಗಮೋಕ್ತ ವಿಧಾನದಂತೆ ನಡೆದ ಮಹಾರಥೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.
ರಥೋತ್ಸವದ ಅಂಗವಾಗಿ ಬೆಳಗ್ಗೆ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ದುರ್ಗಾ ಸಪ್ತಶತಿ ಪಾರಾಯಣ, ತುಲಾಭಾರ ಸೇವೆ, ಕುಂಕುಮಾರ್ಚನೆ ಸೇವೆ ನಡೆಯಿತು. ಚಂಡಿ ಪಾರಾಯಣದ ನಂತರ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳಿಂದ ಮಹಾಮಂಗಳಾರತಿ ನಡೆಯಿತು.
ನಂತರ, ದುರ್ಗಾಂಬಾ ಉತ್ಸವ ಮೂರ್ತಿಯನ್ನು ದೇವಸ್ಥಾನಕ್ಕೆ ಮೂರು ಪ್ರದಕ್ಷಿಣೆ ಹಾಕಿಸಿ, ಬಲಿ ಪೂಜೆ ನಡೆಸಲಾಯಿತು. ಬಳಿಕ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳು ದುರ್ಗಾ ದೇವಸ್ಥಾನಕ್ಕೆ ವಿದ್ಯಾರಣ್ಯಪುರದ ಮೂಲಕ ಕಾಲ್ನಡಿಗೆಯಲ್ಲಿ ತೆರಳಿದರು.
ರಥವನ್ನು ದೇವಸ್ಥಾನದಿಂದ ಅಲ್ಪ ದೂರದವರೆಗೆ ಎಳೆದು ನಿಲ್ಲಿಸಲಾಯಿತು. ಭಕ್ತರ ಜಯಘೋಷ, ಸದ್ವಿದ್ಯಾ ಸಂಜೀವಿನಿ ಪಾಠಶಾಲೆಯ ವಿದ್ಯಾರ್ಥಿಗಳಿಂದ ವೇದಘೋಷ ನಡೆಯಿತು. ಆನೆ-ಅಶ್ವ-ಛತ್ರಿ ಚಾಮರ-ಮಕರ ತೋರಣ-ವಾದ್ಯಮೇಳಗಳು ರಥೋತ್ಸವದ ಮೆರುಗು ಹೆಚ್ಚಿಸಿದವು.
ರಥೋತ್ಸವದ ಧಾರ್ಮಿಕ ವಿಧಿ ವಿಧಾನಗಳು ಮಠದ ಪುರೋಹಿತರಾದ ಕೃಷ್ಣಭಟ್, ಶಿವಕುಮಾರ ಶರ್ಮ ನೇತೃತ್ವದಲ್ಲಿ ನಡೆದವು. ಬುಧವಾರ ದುರ್ಗಾಂಬಾ ದೇವಸ್ಥಾನದಲ್ಲಿ ಚಂಡಿಹೋಮ, ಶ್ರೀಗಳ ಸಾನ್ನಿಧ್ಯದಲ್ಲಿ ಶತಚಂಡಿಯಾಗದ ಪೂರ್ಣಾಹುತಿ ನಡೆಯಲಿದೆ. ನಂತರ ಓಕುಳಿ ಉತ್ಸವ, ಸಂಜೆ ಧ್ವಜ ಅವರೋಹಣ ನಡೆಯಲಿದೆ.
ರಥೋತ್ಸವದ ಅಂಗವಾಗಿ ದುರ್ಗಾಂಬಾ ಸನ್ನಿ ಧಿಯನ್ನು ತಳಿರು ತೋರಣ, ವಿದ್ಯುದ್ದೀಪಾಲಂಕಾರ, ಬಾಳೆಕಂಬ, ರಂಗೋಲಿಗಳಿಂದ ಶೃಂಗರಿಸಲಾಗಿತ್ತು. ಸೋಮ ವಾರ ಸಂಜೆ ಇದೇ ಮೊದಲ ಬಾರಿಗೆ ದುರ್ಗಾಂಬೆಯ ಅಡ್ಡಪಲ್ಲಕ್ಕಿ ಉತ್ಸವ ದೇವಸ್ಥಾನದ ಸಮುತ್ಛಯದಲ್ಲಿ ನಡೆಯಿತು. ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳು ಉಪಸ್ಥಿತರಿದ್ದರು.