Advertisement
ಬಂಗಾಲದಲ್ಲಿ ನಾಡಹಬ್ಬದುರ್ಗಾಪೂಜೆ ಎನ್ನುವುದು ಬಂಗಾಲದ ಪ್ರಮುಖ ಉತ್ಸವ. ನಮ್ಮಲ್ಲಿರುವಂತೆ ದುರ್ಗೆಯ ಒಂಬತ್ತು ರೂಪಗಳನ್ನು ಆರಾಧಿಸುವ ಪರಿಪಾಠ ಇಲ್ಲಿಲ್ಲ. ಮಹಿಷಾಸುರಮರ್ದಿನಿಯೇ ಅವರ ಪಾಲಿನ ದುರ್ಗಾ. ಬಹು ಉತ್ಸಾಹದಿಂದ ವೈವಿಧ್ಯಮಯವಾದ ತಯಾರಿಗಳಲ್ಲಿ ತೊಡಗಿಸಿಕೊಂಡಿದ್ದರೂ ಬಂಗಾಲಿ ಜನರ ದುರ್ಗಾಪೂಜೆಯು ಆರಂಭವಾಗುವುದೇ ಪಂಚಮಿಯಂದು. ಎಷ್ಟೊಂದು ಸಂಭ್ರಮ, ತಯಾರಿ, ಭವ್ಯತೆ, ವೈವಿಧ್ಯ. ಆದರೆ ಕೇವಲ ಐದುದಿನಗಳ ಆಚರಣೆ. ಕೊಲ್ಕತಾದ ಮನೆಮನೆಗಳ ಅಂಗಳದಲ್ಲಿ ಹಾಗೂ ರಸ್ತೆಯುದ್ದಕ್ಕೂ ಬಿಡಿಸಲಾಗುವ ಅಲಪೋನಾ (ರಂಗೋಲಿ), ಢಾಕ್ ಎಂಬ ಡೋಲಿನ ಬಡಿತದ ಮೈನವಿರೇಳಿಸುವ ನಾದ, ಅಲ್ಲಲ್ಲಿ ಎದ್ದುನಿಂತ ಕಲಾತ್ಮಕ ಪೆಂಡಾಲ್‌ಗಳು, ಅದರ ಸುತ್ತಮುತ್ತ ಸಾಲಾಗಿರುವ ಬಗೆಬಗೆಯ ತಿಂಡಿತಿನಸುಗಳ, ಸೀರೆಗಳ, ಆಭರಣಗಳ, ಮಕ್ಕಳಾಟಿಕೆಗಳ ಸ್ಟಾಲ್‌ಗಳು. ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಯ ಗಡಿಬಿಡಿಯಲ್ಲಿ ಓಡಾಡುವ ಉತ್ಸಾಹಿ ಜನರು, ಚಿತ್ತಾಕರ್ಷಕವಾಗಿ ಅಲಂಕರಿಸಿಕೊಂಡು ಮನಸೆಳೆಯುವ ಬೆಡಗಿಯರು, ಸಂತಸದಿಂದ ಚಿಲಿಪಿಲಿಗುಟ್ಟುವ ಮಕ್ಕಳು.
Related Articles
Advertisement
ಬಂಗಾಲಿಗಳ ಪ್ರಕಾರ ದುರ್ಗಾಮಾತೆಯು ತನ್ನ ತವರಿಗೆ (ತಂದೆ ಗಿರಿರಾಜ ಹಾಗೂ ತಾಯಿ ಮೆನೊಕಾ) ಒಬ್ಬಳೇ ಬರುವುದಿಲ್ಲ. ಆಕೆ ತನ್ನೊಂದಿಗೆ ಮಕ್ಕಳಾದ ಲಕ್ಷ್ಮಿ- ಸರಸ್ವತಿ ಹಾಗೂ ಕಾರ್ತಿಕೇಯ- ಗಣೇಶರನ್ನೂ ಕರೆತರುತ್ತಾಳೆ. ಮಾತ್ರವಲ್ಲದೆ ಅವರ ಸಂರಕ್ಷಣೆಗಾಗಿ ಬಿಜೊಯ ಹಾಗೂ ಜಯ(ಜಯ-ವಿಜಯರು) ಬರುತ್ತಾರೆ. ದುರ್ಗೆಯೊಂದಿಗೆ ಇವರೆಲ್ಲರ ಪೂಜೆಯೂ ನೆರವೇರುತ್ತದೆ. ತವರಿಗೆ ಬಂದ ದುರ್ಗೆಗೆ ದಿನವೂ ಬಗೆಬಗೆಯ ಭೋಗ್ (ನೈವೇದ್ಯ) ಹಾಗೂ ಪ್ರಸಾದವನ್ನು ತಯಾರಿಸಿ ಉಣಬಡಿಸ ಲಾಗುತ್ತದೆ. ಕೇವಲ ನಾಲ್ಕುದಿನಗಳಿಗಾಗಿ ತವರಿಗೆ ಬರುವ ದುರ್ಗೆಯು ಐದನೆಯ ದಿನದಂದು ಅಂದರೆ ವಿಜಯದಶಮಿಯಂದು ತನ್ನ ಪತಿ ಶಿವನ ಮನೆಗೆ ಹಿಮಾಲಯಕ್ಕೆ ತೆರಳಲೇ ಬೇಕು. ಅವಳನ್ನು ಬೀಳ್ಕೊಡುವ ದಿನದಂದು ಸೌಭಾಗ್ಯದ ಪ್ರತೀಕ ವಾದ ತಮ್ಮ ಮಾಂಗಲ್ಯವನ್ನು ಹರಸೆಂದು ದುರ್ಗಾಮಾತೆಯನ್ನು ಪ್ರಾರ್ಥಿಸುವ ನಿಟ್ಟಿನಲ್ಲಿ ನೆರವೇರುವ ಹಾಗೂ ದುರ್ಗಾಪೂಜೆಗೆ ಕಳೆಗಟ್ಟುವ ಸಮಾರಂಭವೆ ಸಿಂಧೂರ್ ಖೇಲಾ.
ಕುಂಕುಮದ ಆಟಸಿಂಧೂರ ಖೇಲಾ ಅಂದರೆ ಕುಂಕುಮದ ಆಟ; ಮಾಂಗಲ್ಯದ ಕುರುಹಾದ ಕುಂಕುಮವನ್ನು ಆಟದಂತೆಯೇ ಪರಸ್ಪರ ಸೌಭಾಗ್ಯವತಿ ಮಹಿಳೆಯರ ಹಣೆಗೆ ಮೆತ್ತಿಕೊಳ್ಳುವ ಮೂಲಕ ಸುದೀರ್ಘ ಹಾಗೂ ಸಮೃದ್ಧ ವೈವಾಹಿಕ ಜೀವನವನ್ನು ಹಾರೈಸಲಾಗುತ್ತದೆ. ಸುಮಾರು 400 ವರ್ಷಗಳ ಹಿಂದೆ ಜಮೀನುದಾರರ ಮನೆಗಳಲ್ಲಿರುವ ಹೆಂಗಳೆಯರ ಮನೋರಂಜನೆಯ ಆಟವಾಗಿ ಆಚರಿಸಲ್ಪಡಲು ಪ್ರಾರಂಭವಾದ ಇದನ್ನು ಖೇಲಾವೆಂದೇ ಕರೆಯಲಾಗುತ್ತದೆ. ಸಿಂಧೂರ್ ಖೇಲಾವು ಇದೀಗ ದುರ್ಗಾಪೂಜಾಚರಣೆಯ ಬಹುಮುಖ್ಯ ಹಾಗೂ ಆಕರ್ಷಕ ಭಾಗವಾಗಿ ಬಿಟ್ಟಿದೆ. ಸಾಮಾನ್ಯ ಸ್ತ್ರೀಯರಿಂದ ಹಿಡಿದು ಸಿನೆಮಾ ತಾರೆಯರು ಕೂಡ ಸಿಂಧೂರ್ ಖೇಲಾದಲ್ಲಿ ಭಾಗವಹಿಸುವ ದೃಶ್ಯಗಳು ಪತ್ರಿಕೆಗಳಲ್ಲಿ ಜಾಲತಾಣಗಳಲ್ಲಿ ಸುದ್ಧಿಯಾಗುತ್ತ ಹೆಚ್ಚೆಚ್ಚು ಪ್ರಸಿದ್ಧಿಯನ್ನು ಪಡೆಯುತ್ತಿದೆ. ನಾಲ್ಕು ದಿನಗಳ ಸವಿಸ್ತಾರವಾದ ಪೂಜೆ-ಪುನಸ್ಕಾರ, ವಿವಿಧ ನೈವೇದ್ಯಗಳ ನಂತರ ವಿಜಯದಶಮಿಯಂದು ಅಪರಾಜಿತೆಯನ್ನು ಬೀಳ್ಕೊಡುವ ತಯಾರಿ ನಡೆಯುತ್ತದೆ. ಮಹಾರತಿಯ ನಂತರ ಶೀತಲ ಭೋಗ್(ನೈವೇದ್ಯ) ನೀಡಲಾಗುತ್ತದೆ. ಅರ್ಚಕರು ನಡೆಸುವ ವಿಸರ್ಜನೆಯ ಪೂಜೆಯ ಮೂಲಕ ದುರ್ಗೆಯನ್ನು ಸಂತೃಪ್ತಳಾಗಿ ತನ್ನ ಪತಿ ಶಿವನ ಮನೆಗೆ ಹಿಂತಿರುಗುವಂತೆ ಪ್ರಾರ್ಥಿಸಲಾಗುತ್ತದೆ. ತರುವಾಯ ಪ್ರಶಾಂತಿ ವಂದನೆ. ಇದರಲ್ಲಿ ದುರ್ಗೆಯ ಪ್ರತಿಮೆಯ ಎದುರು ಕನ್ನಡಿಯೊಂದನ್ನು ಇರಿಸಲಾಗಿ ಎಲ್ಲ ಭಕ್ತರು ಕನ್ನಡಿಯಲ್ಲಿ ದುರ್ಗೆಯ ಪಾದದ ಪ್ರತಿಬಿಂಬದ ದರ್ಶನವನ್ನು ಪಡೆಯುತ್ತಾರೆ. ಆನಂತರ ದೇವಿ ಬೊರೊನ್- ವಿವಾಹಿತ ಮಹಿಳೆಯರೆಲ್ಲರೂ ಕೆಂಪಂಚಿನ ಬಿಳಿಯ ಸೀರೆಯುಟ್ಟು ಆಭರಣಗಳಿಂದ ಸಾಲಂಕೃತರಾಗಿ ಸರದಿಯ ಪ್ರಕಾರ ಬಂದು ದುರ್ಗೆಗೆ ಕೊನೆಯ ವಿದಾಯ ಕೋರುವ ಸಂಪ್ರದಾಯ. ಅವರ ಹರಿವಾಣದಲ್ಲಿ ವೀಳ್ಯದೆಲೆ, ಅಡಿಕೆ, ಕುಂಕುಮ, ಅಲ್ತಾ, ಧೂಪದ ಕಡ್ಡಿಗಳು ಹಾಗೂ ಸಂದೇಷ್ ಇರುತ್ತದೆ. ಪ್ರತಿಯೊಬ್ಬರೂ ಆರತಿ ಎತ್ತಿ ಎರಡೂ ಕೈಗಳಲ್ಲಿ ವೀಳ್ಯದೆಲೆಯ ಮೂಲಕ ದುರ್ಗೆಯ ಮುಖವನ್ನು ಒರೆಸಿ (ತವರುಮನೆಯನ್ನು ಬಿಟ್ಟು ಹೋಗುವ ಅವಳ ಕಂಗಳಲ್ಲಿ ಅಶ್ರುಗಳಿರಬಾರದೆನ್ನುವ ಕಾಳಜಿಯಿಂದ) ಆಕೆಯ ಪಾದಗಳಿಗೆ ಅಲ್ತಾ ಹಚ್ಚಿ, ಅವಳ ಹಣೆಗೆ ಹಾಗೂ ಬಳೆಗಳಿಗೆ (ಶಂಖ ಹಾಗೂ ಪೋಲಾ) ಕುಂಕುಮವನ್ನು ಹಚ್ಚಿ ಸಿಹಿ ತಿಂಡಿಯನ್ನು ಬಾಯಿಗಿತ್ತು, ವೀಳ್ಯವನ್ನು ನೀಡುತ್ತಾರೆ. ತರುವಾಯ ಪರಸ್ಪರ ಬಳೆಗಳಿಗೆ, ಹಣೆಗೆ, ಕೆನ್ನೆಗಳಿಗೆ ಸಿಂಧೂರ ಹಚ್ಚುತ್ತಾ ಸಿಹಿ ಹಂಚಿ ಪರಸ್ಪರರು ಸದಾ ಸೌಭಾಗ್ಯವತಿಯರಾಗಿ ಉಳಿಯುವಂತೆ ಹಾರೈಸುತ್ತಾರೆ. ಸಿಂಧೂರ್ ಖೇಲಾದ ನಂತರ ವಿಜೃಂಭಣೆಯಿಂದ ಮೂರ್ತಿಯ ವಿಸರ್ಜನೆಯನ್ನು ಹೂಗ್ಲಿ ನದಿಯಲ್ಲಿ ಮಾಡಲಾಗುತ್ತದೆ. ಪರಸ್ಪರರನ್ನು ಆಲಂಗಿಸುತ್ತ ಶುಭೋ ಬಿಜೊಯೋ ಎಂದು ಹಾರೈಸುತ್ತಾ, ಕಿರಿಯರು ಹಿರಿಯರ ಪಾದಸ್ಪರ್ಷದಿಂದ ಆಶೀರ್ವಾದಗಳನ್ನು ಪಡೆಯುವ ಮೂಲಕ ದುರ್ಗಾಪೂಜೆಯು ಮುಕ್ತಾಯವಾಗುತ್ತದೆ. ಹಲವು ಶತಮಾನಗಳಿಂದ ನಿರಂತರವಾಗಿ ನಡೆಯುತ್ತಾ ಬಂದಿರುವ ಈ ಸಿಂಧೂರ್ ಖೇಲಾವು ಕೇವಲ ಸೌಭಾಗ್ಯವತಿ ಮಹಿಳೆಯರಿಗಷ್ಟೆ ಸೀಮಿತವಾಗಿತ್ತು. ಈ ಪದ್ಧತಿಯನ್ನು ಬದಲಿಸುವ ನಿಟ್ಟಿನಲ್ಲಿ ಕಲಕತ್ತಾ ಟೈಮ್ಸ್ (ಟೈಮ್ಸ್ ಆಫ್ ಇಂಡಿಯಾ ಗ್ರೂಪ್) ಇವರು 2017ರಲ್ಲಿ ಸಿಂಧೂರ ಖೇಲಾ-No Conditions Apply ಎನ್ನುವ ವಿಡಿಯೋವನ್ನು ಪ್ರಕಟಿಸಿದರು. ಬಂಗಾಲಿಯ ಸುಪ್ರಸಿದ್ಧ ಮಹಿಳೆಯರಾದ ರಿತುಪರ್ಣ ಸೇನ್‌ಗುಪ್ತ, ಸೊಹಿನಿ ಸೇನ್‌ಗುಪ್ತ, ಗಾರ್ಗಿ ರೊಯ್ ಚೌಧರಿ ಹಾಗೂ ಮಾನೊಬಿ ಬಂಡೊಪಾಧ್ಯಾಯ (ಭಾರತದ ಪ್ರಪ್ರಥಮ ತ್ರತೀಯಲಿಂಗಿ ಪಿ. ಎಚ್‌ಡಿ ಪಡೆದ ಪೊ›ಫೆಸರ್) ಇವರ ಹಣೆಯ ಮೇಲೆ ಸಿಂಧೂರಿನ ಎರಡು ಬೊಟ್ಟು ಇದ್ದ ಚಿತ್ರವು ವೀಕ್ಷಕರ ಮೇಲೆ ಪರಿಣಾಮ ಬೀರಿತು. ಸಿಂಧೂರ್ ಖೇಲಾ ಕೇವಲ ವಿವಾಹಿತ ಮಹಿಳೆರಿಗಾಗಿ ಮಾತ್ರ ಸೀಮಿತವಲ್ಲ ಎನ್ನುವುದನ್ನು ಒತ್ತಿಹೇಳಲಾಯಿತು. ವಿವಾಹಿತ, ಅವಿವಾಹಿತ, ವಿಧವೆ, ವಿವಾಹವಿಚ್ಛೇದಿತೆ, ಅವಿವಾಹಿತ ತಾಯಿ, ಸಲಿಂಗಕಾಮಿ, ವೇಶ್ಯೆಯರು, ತೃತೀಯ ಲಿಂಗಿ ಇತ್ಯಾದಿ ತನ್ನ ಹೆಣ್ಣು ಸಂತಾನದ ನಡುವೆ ಸ್ವತಃ ದುರ್ಗಾಮಾತೆಯೇ ಭೇದಭಾವ ಮಾಡದಿರುವಾಗ ನಾವು ಮಾಡುವುದು ಎಷ್ಟು ಸರಿ? ಎನ್ನುವ ಪ್ರಶ್ನೆ ಪ್ರತಿಯೊಬ್ಬರನ್ನು ಎಚ್ಚರಿಸಿತು. ಕುಂಕುಮದ ಎರಡು ಚುಕ್ಕಿಗಳನ್ನು ಹಣೆಯ ಮೇಲೆ ಧರಿಸಿ ಸೆಲ್ಫಿà ಕಳಿಸುವ ಮೂಲಕ ಸರ್ವ ಸ್ತ್ರೀಯರನ್ನೂ ಆಹ್ವಾನಿಸಿ ಎಲ್ಲ ರನ್ನೂ ಒಳಗೊಂಡ ಅಭೂತಪೂರ್ವ ಸಿಂಧೂರ ಖೇಲಾವನ್ನು ಆಚರಿಸಲಾಯಿತು. ಸ್ತ್ರೀಸಮುದಾಯವನ್ನು ಪ್ರತ್ಯೇಕಿಸುವ ಯಾಜಮಾನ್ಯ ಸಂಸ್ಕೃತಿಯಿಂದ ರೂಪಿತಗೊಂಡ ಆಚರಣೆಯನ್ನು ತ್ಯಜಿಸಲಾಯಿತು. ಪರಿಸ್ಥಿತಿಗೆ ತಲೆಬಾಗಿ ಧಾರ್ಮಿಕ ಆಚರಣೆಯಿಂದ ತಮ್ಮಿಚ್ಛೆಯ ವಿರುದ್ಧ ಹೊರಗೆ ದಬ್ಬಲ್ಪಟ್ಟ ಮಹಿಳೆಯರನ್ನು ನಿಷರತ್ತು ಸೇರ್ಪಡೆಗೊಳಿಸುವ ಮೂಲಕ ನೂತನ ಸೋದರೀತನದ ಭಾವವನ್ನು ಅಪ್ಪಿಕೊಳ್ಳಲಾಯಿತು. ಲಿಂಗ ಸಮಾನತೆಯ ಕುರಿತು ನಾವು ದನಿಯೇರಿಸುತ್ತಿರುವಾಗ ಸಲಿಂಗಿಗಳ ನಡುವಿನ ಸಮಾನತೆಯೂ ಅಷ್ಟೆ ಮುಖ್ಯ ಎನ್ನುವುದನ್ನು ಮನಗಾಣಿಸಲಾಯಿತು. ಮಮತಾ ರಾವ್