Advertisement

ದುರ್ಗಾಮಾತೆ ಜಂಬೂ ಸವಾರಿ

05:14 PM Oct 20, 2018 | |

ಹರಿಹರ: ವಿಜಯ ದಶಮಿ ನಿಮಿತ್ತ ಶುಕ್ರವಾರ ಸಂಜೆ ನಗರದಲ್ಲಿ ನಡೆದ ಅದ್ಧೂರಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸಾವಿರಾರು ಜನರು ಶ್ರದ್ಧಾ ಭಕ್ತಿಯಿಂದ ಬನ್ನಿ ಮುಡಿದರು.

Advertisement

ನಗರದ ಶ್ರೀ ಹರಿಹರೇಶ್ವರ ದೇವಸ್ಥಾನದ ಆವರಣದಲ್ಲಿ ಉಜ್ಜಯಿನಿ ಪೀಠದ ಸಿದ್ದಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಶ್ರೀಗಳ ಸಾನ್ನಿಧ್ಯದಲ್ಲಿ ಆರಂಭವಾದ ಮೆರವಣಿಗೆಗೆ ಶಾಸಕ ಎಸ್‌.ರಾಮಪ್ಪ ಚಾಲನೆ ನೀಡಿದರು. ನಂತರ ನಗರದ ಪ್ರಮು ಖ ಬೀದಿಗಳಲ್ಲಿ ಮೆರವಣಿಗೆ ಸಂಚರಿಸಿತು.

ಅಂಬಾರಿಯಲ್ಲಿ ದುರ್ಗಾ ಮಾತೆ ಮೂರ್ತಿ ಹೊತ್ತು ಅಲಂಕೃತ ಆನೆ ಬರುತ್ತಿದ್ದಂತೆ ಇಕ್ಕೆಲಗಳಲ್ಲಿ ನಿಂತ ಜನರು ಬಾಗಿ ಕೈ ಮುಗಿದು ನಮಿಸಿದರು. ಮೆರವಣಿಗೆ ನಗರದ ದೇವಸ್ಥಾನ ರಸ್ತೆ, ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ಮುಖ್ಯ ರಸ್ತೆ, ಗಾಂಧಿ  ವೃತ್ತ, ಹಳೆ ಪಿ.ಬಿ ರಸ್ತೆ ಮೂಲಕ ಸಾಗಿ, ಹಳೆ ನೀರು ಸರಬರಾಜು ಕೇಂದ್ರದ ಬಳಿಯ ಜೋಡು ಬಸವೇಶ್ವರ ದೇವಸ್ಥಾನ ತಲುಪಿತು. 

ಅಲ್ಲಿ ಬನ್ನಿ ಮಂಟಪಕ್ಕೆ ಪೂಜೆ ಸಲ್ಲಿಸಿ, ದೇವಸ್ಥಾನದ ಆವರಣದಲ್ಲಿರುವ ಬನ್ನಿ ವೃಕ್ಷದಿಂದ ಒಂದೆಸಳು ಪತ್ರೆ ತೆಗೆಯುವ ಮೂಲಕ ಸಾಮೂಹಿಕ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ತಹಶೀಲ್ದಾರ್‌ ರೆಹಾನ್‌ ಪಾಷಾ ಚಾಲನೆ ನೀಡಿದರು.

ಮನಸೂರೆಗೊಂಡ ಮೆರವಣಿಗೆ: ನಂದಿಕೋಲು, ಗೊರವಪ್ಪರ ಕುಣಿತ, ಬೊಂಬೆ ಕುಣಿತ, ಸಮಾಳ ಕುಣಿತ, ಕೋಲು ಕುಣಿತ, ಬಗೆಬಗೆಯ ವೇಷಧಾರಿಗಳು, ಡೊಳ್ಳು ತಂಡ, ಬ್ಯಾಂಡ್‌ ಸೆಟ್‌, ಶಿವ ತಾಂಡವ ನೃತ್ಯ ತಂಡ, ಬೆದರು ಬೊಂಬೆ, ಮಂಗಳ ವಾದ್ಯ ಸೇರಿದಂತೆ ಮೆರವಣಿಗೆಯಲ್ಲಿದ್ದ ವಿವಿಧ ಕಲಾ ತಂಡಗಳು ಜನಮನ ಸೂರೆಗೊಂಡವು.

Advertisement

ವಿವಿಧ ಸಮಾಜದ ದೇವಸ್ಥಾನಗಳ ಉತ್ಸವ ಮೂರ್ತಿಗಳು, ಒಂಟೆಗಳು ಮೆರವಣಿಗೆಯಲ್ಲಿದ್ದವು. ಎತ್ತಿನ ಬೆಲ್ಲದ ಬಂಡಿಯಲ್ಲಿ ಜನರಿಗೆ ಪಾನಕ ವಿತರಿಸಲಾಯಿತು.

ಜನಪ್ರತಿನಿಧಿಗಳ ಕುಣಿತ: ಮೆರವಣಿಗೆಯಲ್ಲಿ ಡಿಜೆ ಸಂಗೀತಕ್ಕೆ ನೂರಾರು ಯುವಕರು ಗುಂಪಾಗಿ ಕುಣಿದು ಕುಪ್ಪಳಿಸಿದರು. ಶಾಸಕ ಎಸ್‌. ರಾಮಪ್ಪ, ಮಾಜಿ ಶಾಸಕ ಬಿ.ಪಿ.ಹರೀಶ್‌ ಕೂಡ ಸಂಗೀತಕ್ಕೆ ಹೆಜ್ಜೆ ಹಾಕಿ ಯುವಕರಿಗೆ ಉತ್ಸಾಹ ತುಂಬಿದರು.

ಸಂಸದ ಜಿ.ಎಂ.ಸಿದ್ದೇಶ್ವರ್‌, ಮಾಜಿ ಶಾಸಕ ಎಚ್‌.ಎಸ್‌. ಶಿವಶಂಕರ್‌, ನಗರಸಭಾಧ್ಯಕ್ಷೆ ಸುಜಾತಾ ರೇವಣಸಿದ್ದಪ್ಪ, ಮಹೋತ್ಸವ ಸಮಿತಿ ಅಧ್ಯಕ್ಷ ಶಂಕರ್‌ ಖಟಾವ್‌ಕರ್‌, ನಗರದ ಗಣ್ಯರು ಇದ್ದರು.   

Advertisement

Udayavani is now on Telegram. Click here to join our channel and stay updated with the latest news.

Next