Advertisement

ಫೇಲ್ ಆದವರೇ ಇವರ ಟಾರ್ಗೆಟ್: ವಿವಿಗಳ ಹೆಸರಿನಲ್ಲಿ ನಕಲಿ ಅಂಕಪಟ್ಟಿ ನೀಡುತ್ತಿದ್ದ ಜಾಲ ಪತ್ತೆ

12:02 PM Mar 09, 2022 | Team Udayavani |

ಬೆಂಗಳೂರು: ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ, ಕುವೆಂಪು ಮತ್ತು ಮಂಗಳೂರು ವಿಶ್ವವಿದ್ಯಾಲಯಗಳು ಸೇರಿ ದೇಶದ ವಿವಿಧ ವಿಶ್ವವಿದ್ಯಾಲಯಗಳ ನಕಲಿ ಅಂಕಪಟ್ಟಿ ಹಾಗೂ ಪ್ರಮಾಣ ಪತ್ರ ಮಾರಾಟ ಮಾಡುತ್ತಿದ್ದ ಜಾಲವನ್ನು ಜಯನಗರ ಪೊಲೀಸರು ಭೇದಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

ಜಯನಗರ ನಿವಾಸಿ ರಘು (34),ರಾಜಾಜಿನಗರದ ಧರ್ಮಕುಮಾರ್‌ (39), ಕೆ.ಆರ್‌.ಪುರನಿವಾಸಿ ದೀಪಕ್‌ (32), ಉತ್ತರಹಳ್ಳಿ ನಿವಾಸಿ ನರೇಶ್‌ ರೆಡ್ಡಿ (37) ಬಂಧಿತರು. ಅವರಿಂದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ200 ನಕಲಿ ಅಂಕಪಟ್ಟಿ, ಬ್ಯಾಂಕ್‌ಖಾತೆಯಲ್ಲಿದ್ದ 4.60 ಲಕ್ಷ ರೂ. ನಗದು, 2ಲ್ಯಾಪ್‌ ಟಾಪ್‌, ಪ್ರಿಂಟರ್‌, ಹಲವು ವಿವಿಗಳ ನಕಲಿ ಸೀಲುಗಳು,ಹಾಲೋಗ್ರಾಮ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ಆರೋಪಿಗಳು ಇತ್ತೀಚೆಗೆ ಮಾ.7ರಂದು ಜಯನಗರ 3ನೇ ಬ್ಲಾಕ್‌ನಲ್ಲಿರುವ ಎನ್‌ಎಂಕೆಆರ್‌ ಕಾಲೇಜು ಬಳಿ ರಘು ಹಾಗೂ ಧರ್ಮಕುಮಾರ್‌ ಅನುತ್ತೀರ್ಣ ಹೊಂದಿ, ಮರು ಪರೀಕ್ಷೆ ಬರೆಯಲು ಬರುವ ವಿದ್ಯಾರ್ಥಿಗಳನ್ನು ಹುಡುಕುತ್ತಿದ್ದರು. ಅದು ಕಾಲೇಜು ಆಡಳಿತ ಮಂಡಳಿ ಗಮನಕ್ಕೆ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಜಯನಗರ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಯು.ಆರ್‌.ಮಂಜುನಾಥ್‌, ಪಿಎಸ್‌ಐ ಚಂದನ್‌ ಕಾಳೆ, ರವಿಕುಮಾರ್‌ ನೇತೃತ್ವದ ತಂಡ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ.

ಇದನ್ನೂ ಓದಿ: 500 ರೂ.ಗೆ ಕೂಲಿ ಕಾರ್ಮಿಕನ ಕೊಲೆ : ಆರೋಪಿ ಬಂಧನ

ನಂತರ ಅವರ ಮಾಹಿತಿ ಮೇರೆಗೆ ಇತರೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.ಆರೋಪಿಗಳ ಪೈಕಿ ದಿಲೀಪ್‌ ಎಂಬಿಎ ಪದವೀಧರನಾಗಿದ್ದು, ನರೇಶ್‌ ರೆಡ್ಡಿ ಟೆಕಿಯಾಗಿದ್ದಾನೆ. ಇನ್ನು ಧರ್ಮಕುಮಾರ್‌ ಕರ್ನಾಟಕ ಮುಕ್ತ ವಿವಿ ಹಾಗೂ ಕರ್ನಾಟಕ ಹಲವು ವಿವಿಗಳಲ್ಲಿ ಡೊನೇಷನ್‌ ಆಧಾರದಲ್ಲಿ ಸೀಟು ಕೊಡಿಸುವ ಮಧ್ಯವರ್ತಿಯಾಗಿದ್ದ. ರಘು ಕೂಡ ಈತನಿಗೆ ಸಹಕಾರ ನೀಡುತ್ತಿದ್ದ. ಆದರೆ, ನಿರೀಕ್ಷೆ ಮಟ್ಟದಲ್ಲಿ ಲಾಭ ಬಾರದ ಕಾರಣ ಅದನ್ನು ನಿಲ್ಲಿಸಿದ್ದರು. ಈ ಮಧ್ಯೆ ಜೀವನೋಪಾಯಕ್ಕಾಗಿ 2019ರಿಂದ ನಕಲಿ ಅಂಕಪಟ್ಟಿ ಮತ್ತು ಪ್ರಮಾಣ ಪತ್ರ ಮಾರಾಟ ದಂಧೆ ಆರಂಭಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

Advertisement

ಅಸಲಿ ಟು ನಕಲಿ: ಆರೋಪಿಗಳು ವಿವಿಗಳ ಅಸಲಿ ಅಂಕಪಟ್ಟಿ ಪಡೆದುಕೊಂಡು, ಅವುಗಳಲ್ಲಿರುವ ಹಾಲೋಗ್ರಾಮ್‌ ಮತ್ತು ವಿವಿಗಳ ಕೆಲ ಹಂತದ ಸಿಬ್ಬಂದಿಗೆ ಹಣ ಕೊಟ್ಟು ಕೆಲ ಹೊತ್ತಿನವರೆಗೆ ಸೀಲ್‌ಗಳನ್ನು ಕೊಂಡೊಯ್ದು ನಕಲಿ ಸೀಲ್‌ಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ. ನಂತರದ ನಗರದ ವಿವಿಧ ಕಾಲೇಜುಗಳಲ್ಲಿನ ಡಿ ದರ್ಜೆಯ ಸಿಬ್ಬಂದಿ ಒಂದಿಷ್ಟು ಹಣ ಕೊಟ್ಟು, ಅನುತ್ತೀರ್ಣಗೊಂಡಿದ್ದ ವಿದ್ಯಾರ್ಥಿಗಳ ಪಟ್ಟಿ ಮತ್ತು ಮೊಬೈಲ್‌ ಹಾಗೂ ಇತರೆ ಮಾಹಿತಿ ಪಡೆದುಕೊಂಡಿದ್ದಾರೆ. ಆ ವಿದ್ಯಾರ್ಥಿಗಳನ್ನು ಸಂಪರ್ಕಿಸಿ, ಹಣ ಕೊಟ್ಟರೆ ಅಂಕಪಟ್ಟಿ ಮತ್ತು ಪ್ರಮಾಣ ಪತ್ರ ಕೊಡುತ್ತೇವೆ. ಅದರಿಂದ ಕೆಲಸ ಪಡೆಯಬಹುದು ಎಂದು ಆಮಿಷವೊಡ್ಡಿದ್ದರು. ಅನುತ್ತೀರ್ಣಗೊಂಡ ವಿದ್ಯಾರ್ಥಿಗಳನ್ನು ಆರೋಪಿ ರಘು ಮತ್ತು ಧರ್ಮಕುಮಾರ್‌ ಶೋಧಿಸುತ್ತಿದ್ದರು. ದೀಪಕ್‌ ಮತ್ತು ನರೇಶ್‌ ಅಂಕಪಟ್ಟಿ ತಯಾರಿಸುತ್ತಿದ್ದರು. ವಿದ್ಯಾರ್ಥಿಗಳ ಬೇಡಿಕೆ ಅನುಗುಣವಾಗಿ ಲ್ಯಾಪ್‌ಟಾಪ್‌ ಮೂಲಕ ಹಾಲೋಗ್ರಾಮ್‌ ಅನ್ನು ನಕಲಿ ಅಂಕಪಟ್ಟಿಗೆ ಸೇರಿಸಿ, ನಂತರ ಸೀಲು ಹಾಕಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next