ಮುಂಬಯಿ: ಕಿಂಗ್ ಖಾನ್ ಶಾರುಖ್ ಖಾನ್ ಮತ್ತೊಂದು ಹಿಟ್ ತಂದುಕೊಟ್ಟ ʼಡಂಕಿʼ ಥಿಯೇಟರ್ ನಲ್ಲಿ ಭರ್ಜರಿ ಪ್ರದರ್ಶನ ಕಂಡ ಬಳಿಕ ಓಟಿಟಿಗೆ ಲಗ್ಗೆಯಿಟ್ಟಿದೆ.
ʼಪಠಾಣ್ʼ, ʼಜವಾನ್ʼ 100 ಕೋಟಿ ಕ್ಲಬ್ ಸೇರುವ ಮೂಲಕ ಶಾರುಖ್ ಅವರಿಗೆ ದೊಡ್ಡ ಕಂಬ್ಯಾಕ್ ಮಾಡಿಸಿಕೊಟ್ಟಿತು. ಆ ಬಳಿಕ ರಾಜ್ ಕುಮಾರ್ ಹಿರಾನಿ ಅವರೊಂದಿಗೆ ಶಾರುಖ್ ಅವರು ʼಡಂಕಿʼ ಸಿನಿಮಾದಲ್ಲಿ ಕಾಣಿಸಿಕೊಂಡರು. ʼಸಲಾರ್ʼ ಜೊತೆಗೆ ಸಿನಿಮಾ ರಿಲೀಸ್ ಆಗಿತ್ತು. ಆ ಮೂಲಕ ಬಾಕ್ಸ್ ಆಫೀಸ್ ನಲ್ಲೂ ಸಿನಿಮಾಕ್ಕೆ ಪೈಪೋಟಿಯಿತ್ತು. ಆರಂಭದಲ್ಲಿ ಕೊಂಚ ನಿಧಾನವಾಗಿ ಗಳಿಕೆ ಕಂಡರೂ ಆ ಬಳಿಕದ ರಜಾದಿನಗಳು ʼಡಂಕಿʼ ಗೆ ವರದಾನವಾಯಿತು.
ʼಡಂಕಿ ಫ್ಲೈಟ್ ʼ ಕಥೆಯ ಮೇಲೆ ಚಿತ್ರ ಮೂಡಿಬಂದಿದ್ದು, ಅಕ್ರಮ ದಾರಿಯಲ್ಲಿ ಲಂಡನ್ ಹಾದಿಯನ್ನು ಹಿಡಿಯುವ ಸ್ನೇಹಿತರ ಸಾಹಸ – ಸಂಕಷ್ಟವನ್ನು ಸಿನಿಮಾದಲ್ಲಿ ತೋರಿಸಲಾಗಿದೆ.
ವರ್ಲ್ಡ್ ವೈಡ್ 450 ಕೋಟಿಗೂ ಅಧಿಕ ಗಳಿಕೆ ಕಂಡು, ಇದೀಗ ಓಟಿಟಿಯಲ್ಲಿ ಕಮಾಲ್ ಮಾಡಲು ಸಿನಿಮಾ ನೆಟ್ ಫ್ಲಿಕ್ಸ್ ನಲ್ಲಿ ಗುರುವಾರ(ಫೆ.15 ರಂದು) ರಿಲೀಸ್ ಆಗಿದೆ. “ನಿಮ್ಮ ಮನೆಗೆ ಡಂಕಿ ಬರ್ತಾ ಇದೆ” ಎಂದು ನೆಟ್ ಫ್ಲಿಕ್ಸ್ ಪೋಸ್ಟರ್ ಹಂಚಿಕೊಂಡಿದೆ.
ಸಿನಿಮಾದಲ್ಲಿ ಶಾರುಖ್ ಖಾನ್, ತಾಪ್ಸಿ ಪನ್ನು, ವಿಕ್ಕಿ ಕೌಶಲ್, ಬೊಮನ್ ಇರಾನಿ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.