ಮಾಸ್ ಸಿನಿಮಾ ಎಂದರೆ ಭರ್ಜರಿ ಫೈಟ್ ಬೇಕು, ಪಂಚಿಂಗ್ ಡೈಲಾಗ್‌ಗಳಿರಬೇಕು, ಖಡಕ್ ವಿಲನ್ ಅಬ್ಬರಿಸಬೇಕು, ಅದಕ್ಕೆ ಪೂರಕವಾದ ಅಡ್ಡೆಗಳಿರಬೇಕು… ಜೊತೆಗೊಂದು ಸಂದೇಶವೂ ಇರಬೇಕು. ಇಷ್ಟಿದ್ದರೆ ಮಾಸ್ ಮನಸ್ಸುಗಳಿಗೆ ಖುಷಿಯೋ ಖುಷಿ. ಈ ವಾರ ತೆರೆಕಂಡಿರುವ “ಭೀಮ’ ಚಿತ್ರದಲ್ಲಿ ಇವೆಲ್ಲವೂ ಹೇರಳವಾಗಿಯೇ ಇದೆ. ಹಾಗಾಗಿ, ಮಾಸ್ ಪ್ರೇಕ್ಷಕರಿಗೆ ಭೀಮ ಬಾಡೂಟವನ್ನೇ ಬಡಿಸಿದ್ದಾನೆ ಎಂದರೆ ತಪ್ಪಲ್ಲ. ನಿರ್ದೇಶಕ ವಿಜಯ್ ಕುಮಾರ್ ಇವತ್ತು ಸಮಾಜದಲ್ಲಿ ನಡೆಯುತ್ತಿರುವ ಘಟನೆಯನ್ನು ತಂದು ಅದಕ್ಕೆ “ರಕ್ತಾಭೀಷೇಕ’ ಮಾಡಿದ್ದಾರೆ. ಅದೇ ಕಾರಣದಿಂದ ಭೀಮ ಹಾದಿಯ ತುಂಬ “ಕೆಂಪು’ ಹೆಜ್ಜೆ ಗುರುತು…
ಡ್ರಗ್ಸ್ ದಂಧೆಯ ಕಥೆಯ ಜೊತೆಗೆ ಅದಕ್ಕೆ ಬಲಿಯಾಗುತ್ತಿರುವ ಅಮಾಯಕ ಯುವ ಪಡೆ ಮತ್ತೂಂದೆಡೆ… ಈ ಎರಡು ಅಂಶಗಳನ್ನು “ಭೀಮ’ದಲ್ಲಿ ಬಲವಾಗಿ ತೋರಿಸಲು ಪ್ರಯತ್ನಿಸಿ ದ್ದಾರೆ ವಿಜಯ್. ಅದಕ್ಕಾಗಿ ಅವರು ಆಯ್ಕೆಮಾಡಿ ಕೊಂಡಿರೋದು ಆ್ಯಕ್ಷನ್ ಡ್ರಾಮಾವನ್ನು. ಅದೇ ಕಾರಣದಿಂದ “ಭೀಮ’ ನ ಇಡೀ ಕ್ಯಾನ್ವಾಸ್‌ಗೆ ಆ್ಯಕ್ಷನ್ ಇಮೇಜ್ ಅಂಟಿದೆ. ಒಂದೊಂದು ಫ್ರೇಮ್ ಅನ್ನು ಕೂಡಾ ವಿಜಯ್ ರಗಡ್ ಆಗಿಯೇ ಕಟ್ಟಿಕೊಟ್ಟಿದ್ದಾರೆ. ಒಂದೊಳ್ಳೆಯ ಉದ್ದೇಶದ ಸಾಕಾರಕ್ಕಾಗಿ ಇಲ್ಲಿ ಟ್ಯಾಂಕರ್‌ಗಟ್ಟಲೇ ರಕ್ತ ಹರಿಯುತ್ತದೆ, ಪಡ್ಡೆಗಳ ಅಡ್ಡೆಗಳು ಹೆಜ್ಜೆ ಹೆಜ್ಜೆಗೂ ಸಿಗುತ್ತವೆ, ಬೇಕೋ ಬೇಡವೋ ಹರೆಯದ ಯುವಕರು “ಅಮಲುಗಣ್ಣಿನ’ಲ್ಲಿ ತೇಲಾಡುತ್ತಾರೆ. ಈ ಎಲ್ಲಾ “ಪ್ರಭಾವಳಿ’ಗಳು ಮೂಲಕಥೆಯನ್ನು ಮುನ್ನಡೆಸಿಕೊಂಡು ಹೋಗುತ್ತವೆ.
ಮೊದಲೇ ಹೇಳಿದಂತೆ ಇದು ಔಟ್ ಅಂಡ್ ಔಟ್ ಮಾಸ್ ಸಿನಿಮಾ. ಅವರ ಖುಷಿಯೇ ಮೊದಲ ಗೆಲುವು ಎಂದು ತಂಡ ನಂಬಿ ದಂತಿದೆ. ಆ ಕಾರಣದಿಂದಲೇ ಇಲ್ಲಿ ಬರುವ ಸಂಭಾಷಣೆಗಳು ಮಾಸ್‌ಗೆ “ಕ್ಯೂಟ್’ ಆಗಿಯೂ ಕ್ಲಾಸ್‌ಗೆ “ಮ್ಯೂಟ್’ ಆಗಿಯೂ ಕೇಳಿಸುವಂತಿದೆ. ಆ ಮಟ್ಟಿಗೆ ಸಂಭಾಷಣೆಕಾರ ಮಾಸ್ತಿ “ಕೈ ಚಳಿ’ ಬಿಟ್ಟು ಬರೆದಿದ್ದಾರೆ. ಇಲ್ಲಿ ಹೆಣ್ಣು-ಗಂಡು ಎಂಬ ಯಾವ ಭೇದ-ಭಾವವೂ ಇಲ್ಲದೇ ಎಲ್ಲಾ ಪಾತ್ರಗಳು ತಮಗೆ ಸಿಕ್ಕ ಡೈಲಾಗ್ ಅನ್ನು “ಕಣ್ಣಿಗೊತ್ತಿ’ಕೊಂಡು ಹೇಳಿವೆ.
ಕಥೆ ಹಾಗೂ ಅದನ್ನು ಕಟ್ಟಿಕೊಟ್ಟಿರುವ ಪರಿಸರ ಎರಡೂ ಹೊಂದಿಕೊಂಡಿದೆ. ಡ್ರಗ್ಸ್‌ಗೆ ದಾಸರಾದವರ ಚಟ, ಹಠ ಒಂದು ಕಡೆಯಾದರೆ ಅವರ ಕುಟುಂಬದವರ ಗೋಳಾಟ ಮತ್ತೂಂದು ಕಡೆ.. ಇಂತಹ ಸೂಕ್ಷ್ಮ ಅಂಶಗಳನ್ನು ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ. ಚಿತ್ರದಲ್ಲೊಂದು ಲವ್ ಸ್ಟೋರಿಯೂ ಇದೆ. ಸುಡು ಸುಡು ಸಿಂಗಾರಿಯೂ ಇದ್ದಾಳೆ. ಇನ್ನು, ಇದು ಆ್ಯಕ್ಷನ್ ಸಿನಿಮಾವಾದರೂ ಇಲ್ಲಿ ಆಗಾಗ ನಗು ಉಕ್ಕಿಸುವ ಒಂದಷ್ಟು ಸನ್ನಿವೇಶಗಳಿವೆ, ವಿಚಿತ್ರ, ವಿಕ್ಷಿಪ್ತ ಪಾತ್ರಗಳಿವೆ. ಆ ಮಟ್ಟಿಗೆ ವಿಜಯ್ ಪಾತ್ರಗಳ ಆಯ್ಕೆಯಲ್ಲಿ ಸ್ವಲ್ಪ ಹೆಚ್ಚೇ ನಿಗಾ ವಹಿಸಿದಂತಿದೆ.
ನಾಯಕ ಹಾಗೂ ನಿರ್ದೇಶಕರಾಗಿ ವಿಜಯ್ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಹಿಸಿದ್ದಾರೆ. ತಾನು ಮಾಡುತ್ತಿರುವ ಸಿನಿಮಾದ ಮೊದಲ ಪ್ರೇಕ್ಷಕ ಮಾಸ್ ಎಂಬುದು ವಿಜಯ್‌ಗೆ ಚೆನ್ನಾಗಿಯೇ ಗೊತ್ತಿರುವ ಕಾರಣ ಅದಕ್ಕೆ ಬೇಕಾದ ಸರಕುಗಳನ್ನು ತುಂಬಿದ್ದಾರೆ. ಉಳಿದಂತೆ ಅಶ್ವಿನಿ, ಗೋಪಾಲಕೃಷ್ಣ ದೇಶಪಾಂಡೆ, ಮಂಜು ಸೇರಿದಂತೆ ಇತರರು ನಟಿಸಿದ್ದಾರೆ. ಆ್ಯಕ್ಷನ್ ಡ್ರಾಮಾವನ್ನು ಇಷ್ಟಪಡುವವರಿಗೆ “ಭೀಮ’ ಒಳ್ಳೆಯ ಆಯ್ಕೆಯಾಗಬಹುದು.
ರವಿಪ್ರಕಾಶ್ ರೈ