ಬೆಂಗಳೂರು: ಮಾಸ್ತಿಗುಡಿ ಸಿನಿಮಾ ಚಿತ್ರೀಕರಣದ ವೇಳೆ ಇಬ್ಬರು ನಟರು ಮೃತಪಟ್ಟ ಪ್ರಕರಣ ಸಂಬಂಧ ತಾವರೆಕೆರೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಹಲ್ಲೆ ಪ್ರಕರಣದಲ್ಲಿ ನಟ ದುನಿಯಾ ವಿಜಯ್ ಹಾಗೂ ಚಿತ್ರ ನಿರ್ಮಾಪಕ ಸುಂದರ್ ಪಿ.ಗೌಡನ ವಿರುದ್ಧ ಸಿ.ಕೆ.ಅಚ್ಚುಕಟ್ಟು ಪೊಲೀಸರು 2ನೇ ಎಸಿಎಂಎಂ ನ್ಯಾಯಾಲಯಕ್ಕೆ 65 ಪುಟಗಳ ದೋಷಾರೋಪಪಟ್ಟಿ ಸಲ್ಲಿಸಿದ್ದಾರೆ.
ಮಾಸ್ತಿಗುಡಿ ಚಿತ್ರೀಕರಣದ ವೇಳೆ ಖಳ ನಟರಾದ ಉದಯ್ ಮತ್ತು ಅನಿಲ್ ಮೃತಪಟ್ಟ ಹಿನ್ನೆಲೆಯಲ್ಲಿ ಸುಂದರ್ ಪಿ.ಗೌಡ ವಿರುದ್ಧ ಪ್ರಕರಣ ದಾಖಲಾಗಿದ್ದು, ಪದೇ ಪದೆ ಕೋರ್ಟ್‌ಗೆ ಗೈರಾಗುತ್ತಿದ್ದರು. ಈ ಹಿನ್ನೆಲೆಯಲ್ಲಿ ವಾರಂಟ್ ಜಾರಿ ಮಾಡಲು ತಾವರೆಕೆರೆ ಮತ್ತು ಸಿ.ಕೆ.ಅಚ್ಚುಕಟ್ಟು ಪೊಲೀಸರು ಮೇ 30ರ ರಾತ್ರಿ ಹೊಸಕೆರೆಹಳ್ಳಿಯ ಸುಂದರ್ ಗೌಡ ಮನೆಗೆ ಹೋಗಿದ್ದರು. ಈ ವೇಳೆ ಸುಂದರ್‌ಗೌಡನನ್ನು ಬಂಧಿಸದಂತೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದಲ್ಲದೆ, ಆರೋಪಿ ಸುಂದರ್ ಗೌಡ ಪರಾರಿಯಾಗಲು ವಿಜಯ್ ಸಹಕರಿಸಿದ್ದರು.
ಈ ಸಂಬಂಧ ಮುಖ್ಯ ಪೇದೆ ಗೋವಿಂದರಾಜು ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿಕೊಂಡಿದ್ದ ಸಿ.ಕೆ.ಅಚ್ಚುಕಟ್ಟು ಪೊಲೀಸರು, ತಲೆಮರೆಸಿಕೊಂಡಿದ್ದ ದುನಿಯಾ ವಿಜಿ ಮತ್ತು ಸುಂದರ್ ಗೌಡರನ್ನು ಬಂಡೀಪುರ ಟೈಗರ್ ರೆಸಾರ್ಟ್‌ನಲ್ಲಿ ಬಂಧಿಸಿದ್ದರು. ಇದೀಗ ತನಿಖೆ ಪೂರ್ಣಗೊಳಿಸಿದ ಪೊಲೀಸರು, ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದು, ಪ್ರಕರಣ ಸಂಬಂಧ 9 ಮಂದಿ ಸಾಕ್ಷ್ಯಗಳ ಹೇಳಿಕೆಯನ್ನು ಉಲ್ಲೇಖೀಸಿದ್ದಾರೆ.
ತಪ್ಪೊಪ್ಪಿಕೊಂಡ ವಿಜಯ್: “ಮೇ 30ರ ರಾತ್ರಿ 11 ಗಂಟೆಗೆ ನನ್ನ ಮೊಬೈಲ್ ಸಂಖ್ಯೆಗೆ ನಿರ್ಮಾಪಕ ಸುಂದರ್ ಗೌಡ ಕರೆ ಮಾಡಿದ್ದರು. ತಾವರೆಕೆರೆ ಪೊಲೀಸರು ವಾರೆಂಟ್ ಹಿಡಿದು ಬಂದಿದ್ದು, ನನ್ನನ್ನು ಬಂಧಿಸುತ್ತಾರೆ ಎಂದು ಹೇಳಿದ್ದರು. ಹೀಗಾಗಿ ಸುಂದರ್‌ಗೌಡ ಮನೆಗೆ ತೆರಳಿ ಅವರನ್ನು ಬಂಧಿಸದಂತೆ ಪೊಲೀಸರನ್ನು ತಡೆದಿದ್ದೆ. ರಾತ್ರಿ ವೇಳೆ ಮನೆಗೆ ಬಂದು ದಬ್ಟಾಳಿಕೆ ಮಾಡುತ್ತೀರಾ ಎಂದು ಕರ್ತವ್ಯನಿರತ ಪೊಲೀಸರನ್ನು ಪ್ರಶ್ನಿಸಿದ್ದೆ.
ಪೊಲೀಸರು ತಾವು ತಂದಿದ್ದ ವಾರೆಂಟ್ ನನಗೆ ತೋರಿಸಿದ್ದರು. ಆದರೂ ರಾತ್ರಿ ವೇಳೆ ಬಂದು ತೊಂದರೆ ಕೊಡಬೇಡಿ, ನಿಮ್ಮ ವಿರುದ್ಧವೇ ದೌರ್ಜನ್ಯ ಎಸಗಿದ ದೂರು ಕೊಡಬೇಕಾಗುತ್ತದೆ ಎಂದು ಹೇಳಿ ಪೇದೆ ಕೈ ಹಿಡಿದು ಎಳೆದಿದ್ದೆ’ ಎಂದು ವಿಚಾರಣೆ ಸಂದರ್ಭದಲ್ಲಿ ದುನಿಯಾ ವಿಜಯ್ ಹೇಳಿಕೆ ನೀಡಿದ್ದಾರೆ.
ನಿರ್ಮಾಪಕ ಸುಂದರ್ ಪಿ.ಗೌಡ ಕೂಡ ಹೇಳಿಕೆ ನೀಡಿದ್ದು, ವಿಜಯ್ ಸಹಾಯದಿಂದ ಕೇವಲ 10 ನಿಮಿಷಗಳಲ್ಲಿ ತಪ್ಪಿಸಿಕೊಂಡೆ. ಬಟ್ಟೆ ಬದಲಿಸುವ ನೆಪದಲ್ಲಿ ಮನೆಯೊಳಗೆ ಹೋಗಿ, ಹಿಂದಿನ ಬಾಗಿಲ ಮೂಲಕ ಪರಾರಿಯಾಗಿ, ವಿಜಯ್ ಸ್ನೇಹಿತನ ಮನೆಯಲ್ಲಿ ವಾಸವಾಗಿದ್ದೆ ಎಂದು ಹೇಳಿಕೆ ನೀಡಿದ್ದಾರೆ.