ಇತ್ತೀಚೆಗಷ್ಟೇ ನಟ ಚಾಲೆಂಜಿಂಗ್ ಸ್ಟಾರ್ ಫೇಸ್ ಬುಕ್ ಲೈವ್‌ನಲ್ಲಿ ತಮ್ಮ ಅಭಿಮಾನಿಗಳಿಗೆ ದರ್ಶನ ನೀಡಿದ್ದು ಗೊತ್ತಿರಬಹುದು. ಈ ವೇಳೆ ದರ್ಶನ್, ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಆಚರಿಸದಂತೆ, ಅಭಿಮಾನಿಗಳಿಗೆ ಮನವಿ ಮಾಡಿದ್ದರು. ಈಗ ಕನ್ನಡದ ಮತ್ತೂಬ್ಬ ಸ್ಟಾರ್ ನಟ ದುನಿಯಾ ವಿಜಯ್ ಕೂಡ ಫೇಸ್‌ಬುಕ್ ಲೈವ್ ಮೂಲಕ ತಮ್ಮ ಅಭಿಮಾನಿಗಳ ಮುಂದೆ ದರ್ಶನ ಕೊಟ್ಟಿದ್ದಾರೆ.
ಹೌದು, ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಫೇಸ್‌ಬುಕ್ ಲೈವ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದ ನಟ ದುನಿಯಾ ವಿಜಯ್, “ಎಲ್ಲರಿಗೂ ಗೊತ್ತಿರುವಂತೆ ಕೊರೊನಾ ಇನ್ನೂ ಹೋಗಿಲ್ಲ. ಅದಕ್ಕೆ ಔಷಧ ಸಹ ಇನ್ನು ಕೈಗೆ ಸಿಕ್ಕಿಲ್ಲ. ಹಾಗಾಗಿ ಈ ವರ್ಷ ನನ್ನ ಹುಟ್ಟುಹಬ್ಬ (ಜ.20) ಆಚರಿಸುವುದು ಬೇಡ. ನಾನು ಸಹ ಕುಟುಂಬದ ಜೊತೆಗೆ ಹೊರಗಡೆ ಬಂದಿರುವೆ. ಹೀಗಾಗಿ ದಯವಿಟ್ಟು ಈ ಅಭಿಮಾನಿಗಳು ಯಾರೂ ದೂರದ ಊರುಗಳಿಂದ ಮನೆ ಬಳಿ ಬರಬೇಡಿ. ಪ್ರತಿ ವರ್ಷ ನೀವು ನನ್ನ ಮನೆಗೆ ಬಂದ ಹಾರೈಸಿದ ಕಾರಣ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ. ಈ ವರ್ಷ ದಯವಿಟ್ಟು ತಮ್ಮ ಮನೆಗಳಿಂದ, ನೀವು ಇದ್ದಲ್ಲಿಯೇ ನೀವು ನನಗೆ ಆಶೀರ್ವಾದ ಮಾಡಿ, ನಿಮ್ಮ ಪ್ರೀತಿಯೇ ನನಗೆ ಖುಷಿ’ ಎಂದು ವಿಜಯ್ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:‘ಪ್ರಾರಂಭ’ಚಿತ್ರದಲ್ಲಿ ಲವರ್ ಬಾಯ್ ಆಗಿ ಕಾಣಿಸಲಿರುವ ಮನೋರಂಜನ್ ರವೀಚಂದ್ರನ್ ಗುಡ್ ಲುಕ್ಸ್
“ಪ್ರತಿ ವರ್ಷದಂತೆ ಕೇಟ್ ಮಾಡಿಸುವುದು, ಬ್ಯಾನರ್ ಹಾಕುವುದು, ಕಟೌಟ್ ನಿಲ್ಲಿಸುವುದು ಬೇಡ. ಅದೇ ದುಡ್ಡಿನಲ್ಲಿ ನಿಮ್ಮ ಅಕ್ಕ-ಪಕ್ಕದಲ್ಲಿ ರುವ ಹಿರಿಯರಿಗೆ ಅಥವಾ ಇನ್ಯಾರಿಗೋ ಬೆಡ್‌ಶೀಟ್ ಕೊಡಿಸಿ, ಇದು ಚಳಿಗಾಲ. ಈ ವರ್ಷ ಹುಟ್ಟುಹಬ್ಬ ಆಚರಿಸುವುದು ಬೇಡ, ದುಡ್ಡು ವೆಚ್ಚ ಮಾಡುವುದು ಬೇಡ, ಅದರ ಬದಲು ಒಂದು ಪುಣ್ಯದ ಕೆಲಸಕ್ಕೆ ಕೈ ಜೋಡಿಸೋಣ’ ಎಂದು ದುನಿಯಾ ವಿಜಯ್ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಇನ್ನು ಈ ಬಾರಿ ತಮ್ಮ ಹುಟ್ಟುಹಬ್ಬದ ಪ್ರಯುಕ್ತ, “ಸಲಗ’ ಚಿತ್ರದ ಚಿತ್ರದ ಟೈಟಲ್ ಹಾಡನ್ನು ಬಿಡುಗಡೆ ಮಾಡುವುದಾಗಿ ವಿಜಯ್ ತಿಳಿಸಿದ್ದಾರೆ. “ಈ ಹಾಡನ್ನು ನೋಡಿ ಖುಷಿ ಪಟ್ಟರೆ ಅದೇ ನನಗೆ ಸಂತೋಷ’ ಎಂದಿದ್ದಾರೆ ವಿಜಯ್.