Advertisement

ಬೀದಿ ನಾಯಿಗಳಿಗೆ “ಡಂಪಿಂಗ್‌ ಯಾರ್ಡ್‌ʼ ಆಶ್ರಯತಾಣ !

10:25 AM Feb 09, 2023 | Team Udayavani |

ಮಂಗಳೂರು: ನಗರದ ತ್ಯಾಜ್ಯಗಳು ವಿಲೇವಾರಿಯಾಗುವ ಪಚ್ಚನಾಡಿ ಪ್ರದೇಶ ಈಗ ಬೀದಿ ನಾಯಿಗಳ ಆಶ್ರಯ ತಾಣವಾಗಿ ಬದಲಾಗುತ್ತಿದೆ. ಕೆಲವರು ತಮ್ಮ ಮನೆಯ ಸಾಕು ನಾಯಿಗಳನ್ನು, ಬೆಕ್ಕುಗಳನ್ನು ಅಲ್ಲಿ ಬಿಟ್ಟು ಹೋಗುತ್ತಿದ್ದು, ಸಾರ್ವಜನಿಕರಿಗೆ ತೀರಾ ಸಮಸ್ಯೆ ಉಂಟಾಗುತ್ತಿದೆ. ನಾಯಿ, ಬೆಕ್ಕಿನ ಮರಿಗಳನ್ನು ಮನೆಗಳಲ್ಲಿ ಸಾಕಲು ಸಾಧ್ಯವಾಗದ ಮಂದಿ ಪಚ್ಚನಾಡಿ, ಮಂಗಳಾಜ್ಯೋತಿ, ಆಶ್ರಯನಗರ, ಸಂತೋಷ್‌ ನಗರ, ದೇವಿನಗರ ಮುಂತಾದ ಕಡೆಗಳಲ್ಲಿ ಬಿಡುತ್ತಿದ್ದಾರೆ. ಇದರಿಂದಾಗಿ ಉಪಟಳ ಹೆಚ್ಚಾಗುತ್ತಿದೆ.

Advertisement

ಈ ರೀತಿ ನಾಯಿ ಮರಿ, ಬೆಕ್ಕಿನ ಮರಿಗಳನ್ನು ತಂದು ಬಿಡುವವರನ್ನು ಖಂಡಿಸಿ ಮಂಗಳಜ್ಯೋತಿ ನಗರದಲ್ಲಿ ಕಠೊರ ಶಬ್ದಗಳಿಂದ ಬರೆದ ಬ್ಯಾನರ್‌ ಕೂಡ ಅಳವಡಿಸಲಾಗಿದೆ.
ನಗರದಲ್ಲಿ ಸುತ್ತಾಡುವ ಬೀದಿ ನಾಯಿಗಳನ್ನು ಎನಿಮಲ್‌ ಕೇರ್‌ ಟ್ರಸ್ಟ್‌ ಮೂಲಕ ಬಲೆಯನ್ನು ಉಪ ಯೋಗಿಸಿ ಹಿಡಿಯ ಲಾಗುತ್ತದೆ. ಬಳಿಕ ಪಾಲಿಕೆಯ ಸಹಕಾರ ದೊಂದಿಗೆ ಶಕ್ತಿನಗರದಲ್ಲಿರುವ ಎನಿಮಲ್‌ ಕೇರ್‌ ಸಂಸ್ಥೆಗೆ ತಲುಪಿಸಲಾಗುತ್ತದೆ.

ಅನಂತರ ಅವುಗಳನ್ನು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಬಳಿಕ ಯಾವ ಪ್ರದೇಶದಿಂದ ನಾಯಿಗಳನ್ನು ಹಿಡಿದು ತರಲಾಗಿತ್ತೋ, ಅಲ್ಲೇ ಮರಳಿ ಬಿಡಲಾಗುತ್ತದೆ. ಈ ಸಮಯದಲ್ಲಿ ನಾಯಿಗಳಿಗೆ ರೇಬಿಸ್‌ ಚುಚ್ಚುಮದ್ದು ನೀಡಲಾಗುತ್ತದೆ. ಅಲ್ಲದೆ ಸಂತಾನಶಕ್ತಿ ಹರಣ ಮಾಡಿದ ನಾಯಿಯ ಎಡ ಕಿವಿಯಲ್ಲಿ “ವಿ’ ಆಕಾರದಲ್ಲಿ ಮಾರ್ಕ್‌ ಮಾಡಲಾಗುತ್ತದೆ. ಪ್ರತ್ಯೇಕ ಮಾರ್ಗಸೂಚಿ ಬೀದಿ ನಾಯಿಗಳ ಕಡಿತ, ರೇಬಿಸ್‌ ರೋಗ ನಿಯಂತ್ರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಎಲ್ಲ ಸ್ಥಳೀಯ ಆಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬೀದಿ ನಾಯಿ ಸಂತಾನಶಕ್ತಿ ಹರಣ ಯೋಜನೆಯನ್ನು ಕಟ್ಟುನಿಟ್ಟಾಗಿ, ಕ್ರಮಬದ್ಧವಾಗಿ ಜಾರಿಗೊಳಿಸುವಂತೆ ರಾಜ್ಯ ಸರಕಾರ ಆದೇಶಿಸಿದೆ.

ನಗರಾಭಿವೃದ್ಧಿ ಇಲಾಖೆ ಹಾಗೂ ಪಶುಪಾಲನ ಮತ್ತು ಪಶುವೈದ್ಯ ಸೇವಾ ಇಲಾಖೆಗಳು ಜಂಟಿ ಸುತ್ತೋಲೆ ಹೊರಡಿಸಿದ್ದು, ಬೀದಿ ನಾಯಿ ಸಂತಾನಶಕ್ತಿ ಹರಣ ನಿಯಮದ ಅಡಿಯಲ್ಲಿ ಕೈಗೊಳ್ಳ ಬೇಕಾದ ಕ್ರಮಗಳ ಕುರಿತಂತೆ ಮಾರ್ಗಸೂಚಿ ಪ್ರಕಟಿಸಲಾಗಿದೆ. 9 ಅಂಶಗಳ ಮಾರ್ಗಸೂಚಿ ಕ್ರಮಬದ್ಧವಾಗಿ ಪಾಲಿಸಿ ಬೀದಿ ನಾಯಿ ಕಡಿತ, ರೇಬಿಸ್‌ ರೋಗ ನಿಯಂತ್ರಣಕ್ಕೆ ಮುಂದಾಗಬೇಕೆಂದು ಸೂಚಿಸಲಾಗಿದೆ. ಪ್ರತಿವರ್ಷ ಸ್ಥಳೀಯ ಸಂಸ್ಥೆಗಳ ಆಯವ್ಯಯದಲ್ಲಿ ಬೀದಿ ನಾಯಿಗಳ ಸಂತಾನ ನಿಯಂತ್ರಣಕ್ಕಾಗಿ ಅಗತ್ಯ ಹಣಕಾಸು ಹಂಚಿಕೆ ಮಾಡಬೇಕು.

ಸಂತಾನ ನಿಯಂತ್ರಣಕ್ಕೆ ಕೆಲಸ ಮಾಡುವ ಪ್ರಾಣಿ ಕಲ್ಯಾಣ ಸಂಸ್ಥೆಗಳಿಗೆ ಸ್ಥಳೀಯ ಸಂಸ್ಥೆಗಳೇ ಮೂಲಸೌಕರ್ಯ ಒದಗಿಸಬೇಕು. ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಅನಂತರ ನಾಯಿಗಳಿಗೆ ಲಸಿಕೆ ನೀಡಿ, ಅವುಗಳನ್ನು ಯಾವ ಪ್ರದೇಶದಲ್ಲಿ ಹಿಡಿಯಲಾಗಿತ್ತೋ ಅಲ್ಲಿಗೆ ವಾಪಾಸು ಬಿಡಬೇಕು ಎಂದು ತಿಳಿಸಿದೆ.

Advertisement

ಅರಿವು ಮೂಡಬೇಕಿದೆ
ಕೆಲವೊಬ್ಬರು ಮನೆಯಲ್ಲಿನ ಬೆಕ್ಕು, ನಾಯಿಗಳನ್ನು ಅನೇಕ ಸಮಯಗಳಿಂದ ಇಲ್ಲೇ ಬಿಡುತ್ತಿದ್ದು, ಸಾರ್ವಜನಿಕರಿಗೆ ಸಮಸ್ಯೆ ಉಂಟಾಗಿದೆ. ಈ ಕುರಿತು ಸಾರ್ವಜನಿಕರು ಕೂಡ ಸಮಸ್ಯೆ ಹೇಳಿಕೊಂಡಿದ್ದು, ಎನಿಮಲ್‌ ಕೇರ್‌ ಟ್ರಸ್ಟ್‌ ಮೂಲಕ ಶ್ವಾನಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನೀಡಲಾಗುತ್ತಿದೆ. ಬೀದಿಗೆ ಪ್ರಾಣಿಗಳನ್ನು ಬಿಡಬಾರದು ಎಂಬುದಾಗಿ ಜನರಲ್ಲಿ ಅರಿವು ಮೂಡಬೇಕಿದೆ. – ಸಂಗೀತಾ ಆರ್‌. ನಾಯಕ್‌, ಮನಪಾ ಸದಸ್ಯೆ ಪಚ್ಚನಾಡಿ ವಾರ್ಡ್‌

Advertisement

Udayavani is now on Telegram. Click here to join our channel and stay updated with the latest news.

Next