ಏರ್‌ಪೋರ್ಟನಲ್ಲಿ ಸ್ಮೋಕಿಂಗ್ ಝೋನ್ ಅಂತ ರೂಮ್ ತರಹದ ಒಂದು ಗಾಜಿನ ಡಬ್ಬಿಯ ಮೇಲೆ ಬರೆದಿದ್ದರು. ಅದರಲ್ಲಿದ್ದವರು ಸಿಗರೇಟ್ ಹೊಗೆ ಬಿಡುತ್ತಿದ್ದರಿಂದ ಯಾರ ಮುಖವೂ ಸರಿಯಾಗಿ ಕಾಣುತ್ತಿರಲಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಈಗ ಸಿಗರೇಟ್ ಸೇದುವ ಹಾಗಿಲ್ಲ ಎಂದು ಸರ್ಕಾರ ಒಂದು ಒಳ್ಳೆ ಫರ್ಮಾನು ಹೊರಡಿಸಿರುವುದರಿಂದ ಮೊದಲಿನ ಹಾಗೆ ಎಲ್ಲೆಂದರಲ್ಲಿ ಸಿಗರೇಟು ಸೇದುವವರು ಕಾಣಸಿಗುವುದಿಲ್ಲ. ಅದರಲ್ಲೂ ಈಗ ಯುವಜನತೆಯೇ ಇದಕ್ಕೆ ಹೆಚ್ಚು ದಾಸರಾಗಿರುವುದರಿಂದ ಮನೆಯವರಿಗೆ ಗೊತ್ತಾಗದ ಹಾಗೆ ಸ್ನೇಹಿತರೆಲ್ಲ ಗುಂಪಾಗಿ ಸೇರಿಕೊಂಡು ಅದಕ್ಕೆಂದೇ ಬಯಲಿನ ಹಾಗಿರುವ ಒಂದು ಗುಪ್ತಸ್ಥಳವನ್ನು ಗೊತ್ತುಮಾಡಿ ಸೇದಿ ಬರುವುದುಂಟು. ಅದರಲ್ಲೂ ರಾತ್ರಿಯ ಹೊತ್ತು ಗುಂಪುಗುಂಪಾಗಿ ಸರ್ಕಾರಿ ಕಚೇರಿಯ ಮುಂಭಾಗದಲ್ಲೋ, ಶಾಲಾ-ಕಾಲೇಜಿನ ಆವರಣ ಅಥವಾ ಅದರ ಸುತ್ತಮುತ್ತ, ಅಲ್ಲಿದ್ದ ಬೀದಿದೀಪಕ್ಕೆ ಕಲ್ಲುಹೊಡೆದು ಅದನ್ನು ಜಖಂ ಮಾಡಿ, ಆ ಪ್ರದೇಶವನ್ನು ಕಗ್ಗತ್ತಲಿನ ಖಂಡವಾಗಿಸಿ, ಹೊಗೆಯಾಟ ಹಾಗೂ ಮದ್ಯಪಾನದಂತಹ ಚಟುವಟಿಕೆಗಳನ್ನು ನಡೆಸುವವರಿದ್ದಾರೆ. ಜೊತೆಗೆ, ದೊಡ್ಡ ದೊಡ್ಡ ನಗರಗಳಲ್ಲಿ ಈಗ ಲೈಸೆನ್ಸ್ ಪಡೆದು ನೈತಿಕವಾಗಿಯೇ ತಲೆ ಎತ್ತುತ್ತಿರುವ ಹುಕ್ಕಾಬಾರ್‌ನಂತಹ ಕೇಂದ್ರಗಳು ಇಂದಿನ ಪೀಳಿಗೆಯನ್ನು ತಮ್ಮ ದಾಸರನ್ನಾಗಿ ಮಾಡಿಕೊಳ್ಳುತ್ತಿವೆ. ಹೆಂಗಸರ ಸಿಗರೇಟ್‌ಗಳ ತಯಾರಿಕೆ ಶುರುವಾದಾಗಿನಿಂದ ಕೆಲ ದೊಡ್ಡ ದೊಡ್ಡ ಶ್ರೀಮಂತ ಹಾಗೂ ಮೇಲ್ವರ್ಗದ ಮನೆತನದ ಹೆಣ್ಣುಮಕ್ಕಳೂ ಈ ಚಟಕ್ಕೆ ಅಂಟಿಕೊಳ್ಳುತ್ತಿದ್ದಾರೆ.
ನಾವು ಚಿಕ್ಕವರಿದ್ದಾಗ ನನ್ನಪ್ಪನಿಗೂ ಸಿಗರೇಟ್ ಚಟ ಇತ್ತು. ಅದಕ್ಕೆ ಪ್ರೇರಣೆಯಾದವರು ಅವರ ಸ್ನೇಹಿತರಾಗಿದ್ದ ಒಬ್ಬರು ವೈದ್ಯರು ಎಂಬುದು ವಿಶೇಷ. ಪ್ರತಿದಿನ ಸಂಜೆ ಅಪ್ಪ ಕೆಲಸ ಮುಗಿಸಿ ಆ ಡಾಕ್ಟರ್ ಸ್ನೇಹಿತರೊಡನೆ ಹೊಗೆಗೋಷ್ಠಿ ಮುಗಿಸಿ ಸ್ಕೂಟರ್‌ನಲ್ಲಿ ಮನೆಗೆ ಮರಳುತ್ತಿದ್ದರು. ಅಪ್ಪ ಮಾತನಾಡುವಾಗ ನಮ್ಮಜ್ಜ ವಾಸನೆಯಿಂದಲೇ ಕಂಡುಹಿಡಿದು ಇವನ್ಯಾವ ಸೀಮೆ ಡಾಕ್ಟರು, ”ಸಿಗರೇಟು ಸೇದೋದನ್ನು ಕಲಿಸಿ ನನ್ನ ಮಗನನ್ನು ಹಾಳು ಮಾಡುತ್ತಿದ್ದಾನೆ, ನಿನಗಾದರೂ ಬುದ್ಧಿ ಬೇಡವೇನೋ ಇಂಜಿನಿಯರ್ ಆಗಿದ್ದೀಯಾ!” ಎಂದು ಆ ಡಾಕ್ಟರಿಗೆ ಮಂಗಳಾರತಿ ಮಾಡದೇ ಬಿಡುತ್ತಿರಲಿಲ್ಲ. ಅಪ್ಪ ಕೇಳಿಸಿಕೊಳ್ಳದವರ ಹಾಗೆ ಒಳಗೆ ಹೋಗಿ ಊಟಕ್ಕೆ ಕುಳಿತುಬಿಡುತ್ತಿದ್ದರು. ‘ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ’ ಎನ್ನುವ ಹಾಗೆ ಇಬ್ಬರು ಚಿಕ್ಕಪ್ಪಂದಿರಿಗೂ ಈ ಚಟ ಅಂಟಿಕೊಂಡಿತು.
ಬೀಡಿ ಸೇದಿದರೆ ಆರೋಗ್ಯಕ್ಕೆ ಒಳ್ಳೆಯದಲ್ಲ , ಸಿಗರೇಟ್ ಅನ್ನು ಎಲ್ಲಾ ಸ್ಟ್ಯಾಂಡರ್ಡ್ ಜನ ಮಾತ್ರ ಸೇದುವುದು, ಅದರಿಂದ ಆರೋಗ್ಯಕ್ಕೇನೂ ತೊಂದರೆ ಇಲ್ಲ ಎಂದು ಅಪ್ಪ, ಅಮ್ಮನಿಗೆ ಸಮಜಾಯಿಷಿ ನೀಡುತ್ತಿದ್ದರು. ಪಾಪ! ಓದು, ಬರಹ ತಿಳಿಯದ ಹಳ್ಳಿಯಾಕೆ ಅಮ್ಮ, ಅಪ್ಪ ಹೇಳಿದ್ದೇ ನಿಜ ಎಂದುಕೊಳ್ಳುತ್ತಿದ್ದಳು. ಎಷ್ಟೋ ಸಿನೆಮಾಗಳಲ್ಲಿ ಜನರಿಗೆ ರೋಲ್ ಮಾಡೆಲ್ ಆಗಿದ್ದ ನಾಯಕ ಪಾತ್ರ ಮಾಡುವವರೇ ಸಿಗರೇಟನ್ನು ರಾಜಾರೋಷವಾಗಿ ಸೇದುವ ದೃಶ್ಯ ಸಾಮಾನ್ಯವಾಗಿ ಇರುತ್ತಿದ್ದರಿಂದ, ಧೂಮಪಾನ ತಪ್ಪು ಎಂಬ ಕಲ್ಪನೆ ಬಹುಶಃ ಬಹಳ ಮಂದಿಗೆ ಬಂದಿರಲಿಕ್ಕಿಲ್ಲ. ಸಿಗರೇಟನ್ನು ಸ್ಟೈಲಾಗಿ ತಿರುಗಿಸುತ್ತ ಬಾಯಲ್ಲಿ ಎಸೆದುಕೊಳ್ಳುವುದು, ರಿಂಗು, ರಿಂಗಾಗಿ ಹೊಗೆ ಬಿಡುವುದು, ಬಾಯಿಯ ತುದಿಯಲ್ಲಿ ಉರಿಯುವ ಸಿಗರೇಟನ್ನಿಟ್ಟುಕೊಂಡು ‘ಮ್ಮ್ ಮ್ಮ್’ ಅಂತ ಮಾತನಾಡುವುದು, ಇಂತಹ ದೃಶ್ಯಗಳೂ ಯುವಜನತೆಯನ್ನು ಸಿಗರೇಟು ಸೇದಲು ಪ್ರೇರಣೆ ನೀಡಿದ್ದವೋ ಏನೋ ಗೊತ್ತಿಲ್ಲ. ಹಳೆಯ ಸಿನೆಮಾವೊಂದರಲ್ಲಿ ನಾಯಕಿ ಜೀನತ್ ಅಮಾನ್, ಸಹಚರರೊಂದಿಗೆ ದಮ್ ಎಳೆಯುತ್ತ ಹಾಡುವ ದಮ್ ಮಾರೋ ದಮ್ ಇಂದಿಗೂ ಅದರ ಜನಪ್ರಿಯತೆ ಉಳಿಸಿಕೊಂಡಿದೆ ಎಂದರೆ ಆ ದೃಶ್ಯದಲ್ಲಿನ ಧೂಮಲೀಲೆಯ ಪರಿಣಾಮ ಎಂತಹದ್ದೆಂದು ಅರಿವಾಗುತ್ತದೆ. ಎಲ್ಲೋ ಪ್ಯಾಕಿನ ತುದಿಯಲ್ಲಿ ಚಿಕ್ಕದಾಗಿ ಭೂತಗನ್ನಡಿಯಲ್ಲಿ ನೋಡಿದರೂ ಕಾಣದಂತಹ ಅಕ್ಷರಗಳಲ್ಲಿ ಸ್ಮೋಕಿಂಗ್ ಈಸ್ ಇಂಜೂರಿಯಸ್ ಟು ಹೆಲ್ತ್ ಬರೆದಿದ್ದನ್ನು ಓದುತ್ತಾರೋ ಅಥವಾ ಓದಿದರೂ ಅಲಕ್ಷ್ಯದಿಂದ ಅದೇನು ಮಹಾ ಎಂದು ಸುಮ್ಮನಾಗುತ್ತಾರೋ ಯಾರಿಗೊತ್ತು.
ಹಾಗಾಗಿ, ಮನೆ ತುಂಬಾ ಕೆಲ ಕಂಪೆನಿಗಳು ಉಡುಗೊರೆಯಾಗಿ ಕೊಟ್ಟಿದ್ದ ವಿವಿಧ ವಿನ್ಯಾಸದ ಆ್ಯಶ್ ಟ್ರೇಗಳು ಟೇಬಲ್ಲುಗಳ ಮೇಲೆ, ಕಿಟಕಿಯ ಸಜ್ಜ್ಜೆಗಳ ಮೇಲೆ ವಿರಾಜಮಾನವಾಗಿದ್ದವು. ಹೊಸ ಬಗೆಯ ಗ್ಯಾಸ್‌ಲೈಟರ್‌ಗಳನ್ನಂತೂ ‘ಟಕ್ ಟಕ್’ ಅನ್ನಿಸಿ ಅಪ್ಪನ ಸಿಗರೇಟಿಗೆ ಹಚ್ಚುವಾಗ ನೋಡುವ ನಮಗೆ ಏನೋ ಮಹಾನ್ ಕಾರ್ಯ ಮಾಡುತ್ತಿದ್ದಾರೆಂಬ ಸಂಭ್ರಮ. ಅವರ ಮೂಗಿನಿಂದ, ಬಾಯಿಯಿಂದ ಹೊಗೆ ಹೊರಬರುವುದನ್ನು ಅಚ್ಚರಿಯಿಂದ ನೋಡುತ್ತಿದ್ದೆವು.
ಬೆಂಕಿಪೊಟ್ಟಣಗಳಂತೂ ದೇವರ ಕೋಣೆಯಿಂದ ಮಾಯವಾಗಿ ಬೇರೆ ಬೇರೆ ರೂಮು, ಸಜ್ಜಾ, ಕಿಟಕಿಯ ಸಂದುಗೊಂದುಗಳಲ್ಲಿ ನೆಲೆ ಕಾಣುತ್ತಿದ್ದವು. ನಮಗೂ ಅಪ್ಪನ ಕೆಲವೊಂದು ಸಿಗರೇಟ್ ಬ್ರ್ಯಾಂಡ್‌ಗಳ ಮೇಲೆ ಅಭಿಮಾನ ಹುಟ್ಟಿತ್ತು. ಬ್ರಿಸ್ಟಾಲ್, ಗೋಲ್ಡ್ಫ್ಲೇಕ್, ಚಾರ್‌ಮಿನಾರ್ ಮತ್ತಿನ್ನೇನೋ ಹೆಸರುಗಳು! ಸಿಗರೇಟನ್ನು ಸೇದಿ, ಬೂದಿಯನ್ನು ಕುರ್ಚಿಗೆ ತಾಕಿಸಿ ಬೀಳಿಸುತ್ತಿದ್ದರ ಪರಿಣಾಮ ಮಂಚ, ಕುರ್ಚಿಗಳ ಕೆಳಗೆ ಕಸ ಗುಡಿಸಿದರೆ ಬೆಂಕಿಕಡ್ಡಿಗಳು, ಬೂದಿ, ಸಿಗರೇಟು ತುಂಡುಗಳು ಖಾಯಂ. ಅಪ್ಪನ ಜೇಬಿನಲ್ಲಿ ಚಿಕ್ಕ ವ್ಯಾಕ್ ್ಸಕಡ್ಡಿಯುಳ್ಳ ಬೆಂಕಿಪೊಟ್ಟಣ ಹಾಗೂ ಸಿಗರೇಟುಗಳು ಪರ್ಮನೆಂಟ್ ಜಾಗ ಪಡೆದುಕೊಂಡಿರುತ್ತಿದ್ದವು.
ನಮಗೆಲ್ಲ ಸಿಗರೇಟ್ ಪ್ಯಾಕ್ ಒಳಗಿನ ಬ್ಯಾಗಡಿ ಪೇಪರ್ ಅಂದರೆ ಏನೋ ಆಕರ್ಷಣೆ. ಬಂಗಾರದ ಅಥವಾ ಬೆಳ್ಳಿಯ ಬಣ್ಣದಿಂದ ಹೊಳೆಯುತ್ತಿದ್ದ ಅವುಗಳನ್ನು ಸಂಗ್ರಹಿಸಲು, ಹೊಸ ಪ್ಯಾಕ್ ಬರುತ್ತಿದ್ದಂತೆ ಪೈಪೋಟಿ ಮೇಲೆ ಕಿತ್ತಾಡುತ್ತಿದ್ದೆವು. ಅವುಗಳನ್ನು ಪುಸ್ತಕದ ನಡುವೆ ನೀಟಾಗಿ ಸಿಗಿಸಿ ಜೋಪಾನ ಮಾಡುತ್ತಿದ್ದೆವು. ‘ಕಸದಿಂದ ರಸ’ ಎಂದು ಶಾಲೆಯಲ್ಲಿ ಇಟ್ಟಿದ್ದ ಸ್ಪರ್ಧೆಯಲ್ಲಿ ಸಿಗರೇಟ್ ಬ್ಯಾಗಡಿ ಪೇಪರ್‌ಗಳಿಂದ ಗುಲಾಬಿ ಹೂಗಳನ್ನು ತಯಾರಿಸಿ ಬಹುಮಾನ ಪಡೆದ ನೆನಪು. ಅದೇ ರೀತಿ ಸಿಗರೇಟು ಪ್ಯಾಕುಗಳನ್ನೂ ಕಲೆಕ್ಟ್ ಮಾಡಿ ಮನೆ ಕಟ್ಟುತ್ತಿದ್ದೆವು.
ನನಗೆ ಬುದ್ಧಿ ತಿಳಿದ ಬಳಿಕ ಅಪ್ಪನ ಸಿಗರೇಟ್ ಚಟವನ್ನು ಬಹಳ ವಿರೋಧಿಸುತ್ತಿದ್ದೆ. ಮನೆಯಲ್ಲಿ ಸಿಗರೇಟ್ ಪ್ಯಾಕ್ ಕಂಡರೆ ಅವನ್ನೆಲ್ಲ ಪುಡಿ ಪುಡಿ ಮಾಡಿ ಬಿಸಾಡುತ್ತಿದ್ದೆ. ಅದಕ್ಕಾಗಿ ಸಿಗರೇಟ್ ಪ್ಯಾಕ್ ಅನ್ನು ದಿಂಬಿನ ಕವರ್ ಒಳಗೆ, ಹಾಸಿಗೆ ಕೆಳಗೆ, ಶೆಲ್ಫ್ ಮೇಲೆ, ಹೀಗೆ ಪ್ರತಿದಿನ ಹೊಸ ಹೊಸ ಜಾಗದಲ್ಲಿ ಬಚ್ಚಿಡುತ್ತಿದ್ದರು. ಎಷ್ಟೋ ಸಲ ಎಲ್ಲರೂ ಏಳುವ ಮುಂಚೆ ಬೆಳಿಗ್ಗೆ ಐದು ಗಂಟೆಗೆ ಎದ್ದು ಟಾಯ್ಲೆಟ್ಟಿನಲ್ಲಿ ಸೇದಿ ಬರುತ್ತಿದ್ದುದುಂಟು. ಬರಬರುತ್ತ ಸಿಗರೇಟಿನ ಹೊಗೆಗೆ ಅಮ್ಮನ ಉಸಿರು ಕಟ್ಟಿದ ಹಾಗಾಗುತ್ತಿತ್ತು. ಹಾಗಾಗಿ, ಮನೆಯಲ್ಲಿ ಸೇದದೆ ಹೊರಗಡೆ ಸೇದಿ ಬರುತ್ತಿದ್ದರು. ನಾವೆಲ್ಲ ಸೇರಿ ಪೇಟೆಗೆ ಹೋದಾಗ ಅಪ್ಪ ಮೊದಲೇ ದಾಪುಗಾಲು ಹಾಕುತ್ತ ಮುಂದೆ ಮುಂದೆ ಹೋಗುತ್ತಿದ್ದರಿಂದ, ದಪ್ಪಗಿದ್ದ ಅಮ್ಮ, ಚಿಕ್ಕವರಾದ ನಾವು ಅವರನ್ನು ಹಿಂಬಾಲಿಸುವಷ್ಟರಲ್ಲಿ ಮಾಯವಾಗಿಬಿಡುತ್ತಿದ್ದರು. ಅಮ್ಮ, ಎಲ್ಲಾದರೂ ಸಿಗರೇಟ್ ಅಂಗಡಿಗಳ ಹತ್ತಿರ ನೋಡಿ, ”ನಿಮ್ಮಪ್ಪ ಇದರ ಹಿಂದೆ ಇದ್ದೇ ಇರುತ್ತಾರೆ” ಎನ್ನುತ್ತ ತನ್ನ ಅನುಭವಸ್ಥ ಕಣ್ಣು ಹಾಯಿಸುತ್ತಿದ್ದಳು. ಅಷ್ಟರಲ್ಲಾಗಲೇ ಅಪ್ಪ ಒಂದು ಸಿಗರೇಟ್ ಬರಬರನೆ ಊದಿ ಮತ್ತೆ ವಾಪಾಸ್ ನಮ್ಮೊಂದಿಗೆ ಸೇರಿಕೊಳ್ಳುತ್ತಿದ್ದರು. ಕೆಲವೊಮ್ಮೆ ಸಿಗರೇಟು ಕೊಳ್ಳಲು ಚಿಲ್ಲರೆ ಬೇಕಾದಾಗ ನಮ್ಮ ದುಡ್ಡಿನ ಹುಂಡಿಯನ್ನು ಬೋರಲಾಗಿಸಿ ಚಾಕುವಿನಿಂದ ಅದರ ಬಾಯೊಳಗೆ ಆಡಿಸಿ ಚಿಲ್ಲರೆ ಉದುರಿಸಿಕೊಳ್ಳುವುದನ್ನು ನೋಡಿ ಅಂದಿನಿಂದ ನಮ್ಮ ಕೈಯಲ್ಲಿ ಅಮ್ಮ ಹುಂಡಿಗೆ ದುಡ್ಡು ಹಾಕುವುದನ್ನು ನಿಲ್ಲಿಸಿ ಪಿಗ್ಮಿ ಕಟ್ಟಲು ಶುರುಮಾಡಿದ್ದಳು. ತಿಂಗಳ ಕೊನೆಯಲ್ಲಿ ಸಂಬಳ ಕರಗುತ್ತ ಬಂದಂತೆ ಸಿಗರೇಟಿನ ಬದಲು ಗಣೇಶ ಬೀಡಿ ಕಟ್ಟು ಹಾಜರ್.
ಮೊಮ್ಮಕ್ಕಳು ಹುಟ್ಟಿದ ಮೇಲೆ ಸ್ವಲ್ಪ ಸಿಗರೇಟಿನ ಚಟ ಕಡಿಮೆ ಮಾಡಿದರೆಂದು ಹೇಳಬೇಕು. ಸಿಗರೇಟು ಸೇದಿದರೆ ಕೂಸಿಗೆ ಕೆಮ್ಮಾಗುತ್ತದೆ ಎಂದು ಅಮ್ಮ ಸರಿಯಾದ ಸಮಯದಲ್ಲಿ ಬಾಣ ಬಿಟ್ಟಿದ್ದಳು. ಸ್ವಲ್ಪ ದೊಡ್ಡವರಾದ ಮೇಲೆ ಮೊಮ್ಮಕ್ಕಳು ಸಿಗರೇಟ್ ತಾತಾ ಅಂತಾ ಕೂಗುತ್ತಿದ್ದರ ಪರಿಣಾಮ ಚಟ ಇನ್ನೂ ಸ್ವಲ್ಪ ಕಡಿಮೆಯಾಯಿತು ಎನ್ನಿಸುತ್ತದೆ. ಒಟ್ಟಿನಲ್ಲಿ ಯಾರ ಕೈಲೂ ಬಿಡಿ ಸಲಾರದ ಚಟ ಮೊಮ್ಮಕ್ಕಳ ದೆಸೆಯಿಂದ ಅಪ್ಪನಿಂದ ದೂರವಾಯಿತು.
ದುಡ್ಡಿನಿಂದ ಎಲ್ಲವನ್ನೂ ಕೊಳ್ಳಬಹುದು, ಆದರೆ ಆರೋಗ್ಯವನ್ನಲ್ಲ ಎಂಬ ಕನಿಷ್ಟ ಜ್ಞಾನ ಇದ್ದರೂ ಸಾಕು, ಹೊರಬರುವ ಪ್ರಯತ್ನ ಮಾಡಬಹುದು.
-ನಳಿನಿ ಟಿ.ಭೀಮಪ್ಪ