ಕೊಚ್ಚಿ: ಹೊಸ ವರ್ಷಕ್ಕೆ ಹಳೆಯ ಸಿನಿಮಾಗಳು ಸಾಲು ಸಾಲಾಗಿ ಥಿಯೇಟರ್ ಗೆ ಲಗ್ಗೆ ಇಡಲಿದೆ. ಕೆಲ ಹೊಸ ಚಿತ್ರಗಳು ಥಿಯೇಟರ್‌ನಲ್ಲಿ ಪ್ರದರ್ಶನದ ನಡುವೆಯೇ ಹಳೆಯ ಸಿನಿಮಾಗಳು ಬಿಗ್ ಸ್ಕ್ರೀನ್‌ಗೆ ಮತ್ತೆ ಎಂಟ್ರಿ ಕೊಡಲಿವೆ.
ಟಾಲಿವುಡ್‌ನಲ್ಲಿ ಒಂದು ಕಾಲದಲ್ಲಿ ಸೂಪರ್ ಹಿಟ್ ಆಗಿದ್ದ ಸಿನಿಮಾಗಳು ಹೊಸ ವರ್ಷದ ಪ್ರಯುಕ್ತ ರೀ – ರಿಲೀಸ್ ಆಗಲಿದೆ. ಇದೀಗ ಮಾಲಿವುಡ್ ನಲ್ಲೂ ಸೂಪರ್ ಹಿಟ್ ಸಿನಿಮಾವೊಂದು ಹೊಸ ವರ್ಷದ ಸಂದರ್ಭದಲ್ಲೇ ಬರಲಿದೆ.
2012ರಲ್ಲಿ ತೆರೆಕಂಡು ಮಾಲಿವುಡ್‌ನಲ್ಲಿ ಚಿತ್ರರಂಗ ಹೊಸ ದಾಖಲೆ ಬರೆದು ಮೋಡಿ ಮಾಡಿದ್ದ ʼಉಸ್ತಾದ್ ಹೊಟೇಲ್ʼ ಮತ್ತೆ ಚಿತ್ರಮಂದಿರಕ್ಕೆ ಎಂಟ್ರಿ ಕೊಡಲಿದೆ. ಸಿನಿ ಪ್ರೇಮಿಗಳಿಗೆ ʼಉಸ್ತಾದ್ ಹೊಟೇಲ್ʼ ಎಂದರೆ ʼಪೈಜಿʼ ಯಾಗಿ ನಟಿಸಿದ್ದ ದುಲ್ಕಾರ್ ಸಲ್ಮಾನ್ (Dulquer Salmaan) ಕಣ್ಣ ಎದುರಿಗೆ ಒಮ್ಮೆ ಬಂದು ಹೋಗುತ್ತಾರೆ.
ಅನ್ವರ್ ರಶೀದ್ ನಿರ್ದೇಶನ ಮತ್ತು ಅಂಜಲಿ ಎಂ ಚಿತ್ರಕಥೆ ಬರೆದಿರುವ ಈ ಸಿನಿಮಾ ಮಾಲಿವುಡ್‌ನಲ್ಲಿ ಇಂದಿಗೂ ಎವರ್ ಗ್ರೀನ್ ಸಿನಿಮಾಗಳ ಸಾಲಿಗೆ ಬರುವ ಚಿತ್ರವಾಗಿ ಕಾಣುತ್ತದೆ.
ಯುವ ಬಾಣಸಿಗನಾಗಿ ದುಲ್ಕಾರ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಅಡುಗೆ ರುಚಿಯ ಜತೆ ಜೀವನ ಪಾಠವನ್ನು ಹೇಳಿದ ʼಉಸ್ತಾದ್ ಹೊಟೇಲ್ʼ ನೋಡಿ ಪ್ರೇಕ್ಷಕರು ಭಾವುಕರಾಗಿದ್ದರು.
ದಿವಂಗತ ನಟ ತಿಲಕನ್ ಅವರು ಅಜ್ಜನ ಪಾತ್ರದಲ್ಲಿ ಜೀವಿಸಿದ್ದರು. ಇನ್ನು ನಟಿ ನಿತ್ಯಾ ಮೆನೆನ್ ಅವರ ಅಭಿನಯ ಪ್ರೇಕ್ಷಕರ ಗಮನ ಸೆಳೆದಿತ್ತು.
ಪರಿಣಾಮ ಚಿತ್ರ ಮೂರು ರಾಷ್ಟ್ರ ಪ್ರಶಸ್ತಿಗೆ ಗೆದ್ದುಕೊಂಡಿತು.
ಪಿವಿಆರ್ ಮತ್ತು ಐನಾಕ್ಸ್‌ಗಳಲ್ಲಿ 2025ರ ಜನವರಿ 3 ರಂದು ʼಉಸ್ತಾದ್ ಹೊಟೇಲ್ʼ ಸಿನಿಮಾ ರೀ ರಿಲೀಸ್ ಆಗಲಿದೆ. ಆ ಮೂಲಕ ʼಉಸ್ತಾದ್ ಹೊಟೇಲ್ʼ ಸುಂದರವಾದ ಜೀವನ ಪಾಠದ ರುಚಿ ಪ್ರೇಕ್ಷಕರಿಗೆ ಮತ್ತೊಮೆ ಸಿಗಲಿದೆ.
ದುಲ್ಕಾರ್ ಸಲ್ಮಾನ್ ಅವರು ಇತ್ತೀಚೆಗೆ ʼಲಕ್ಕಿ ಭಾಸ್ಕರ್ʼ ಎಂಬ ತೆಲುಗು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರ ಸೂಪರ್ ಹಿಟ್ ಆಗಿತ್ತು.