Advertisement

Duleep Trophy:ಇಂಡಿಯಾ ಎ ಚಾಂಪಿಯನ್‌

11:57 PM Sep 22, 2024 | Team Udayavani |

ಅನಂತಪುರ: ಅನಿರೀಕ್ಷಿತ ಫ‌ಲಿತಾಂಶವನ್ನು ದಾಖಲಿಸಿದ ಮಾಯಾಂಕ್‌ ಅಗರ್ವಾಲ್‌ ನೇತೃತ್ವದ ಇಂಡಿಯಾ ಎ ತಂಡ 2024ನೇ ಸಾಲಿನ ದುಲೀಪ್‌ ಟ್ರೋಫಿ ಚಾಂಪಿಯನ್‌ ಆಗಿ ಮೂಡಿಬಂದಿದೆ. ಅದು 3ನೇ ಹಾಗೂ ಅಂತಿಮ ಸುತ್ತಿನ ಪಂದ್ಯದಲ್ಲಿ ಇಂಡಿಯಾ ಸಿ ತಂಡವನ್ನು 132 ರನ್ನುಗಳಿಂದ ಮಣಿಸುವಲ್ಲಿ ಯಶಸ್ವಿಯಾಯಿತು.

Advertisement

ಇಂಡಿಯಾ ಎ ಕೇವಲ 6 ಅಂಕಗಳೊಂದಿಗೆ ಅಂತಿಮ ಸುತ್ತಿನ ಪಂದ್ಯವನ್ನು ಆಡಲಿಳಿದಿತ್ತು. ಇಂಡಿಯಾ ಸಿ 9 ಅಂಕ ಹೊಂದಿತ್ತು. ಆದರೆ 350 ರನ್‌ ಚೇಸಿಂಗ್‌ ಹಾದಿಯಲ್ಲಿ ಋತುರಾಜ್‌ ಗಾಯಕ್ವಾಡ್‌ ಪಡೆ 217ಕ್ಕೆ ಆಲೌಟ್‌ ಆದ ಪರಿಣಾಮ ಪ್ರಶಸ್ತಿಯಿಂದ ವಂಚಿತವಾಗಬೇಕಾಯಿತು. ಪಂದ್ಯ ವನ್ನು ಡ್ರಾ ಮಾಡಿಕೊಂಡಿದ್ದರೂ ಇಂಡಿಯಾ ಸಿ ಚಾಂಪಿಯನ್‌ ಆಗುತ್ತಿತ್ತು.

ಸುದರ್ಶನ್‌ ಹೋರಾಟ ವ್ಯರ್ಥ
ಚೇಸಿಂಗ್‌ ವೇಳೆ ಸಾಯಿ ಸುದರ್ಶನ್‌ 111 ರನ್‌ ಬಾರಿಸಿ ಅಮೋಘ ಹೋರಾಟ ನಡೆಸಿದರು. ಚಹಾ ವಿರಾಮದ ವೇಳೆ ಸ್ಕೋರ್‌ 3ಕ್ಕೆ 169 ರನ್‌ ಆಗಿತ್ತು ಹಾಗೂ ಪಂದ್ಯ ಡ್ರಾ ಹಾದಿ ಹಿಡಿದಿತ್ತು. ಸಾಯಿ ಸುದರ್ಶನ್‌, ಇಶಾನ್‌ ಕಿಶನ್‌ (17) ಕ್ರೀಸ್‌ನಲ್ಲಿದ್ದರು. ಆದರೆ ಪ್ರಸಿದ್ಧ್ ಕೃಷ್ಣ ಮತ್ತು ತನುಷ್‌ ಕೋಟ್ಯಾನ್‌ ಅವರ ಘಾತಕ ಬೌಲಿಂಗ್‌ ದಾಳಿಗೆ ಇಂಡಿಯಾ ಸಿ ದಿಕ್ಕೆಟ್ಟಿತು. ಪಟಪಟನೆ ವಿಕೆಟ್‌ ಉರುಳಿಸಿಕೊಳ್ಳುತ್ತ ಹೋಯಿತು. ಇಬ್ಬರೂ ತಲಾ 3 ವಿಕೆಟ್‌ ಉಡಾಯಿಸಿದರು. ಸಾಯಿ ಸುದರ್ಶನ್‌ಗೆ ಇನ್ನೊಂದು ತುದಿಯಲ್ಲಿ ಯಾರಿಂದಲೂ ಬೆಂಬಲ ಸಿಗಲಿಲ್ಲ. ಸೋತ ಕಾರಣ ಇಂಡಿಯಾ ಸಿ ಅಂಕ 9ಕ್ಕೇ ಸೀಮಿತಗೊಂಡಿತು.

ಅಚ್ಚರಿಯ ಗೆಲುವಿನೊಂದಿಗೆ ಅಂಕವನ್ನು 12ಕ್ಕೆ ಏರಿಸಿಕೊಂಡ ಇಂಡಿಯಾ ಎ ಚಾಂಪಿಯನ್‌ ಎನಿಸಿತು. ಅದು ಮೊದಲ ಪಂದ್ಯದಲ್ಲಿ ಸೋಲನುಭವಿಸಿದ ಬಳಿಕ ಸತತ 2 ಪಂದ್ಯಗಳನ್ನು ಗೆದ್ದು ಟ್ರೋಫಿಯನ್ನು ಎತ್ತಿಹಿಡಿಯಿತು. ಮೊದಲ ಪಂದ್ಯದ ಸೋಲಿನ ವೇಳೆ ಶುಭಮನ್‌ ಗಿಲ್‌ ನಾಯಕರಾಗಿದ್ದರು. ಇನ್ನೊಂದು ಔಪಚಾರಿಕ ಪಂದ್ಯದಲ್ಲಿ ಇಂಡಿಯಾ ಡಿ 257 ರನ್ನುಗಳಿಂದ ಇಂಡಿಯಾ ಬಿ ತಂಡವನ್ನು ಪರಾಭವಗೊಳಿಸಿತು.

Advertisement

Udayavani is now on Telegram. Click here to join our channel and stay updated with the latest news.

Next