Advertisement

Duleep Trophy: ಸೆಂಚುರಿ ಸಿಡಿಸಿ ಪುನರಾಗಮನಗೈದ ಇಶಾನ್‌ ಕಿಶನ್‌

12:33 AM Sep 13, 2024 | Team Udayavani |

ಅನಂತಪುರ: ಇಶಾನ್‌ ಕಿಶನ್‌ ತಮ್ಮ ಪ್ರಥಮ ದರ್ಜೆ ಕ್ರಿಕೆಟ್‌ ಪುನರಾಗಮನವನ್ನು ಪ್ರಚಂಡ ಸೆಂಚುರಿಯೊಂದಿಗೆ ಸಂಭ್ರಮಿ ಸಿದ್ದಾರೆ. ದುಲೀಪ್‌ ಟ್ರೋಫಿ ಕ್ರಿಕೆಟ್‌ನಲ್ಲಿ ಇಂಡಿಯಾ ಸಿ ಪರ ಆಡುತ್ತಿರುವ ಅವರು ಇಂಡಿಯಾ ಬಿ ವಿರುದ್ಧ 111 ರನ್‌ ಬಾರಿಸಿ ಮಿಂಚಿದರು. ಇವರ ಸಾಹಸದಿಂದ ಮೊದಲ ದಿನದಾಟದಲ್ಲಿ ಇಂಡಿಯಾ ಸಿ 5 ವಿಕೆಟಿಗೆ 357 ರನ್‌ ಪೇರಿಸಿದೆ.

Advertisement

ಇಶಾನ್‌ ಕಿಶನ್‌ ಮೊದಲ ಸುತ್ತಿನ ಪಂದ್ಯದ ವೇಳೆ ಇಂಡಿಯಾ ಡಿ ತಂಡದಲ್ಲಿದ್ದರು. ಆದರೆ ಕಡೇ ಗಳಿಗೆಯಲ್ಲಿ ತೊಡೆಯ ನೋವಿನಿಂದ ಹೊರಗುಳಿಯಬೇಕಾಯಿತು. ಈ ಬ್ಯಾಟಿಂಗ್‌ ಸಾಹಸದೊಂದಿಗೆ ಅವರ ಫಿಟ್‌ನೆಸ್‌ ಕೂಡ ಸಾಬೀತಾದಂತಾಯಿತು. ಇಶಾನ್‌ ಕಿಶನ್‌ ಅವರ 111 ರನ್‌ 126 ಎಸೆತಗಳಲ್ಲಿ ಬಂತು. ಸಿಡಿಸಿದ್ದು 14 ಬೌಂಡರಿ ಹಾಗೂ 3 ಸಿಕ್ಸರ್‌. ಅವರು 4ನೇ ಕ್ರಮಾಂಕದಲ್ಲಿ ಆಡಲಿಳಿದಿದ್ದರು. ಇಶಾನ್‌ ಕಿಶನ್‌ “ಬುಚ್ಚಿ ಬಾಬು’ ಕ್ರಿಕೆಟ್‌ ಕೂಟದ ಮೊದಲ ಪಂದ್ಯದಲ್ಲೂ ಶತಕ ಹೊಡೆದಿದ್ದರು.

78 ರನ್‌ ಮಾಡಿದ ಬಾಬಾ ಇಂದ್ರಜಿತ್‌ ಮತ್ತೋರ್ವ ಪ್ರಮುಖ ಸ್ಕೋರರ್‌. ಇವರಿಬ್ಬರ ಜತೆಯಾಟದಲ್ಲಿ 189 ರನ್‌ ಹರಿದು ಬಂತು. ಕೇವಲ 2 ಎಸೆತ ಎದುರಿಸಿದೊಡನೆ ಗಾಯಾಳಾದ ನಾಯಕ ಋತುರಾಜ್‌ ಗಾಯಕ್ವಾಡ್‌ ಮರಳಿ ಕ್ರೀಸ್‌ ಇಳಿದಿದ್ದು, 46 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಸಾಯಿ ಸುದರ್ಶನ್‌ 43, ರಜತ್‌ ಪಾಟೀದಾರ್‌ 40 ರನ್‌ ಮಾಡಿದರು.

ಮುಲಾನಿ-ತುಷಾರ್‌ ಆಸರೆ
ಇಂಡಿಯಾ ಡಿ ಎದುರಿನ ಇನ್ನೊಂದು ಪಂದ್ಯದಲ್ಲಿ ಬ್ಯಾಟಿಂಗ್‌ ಕುಸಿತಕ್ಕೆ ಸಿಲುಕಿದ ಇಂಡಿಯಾ ಎ ತಂಡಕ್ಕೆ ಶಮ್ಸ್‌ ಮುಲಾನಿ ಮತ್ತು ತನುಷ್‌ ಕೋಟ್ಯಾನ್‌ ಆಧಾರವಾಗಿದ್ದಾರೆ. 93 ರನ್‌ ಆಗುವಷ್ಟರಲ್ಲಿ 5 ವಿಕೆಟ್‌ ಕಳೆದುಕೊಂಡಿದ್ದ ಇಂಡಿಯಾ ಎ, ದಿನದಾಟದ ಅಂತ್ಯಕ್ಕೆ 8 ವಿಕೆಟಿಗೆ 288 ರನ್‌ ಪೇರಿಸಿದೆ.
ಶಮ್ಸ್‌ ಮುಲಾನಿ 88 ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ (174 ಎಸೆತ, 8 ಬೌಂಡರಿ, 3 ಸಿಕ್ಸರ್‌). ತನುಷ್‌ 53 ರನ್‌ ಮಾಡಿದರು. ಹರ್ಷಿತ್‌ ರಾಣಾ, ವಿದ್ವತ್‌ ಕಾವೇರಪ್ಪ ಮತ್ತು ಅರ್ಷದೀಪ್‌ ಸಿಂಗ್‌ ತಲಾ 2 ವಿಕೆಟ್‌ ಉರುಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next