Advertisement

ಹದಗೆಟ್ಟ ಕಾವ್ರಾಡಿ-ವಾಲ್ತೂರು-ಅಂಪಾರು ರಸ್ತೆ

10:45 PM Jun 03, 2019 | Sriram |

ಕಾವ್ರಾಡಿ: ಕಂಡ್ಲೂರಿನಿಂದ ಕಾವ್ರಾಡಿ ಮೂಲಕವಾಗಿ ವಾಲ್ತೂರು, ಅಂಪಾರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಸುಮಾರು 6 ಕಿ.ಮೀ. ದೂರದ ರಸ್ತೆಯ ಹೆಚ್ಚಿನ ಕಡೆಗಳಲ್ಲಿ ಹೊಂಡ – ಗುಂಡಿಗಳೇ ಕಾಣುತ್ತಿವೆ.

Advertisement

ವಾಲ್ತೂರಿನಿಂದ ಕಂಡ್ಲೂರು ಅಥವಾ ಅಂಪಾರಿಗೆ ತೆರಳಲು ಇರುವ ಪ್ರಮುಖ ರಸ್ತೆ ಇದಾಗಿದ್ದು, ನೂರಾರು ಮಂದಿ ಇದೇ ಮಾರ್ಗವನ್ನು ಆಶ್ರಯಿಸಿದ್ದಾರೆ. 6 ಕಿ.ಮೀ. ದೂರದ ರಸ್ತೆಯಲ್ಲಿ ಸರಿ ಇರುವುದಕ್ಕಿಂತ ಹದಗೆಟ್ಟ ಅಥವಾ ಹೊಂಡ-ಗುಂಡಿಗಳಿರುವ ಭಾಗವೇ ಹೆಚ್ಚಿರುವುದು ಈ ರಸ್ತೆಯ ದುಃಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ.

ಡಾಮರೀಕರಣವಾಗಿ 10 ವರ್ಷ
ಸುಮಾರು 25 – 30 ವರ್ಷಗಳ ಹಿಂದೆ ಮಣ್ಣಿನ ರಸ್ತೆಯಾಗಿದ್ದು, 10 ವರ್ಷಗಳ ಹಿಂದೆ ಈ ರಸ್ತೆಗೆ ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ ಡಾಮರೀಕರಣ ವಾಗಿದೆ. ಆ ಬಳಿಕ ಇಲ್ಲಿಯವರೆಗೆ ಮರು ಡಾಮರೀಕರಣವೇ ಆಗಿಲ್ಲ. ಕನಿಷ್ಠ ಹೊಂಡ – ಗುಂಡಿ ಗಳಿಗೆ ತೇಪೆ ಹಾಕುವ ಕಾರ್ಯವೂ ಕೆಲವು ವರ್ಷಗಳಿಂದ ನಡೆದೇ ಇಲ್ಲ. ಕಳೆದ ವರ್ಷ ನೆಪ ಮಾತ್ರಕ್ಕೆ ಒಂದಷ್ಟು ದೂರ ಮಾತ್ರ ತೇಪೆ ಹಾಕಲಾಗಿತ್ತು.

ಬಸ್‌ ಸಂಚಾರ
ಇನ್ನು ಇದೇ ಮಾರ್ಗವಾಗಿ ಕೊಲ್ಲೂರಿನಿಂದ ಕುಂದಾಪುರಕ್ಕೆ ಹಾಗೂ ಕುಂದಾಪುರದಿಂದ ಕಂಡ್ಲೂರು ಮಾರ್ಗವಾಗಿ ಕೊಲ್ಲೂರಿಗೆ ದಿನಕ್ಕೆ 2 ಬಸ್‌ 4-5 ಬಾರಿ ಸಂಚರಿಸುತ್ತಿದೆ. ಆದರೂ ಈ ರಸ್ತೆಯ ದುರಸ್ತಿ ಬಗ್ಗೆ ಸಂಬಂಧಪಟ್ಟ ಯಾರೂ ಕೂಡ ಮುಂದಾಗಿಲ್ಲ. ರಸ್ತೆ ಹದಗೆಟ್ಟಿರುವುದು ಮಾತ್ರವಲ್ಲ, ಕಿರಿದಾದ ರಸ್ತೆಯಿಂದ ಬಸ್‌ ಸಹಿತ ದೊಡ್ಡ ವಾಹನಗಳು ಬಂದರೆ ಬೇರೆ ವಾಹನಗಳು ಸಂಚರಿಸುವುದೇ ಅಸಾಧ್ಯ ಎನ್ನುವಂತಾಗಿದೆ.

ಈ ಬಾರಿಯಾದರೂ ಈ ರಸ್ತೆಯಲ್ಲಿರುವ ಹೊಂಡ – ಗುಂಡಿಗಳಿಗೆ ತೇಪೆಯಾದರೂ ಹಾಕಲಿ. ಅನೇಕ ವರ್ಷಗಳಿಂದ ಹೀಗೆ ಇದೆ. ಮಳೆಗಾಲದಲ್ಲೂ ಇದೇ ರೀತಿಯಾದರೆ ವಾಹನ ಸಂಚಾರ ತುಂಬಾ ಕಷ್ಟವಿದೆ ಎನ್ನುವ ಅಭಿಪ್ರಾಯ ಕಾವ್ರಾಡಿಯ ರಾಮ ಅವರದು.

Advertisement

ಶೀಘ್ರ ದುರಸ್ತಿ ಮಾಡಲಿ
ಡಾಮರೀಕರಣವಾಗಿ ಸುಮಾರು 10 ವರ್ಷ ಆಗಿರಬಹುದು. ಪ್ಯಾಚ್‌ವರ್ಕ್‌ ಅಂತೂ ಅನೇಕ ವರ್ಷಗಳಿಂದ ಆಗಿಯೇ ಇಲ್ಲ. ಗುಂಡಿಗಳಿರುವ, ಡಾಮರು ಕಿತ್ತು ಹೋದ ಈ ರಸ್ತೆಯಲ್ಲಿ ಸಂಚರಿಸುವುದು ಕಷ್ಟ. ಅದರಲ್ಲೂ ದ್ವಿಚಕ್ರ ವಾಹನ ಸವಾರರಂತೂ ಹರಸಾಹಸ ಪಡಬೇಕಾಗಿದೆ. ಆದಷ್ಟು ಬೇಗ ದುರಸ್ತಿ ಮಾಡಲು ಸಂಬಂಧಪಟ್ಟವರು ಮುಂದಾಗಲಿ. ಕನಿಷ್ಠ ಈ ಬಾರಿ ಮಳೆಗಾಲಕ್ಕೆ ಮುನ್ನ ತೇಪೆಯಾದರೂ ಹಾಕಲಿ.
– ಸುದೇಶ್‌ ಕಾವ್ರಾಡಿ, ಸ್ಥಳೀಯರು

ತೇಪೆ ಕಾರ್ಯಕ್ಕೆ ಪ್ರಯತ್ನ
ಇದು ರಸ್ತೆ ಸಂಪೂರ್ಣ ಹಾಳಾಗಿರುವುದರಿಂದ ದುರಸ್ತಿ ಮಾಡಬೇಕಾದರೆ ಹೆಚ್ಚುವರಿ ಅನುದಾನದ ಅಗತ್ಯವಿದೆ. ಈ ಬಾರಿ ತೇಪೆ ಹಾಕುವ ಕಾರ್ಯ ಮಾಡುವ ಕುರಿತಂತೆ ಪ್ರಯತ್ನಿಸಲಾಗುವುದು. ಮುಂದಿನ ಬಾರಿ ಜಿ.ಪಂ.ನಿಂದ ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಸಲ್ಲಿಸಿ, ಮರು ಡಾಮರೀಕರಣಕ್ಕೆ ಎಲ್ಲ ರೀತಿಯಿಂದ ಪ್ರಯತ್ನಿಸುತ್ತೇನೆ.
-ಜ್ಯೋತಿ ಕಾವ್ರಾಡಿ, ಜಿ.ಪಂ. ಸದಸ್ಯರು

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next