Advertisement

ಬಿ-ಫಾರಂನತ್ತ ಆಕಾಂಕ್ಷಿಗಳ ಚಿತ್ತ

07:30 AM Apr 15, 2018 | |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಮುಖ ಪಕ್ಷಗಳಾಗಿರುವ ಕಾಂಗ್ರೆಸ್‌ ಮತ್ತು ಬಿಜೆಪಿಯಲ್ಲಿಯೇ ಇನ್ನೂ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಂಡಿಲ್ಲ. ಆದರೂ ಆಕಾಂಕ್ಷಿಗಳು ಬಿ- ಫಾರಂ ನಿರೀಕ್ಷೆಯಲ್ಲಿ ನಾಮಪತ್ರ ಸಲ್ಲಿಕೆಗೆ ಪೂರ್ವ ತಯಾರಿ ನಡೆಸುತ್ತಿದ್ದಾರೆ.

Advertisement

ಎ. 17ರಂದು ಚುನಾವಣಾ ಅಧಿಸೂಚನೆ ಹೊರ ಬೀಳಲಿದ್ದು, ಅಂದೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ. ನಾಮಪತ್ರ ಸಲ್ಲಿಕೆಗೆ ಎ. 24 ಕಡೆಯ ದಿನ. ಎ. 25ರಂದು ನಾಮಪತ್ರ ಪರಿಶೀಲನೆ. ನಾಮಪತ್ರ ಹಿಂಪಡೆಯಲು ಎ. 27 ಕೊನೆಯ ದಿನ. ನಾಮಪತ್ರ ಸಲ್ಲಿಸುವುದಕ್ಕೆ ಏಳು ದಿನ ಅವಧಿ ಇದ್ದರೂ ಆದಷ್ಟು ಬೇಗ ಬಿ-ಫಾರಂ ಸಲ್ಲಿಸುವ ತವಕದಲ್ಲಿ ಆಕಾಂಕ್ಷಿಗಳಿದ್ದಾರೆ.

ದ.ಕ. ಜಿಲ್ಲೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಕಾಂಗ್ರೆಸ್‌ ಈ ಬಾರಿ ಹೆಚ್ಚು ನಿರಾಳವಾಗಿದೆ. ಜಿಲ್ಲೆಯ 8 ಕ್ಷೇತ್ರಗಳ ಪೈಕಿ ಏಳರಲ್ಲಿ ಶಾಸಕರನ್ನು ಹೊಂದಿರುವುದು ಮತ್ತು ಎಲ್ಲ ಹಾಲಿ ಶಾಸಕರಿಗೆ ಬಹುತೇಕ ಟಿಕೆಟ್‌ ಸಿಗುವ ಸಾಧ್ಯತೆ ಇದಕ್ಕೆ ಕಾರಣ. ಮಂಗಳೂರು ದಕ್ಷಿಣದಲ್ಲಿ ಜೆ.ಆರ್‌. ಲೋಬೋ, ಮಂಗಳೂರು ಉತ್ತರದಲ್ಲಿ ಮೊದಿನ್‌ ಬಾವಾ, ಮಂಗಳೂರು ಕ್ಷೇತ್ರದಲ್ಲಿ ಯು.ಟಿ. ಖಾದರ್‌, ಬಂಟ್ವಾಳ ದಲ್ಲಿ ಬಿ. ರಮಾನಾಥ ರೈ, ಬೆಳ್ತಂಗಡಿಯಲ್ಲಿ ಕೆ. ವಸಂತ ಬಂಗೇರ, ಪುತ್ತೂರಿನಲ್ಲಿ ಶಕುಂತಳಾ ಶೆಟ್ಟಿ ಅವರನ್ನು ಮರಳಿ ಕಣಕ್ಕಿಳಿಸುವುದು ಬಹುತೇಕ ಸಿದ್ಧ. ಸುಳ್ಯದಲ್ಲಿ ಕಳೆದ ಮೂರು ಅವಧಿಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಡಾ| ರಘು ಅವರ ಹೆಸರು ಈ ಬಾರಿಯೂ ಬಹುತೇಕ ಅಂತಿಮಗೊಂಡಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಮೂಡಬಿದಿರೆಯಲ್ಲಿ ಹಾಲಿ ಶಾಸಕ ಅಭಯಚಂದ್ರ ಅವರೇ ಕಣಕ್ಕಿಳಿಯುವುದು ಬಹುತೇಕ ನಿಚ್ಚಳವಾಗಿದೆ. ಪುತ್ತೂರಿನಲ್ಲಿ ಹಾಲಿ ಶಾಸಕಿ ಶಕುಂತಳಾ ಶೆಟ್ಟಿ ಅವರ ಆಯ್ಕೆ ಬಗ್ಗೆ ಒಂದು ಬಣ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಇದನ್ನು ಶಮನಗೊಳಿಸುವ ಕಾರ್ಯ ಪಕ್ಷದ ಉನ್ನತ ಮಟ್ಟದಲ್ಲಿ ನಡೆಯುತ್ತಿದೆ.

ಬಿಜೆಪಿಯಲ್ಲಿ  ಹೆಚ್ಚಿದ ಪೈಪೋಟಿ
ಬಿಜೆಪಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಪಕ್ಷದ ವರಿಷ್ಠ ಮಂಡಳಿಗೆ ಸವಾಲಾಗಿದೆ. ನಮ್ಮದು ಕಾರ್ಯಕರ್ತರ ಆಧಾರಿತ ಪಕ್ಷ, ಅಭ್ಯರ್ಥಿ ಯಾರೆಂಬುದುಮುಖ್ಯವಲ್ಲ ಎಂದು ಬಿಜೆಪಿ ನಾಯಕರು ಹೇಳಿಕೊಳ್ಳುತ್ತಾರಾದರೂ ಆಂತರಿಕವಾಗಿ ಅಲ್ಲಿ ಟಿಕೆಟ್‌ಗಾಗಿ ತೀವ್ರ ಪೈಪೋಟಿಯಿದೆ. ಸುಳ್ಯದಲ್ಲಿ ಪಕ್ಷದ ಅಭ್ಯರ್ಥಿಯಾಗಿ ಹಾಲಿ ಶಾಸಕ ಅಂಗಾರ ಹೆಸರು ಮಾತ್ರ ಘೋಷಣೆಯಾಗಿದೆ. ಉಳಿದಂತೆ 7 ಕ್ಷೇತ್ರಗಳಲ್ಲೂ ಹಲವು ಮಂದಿ ಆಕಾಂಕ್ಷಿಗಳಿದ್ದಾರೆ. ಕೆಲವರು ತಾವೇ ಅಭ್ಯರ್ಥಿಗಳು ಎಂಬ ನೆಲೆಯಲ್ಲಿ ಈಗಾಗಲೇ ಪ್ರಚಾರಕಾರ್ಯವನ್ನು ಆರಂಭಿಸಿದ್ದಾರೆ.

ಮತ್ತೆ ಅಭಿಪ್ರಾಯ ಸಂಗ್ರಹ
ಬಿಜೆಪಿಯಲ್ಲಿ ಆಕಾಂಕ್ಷಿಗಳ ಒತ್ತಡದ ಹಿನ್ನೆಲೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಜಿಲ್ಲೆಯಲ್ಲಿ ತನ್ನ ಮೂಲಗಳಿಂದ ಇನ್ನೊಂದು ಸುತ್ತಿನ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ. ವರದಿಯ ಆಧಾರದಲ್ಲಿ ಹೆಚ್ಚು ಜನಪ್ರಿಯತೆ ಹೊಂದಿರುವ ಅಭ್ಯರ್ಥಿಯನ್ನು ಅಂತಿಮಗೊಳಿಸಿ ಪ್ರಕಟಿಸಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.  ಜೆಡಿಎಸ್‌ ಕಾದು ನೋಡುವ ತಂತ್ರ ಜಿಲ್ಲೆಯಲ್ಲಿ ಜೆಡಿಎಸ್‌ ಅಭ್ಯರ್ಥಿಗಳ ಆಯ್ಕೆಗೆ ಕಾದು ನೋಡುವ ತಂತ್ರ ಅನುಸರಿಸುತ್ತಿದೆ. ಸಿಪಿಎಂ ಈಗ ನಾಲ್ಕು ಕಡೆ ಸ್ಪರ್ಧಿಸಲು ನಿರ್ಧರಿಸಿ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಮಂಗಳೂರು ಕ್ಷೇತ್ರದಿಂದ ನಿತಿನ್‌ ಕುಮಾರ್‌ ಕುತ್ತಾರ್‌, ಮಂಗಳೂರು ದಕ್ಷಿಣ ಕ್ಷೇತ್ರದಿಂದ ಸಿ. ಸುನಿಲ್‌ ಕುಮಾರ್‌ ಬಜಾಲ್‌, ಮಂಗಳೂರು ಉತ್ತರದಿಂದ ಮುನೀರ್‌ ಕಾಟಿಪಳ್ಳ, ಮೂಡಬಿದಿರೆ ಕ್ಷೇತ್ರದಲ್ಲಿ ಕೆ. ಯಾದವ ಶೆಟ್ಟಿ ಅವರನ್ನು ಕಣಕ್ಕಿಳಿಸಿದೆ. ಎಸ್‌ಡಿಪಿಐಯಲ್ಲಿಯೂ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.

Advertisement

ಅಸಮಾಧಾನ ಶಮನಕ್ಕೆ ಯತ್ನ
ದಿಲ್ಲಿಯಲ್ಲಿ ಬಿಜೆಪಿ ವರಿಷ್ಠ ಮಂಡಳಿ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸುತ್ತಿದೆ ಎಂಬ ವರದಿ ಆಕಾಂಕ್ಷಿಗಳಲ್ಲಿ ಅತೃಪ್ತಿಯನ್ನು ಹೊತ್ತಿಸಿದೆ. ಅಭ್ಯರ್ಥಿ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲ ಎಂಬುದನ್ನು ತಮ್ಮ ಆಪ್ತ ನಾಯಕರ ಮೂಲಕ ತಿಳಿದುಕೊಂಡಿರುವ ಆಕಾಂಕ್ಷಿಗಳು ಬೆಂಬಲಿಗರ ಜತೆ ಸಮಾಲೋಚನೆ ಆರಂಭಿಸಿದ್ದಾರೆ. ಅಸಮಾಧಾನದ ಅಲೆ ತೀವ್ರಗೊಳ್ಳುತ್ತಿರುವುದರ ಮುನ್ಸೂಚನೆ ಲಭಿಸಿರುವ ಪಕ್ಷದ ನಾಯಕರು ಆಕಾಂಕ್ಷಿಗಳನ್ನು ಕರೆಸಿ ಮಾತುಕತೆ ನಡೆಸಿ ಅಧಿಕಾರಕ್ಕೆ ಬಂದಲ್ಲಿ ಉತ್ತಮ ಸ್ಥಾನಮಾನ ನೀಡುವ ಭರವಸೆಯಿತ್ತು ಸಮಾಧಾನಪಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next