Advertisement

ರಿಯಲ್‌ ಸ್ಟಾರ್‌ ಉಪೇಂದ್ರ ಪ್ರಜಾಕೀಯ ಈ ಸಲ ಡೌಟ್‌

06:50 AM Apr 20, 2018 | |

ಬೆಂಗಳೂರು: ರಿಯಲ್‌ ಸ್ಟಾರ್‌ ಖ್ಯಾತಿಯ ನಟ ಉಪೇಂದ್ರ ಅವರ “ಪ್ರಜಾಕೀಯ’ ಪಕ್ಷ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಡೌಟ್‌. ವಿಧಾನಸಭೆ ಚುನಾವಣೆಯಲ್ಲಿ ಉಪೇಂದ್ರ ಅವರೂ ಸ್ಪರ್ಧೆ ಮಾಡುವುದಿಲ್ಲ. ಯಾರಿಗೂ ಬೆಂಬಲವನ್ನೂ ವ್ಯಕ್ತಪಡಿಸುವುದಿಲ್ಲ.

Advertisement

ಹೀಗಾಗಿ, “ಪ್ರಜಾಕೀಯ’ ಸದ್ಯದ ಮಟ್ಟಿಗೆ “ತಟಸ್ಥ’ ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷದ ಮೂಲಕ ರಾಜಕೀಯ ಪ್ರವೇಶಿಸಿ ಆರು ತಿಂಗಳಲ್ಲೇ ಅಲ್ಲಿಂದ ಹೊರಬಂದು “ಪ್ರಜಾಕೀಯ’ ಪಕ್ಷ ಘೋಷಿಸುವ ಮೂಲಕ ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದ್ದ ಉಪೇಂದ್ರ, ಚುನಾವಣೆ ಸ್ಪರ್ಧೆ ವಿಚಾರದಲ್ಲಿ ತರಾತುರಿ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

“ಪ್ರಜಾಕೀಯ’ ಪಕ್ಷ ಚುನಾವಣಾ ಆಯೋಗದಲ್ಲಿ ಇನ್ನೂ ನೋಂದಣಿ ಯಾಗಿಲ್ಲ. ಆದರೆ, ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿದ್ದು ಮುಂದಿನ ಲೋಕಸಭೆ ಚುನಾವಣೆ ವೇಳೆಗೆ ನೋಂದಣಿ ಮಾಡಿ ಲೋಕಸಭೆ ಹಾಗೂ ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.

ಉಪೇಂದ್ರ ಅವರು ಕೆಪಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾಗ ಹಾಗೂ “ಪ್ರಜಾಕೀಯ’ ಘೋಷಣೆ ಮಾಡಿದಾಗ ಜತೆಯಲ್ಲಿದ್ದು ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಬಯಸಿದ್ದ ಕೆಲವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಅವರ ಪರ ಉಪೇಂದ್ರ ಪ್ರಚಾರ ಮಾಡುವುದು ಅನುಮಾನ.

ಯಾಕೆಂದರೆ, ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧೆ ಮಾಡದೇ ಇರಲು ಉಪೇಂದ್ರ ತೀರ್ಮಾನಿಸಿದ್ದಾರೆ. ಹೀಗಾಗಿ, ಚುನಾವಣೆಗೆ ಸ್ಪರ್ಧಿಸದಂತೆ ತಮ್ಮ ಬೆಂಬಲಿಗ-ಅಭಿಮಾನಿಗಳಿಗೂ ತಿಳಿಸಿದ್ದಾರೆ. ಸದ್ಯ ಉಪೇಂದ್ರ ಕುಟುಂಬ ಸಮೇತ ವಿದೇಶ ಪ್ರವಾಸಕ್ಕೆ ತೆರಳಿದ್ದು, ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಎ.24ರ ನಂತರ ಮರಳಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

Advertisement

ರಾಜಕೀಯ ಪಕ್ಷಗಳ “ಗಾಳ’:   ಈ ಮಧ್ಯೆ, ಉಪೇಂದ್ರ ಅವರ ಪ್ರಜಾಕೀಯ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಗೊತ್ತಾಗುತ್ತಿದ್ದಂತೆ ಜೆಡಿಎಸ್‌, ಬಿಜೆಪಿ, ಕಾಂಗ್ರೆಸ್‌ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪರ ಉಪೇಂದ್ರ ಅವರನ್ನು ಪ್ರಚಾರಕ್ಕೆ ಕರೆತರಲು ಪ್ರಯತ್ನಿಸಿವೆ. 

ಈಗಾಗಲೇ ದರ್ಶನ್‌, ಸುದೀಪ್‌ ಸೇರಿ ಹಲವು ನಟರ ಸಂಪರ್ಕದಲ್ಲಿರುವ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಹಾಗೂ ಉಪೇಂದ್ರ ಅವರ ಬಗ್ಗೆ ಮೊದಲಿನಿಂದಲೂ “ಸಾಫ್ಟ್’ ಆಗಿರುವ ಬಿಜೆಪಿ ಸಹ ಉಪೇಂದ್ರಗೆ ಗಾಳ ಹಾಕಲು ಮುಂದಾಗಿವೆ ಎಂದು ತಿಳಿದು ಬಂದಿದೆ.

ಪ್ರಥಮ ಚುಂಬನಂ ದಂತ ಭಗ್ನಂ 
ರಾಜ್ಯದಲ್ಲಿ ಹೊಸದಾಗಿ ರಾಜಕೀಯ ಪಕ್ಷಗಳು ಸಾಕಷ್ಟು ಸ್ಥಾಪನೆಯಾಗಿವೆಯಾದರೂ ಚಲನಚಿತ್ರ ನಟ-ನಟಿಯರು ಹೊಸ ಪಕ್ಷ ಸ್ಥಾಪಿಸಿರಲಿಲ್ಲ. ಕೆಪಿಜೆಪಿಯಲ್ಲಿ ಗುರುತಿಸಿಕೊಂಡು ಪಕ್ಷ ಕಟ್ಟಲು ಮುಂದಾಗಿ ಹೊಸ ಸಾಹಸಕ್ಕೂ ಕೈ ಹಾಕಿದ್ದರು ಉಪೇಂದ್ರ. ಆರು ತಿಂಗಳಲ್ಲೇ ಕೆಪಿಜೆಪಿ ಸಂಸ್ಥಾಪಕ ಮಹೇಶ್‌ಗೌಡ ಅವರೊಂದಿಗೆ ಭಿನ್ನಾಭಿಪ್ರಾಯ ಉಂಟಾಗಿ ಕೆಪಿಜೆಪಿಗೆ ರಾಜೀನಾಮೆ ನೀಡಿ “ಪ್ರಜಾಕೀಯ’ಕ್ಕೆ ಜೈ ಎಂದಿದ್ದರು. ಆದರೆ, ಪ್ರಥಮ ಚುಂಬನಂ ದಂತ ಭಗ್ನಂ ಎಂಬಂತೆ ವಿಧಾನಸಭೆ ಚುನಾವಣೆ ಅಖಾಡದಿಂದ ದೂರ ಉಳಿಯುವಂತಾಗಿದೆ.

– ಎಸ್‌.ಲಕ್ಷ್ಮೀನಾರಾಯಣ 

Advertisement

Udayavani is now on Telegram. Click here to join our channel and stay updated with the latest news.

Next