Advertisement

ಸಮಾಜದ ನೆಮ್ಮ ದಿಗೆ ಅರಸು ದೂರದೃಷ್ಟಿ ಕಾರಣ

01:12 PM Aug 26, 2017 | Team Udayavani |

ಕೋಲಾರ: ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರ ಆಲೋಚನೆ, ದೂರದೃಷ್ಟಿಯಿಂದಾಗಿ ಇಂದು ಸಮಾಜ ನೆಮ್ಮದಿಯಿಂದ ಬದುಕುವಂತಾಗಿದೆ ಎಂದು ಆರೋಗ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್‌.ರಮೇಶ್‌ಕುಮಾರ್‌ ಅಭಿಪ್ರಾಯಪಟ್ಟರು. ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸು ಅವರ 102ನೇ ಜಯಂತಿ ಹಾಗೂ ಹಿಂದುಳಿದ ವರ್ಗಗಳ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಫ‌ಲಾನುಭವಿಗಳಿಗೆ ಸವಲತ್ತುಗಳ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಅರಸು ಋಣ ತೀರಿಸಲಾಗದು: ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಸಹ ಮುಖ್ಯವಾಹಿನಿಗೆ ಕರೆತರುವ ನಿಟ್ಟಿನಲ್ಲಿ ದಿ.ದೇವರಾಜ ಅರಸು ಅವರು ಜಾರಿಗೊಳಿಸಿರುವ ಯೋಜನೆಗಳು ಇಂದಿಗೂ ಮಾರ್ಗದರ್ಶಿಯಾಗಿವೆ. ಅರಸು ಅವರು ಇಂದು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅವರ ನಡೆ, ಕ್ರಿಯೆಗಳಿಂದ ನಮ್ಮ ಮಧ್ಯೆ ಸದಾ ಇರುತ್ತಾರೆ. ಅವರು ಮಾಡಿರುವ ಸೇವೆಗೆ ನಿತ್ಯ ಶ್ರದ್ಧಾಂಜಲಿ ಸಲ್ಲಿಸಿದರೂ ಋಣ ತೀರಿಸಲಾಗದು ಎಂದು ಹೇಳಿದರು. ಸರಳ ಜೀವನ: ಜೀವ ಹೋದ ಮೇಲೆ ಮಣ್ಣಿನಲ್ಲಿ ಹಾಕುವುದು ಅಥವಾ ಸುಡುವ ಪದ್ಧತಿ ಇದೆ. ಆದರೆ, ಅರಸು ಅವರು ಜೀವಂತವಾಗಿದ್ದಾಗಲೇ ಕೆಲ ವ್ಯಕ್ತಿಗಳು ಅವರ ವಿರುದ್ಧ ಆರೋಪ ಮಾಡಿ ಸುಡು ವಂತಹ ಕೆಲಸ ಮಾಡಿದ್ದರು. ಆದರೆ, ಅವರು ಮುಖ್ಯಮಂತ್ರಿಯಾಗಿದ್ದರೂ ಸಾಮಾನ್ಯ ವ್ಯಕ್ತಿಯಾಗಿಯೇ ಜೀವನ ನಡೆಸಿದವರು ಎಂದು ತಿಳಿಸಿದರು. ಅವಿರೋಧ ಆಯ್ಕೆ: ವಿಧಾನಸಭೆ ಚುನಾವಣೆಯಲ್ಲಿ ಮೊಟ್ಟಮೊದಲ ಬಾರಿಗೆ ಅವಿರೋಧವಾಗಿ ಆಯ್ಕೆಯಾದ ವ್ಯಕ್ತಿಯಾಗಿದ್ದರು. ಅವರ ಕ್ಷೇತ್ರದಲ್ಲಿ ಅವರ ಸಮುದಾಯದವರ ಮತಗಳೇ ಇರಲಿಲ್ಲ. ಆದರೂ, ಅರಸು ವಿರುದ್ಧ ಚುನಾವಣೆಗೆ ಸ್ಪರ್ಧಿಸಲು ಯಾರೂ ಮುಂದಾಗುತ್ತಿರಲಿಲ್ಲ. ಅವರ ಪ್ರಯತ್ನದಿಂದ ಇಂದು ಹಿಂದುಳಿದ ವರ್ಗದವರು ಉತ್ತಮ ಸ್ಥಾನಮಾನಗಳನ್ನು ಪಡೆದುಕೊಳ್ಳಲು ಸಾಧ್ಯವಾಯಿತು ಎಂದರು. ವಿದ್ಯಾರ್ಥಿ ನಿಲಯ ಸ್ಥಾಪನೆ: ಭ್ರಷ್ಟಾಚಾರ ಆರೋಪ ಮಾಡುವವರಿಗೆ ಬಡತನದ ಅರಿವಿಲ್ಲ. ಎಷ್ಟೇ ಆಸ್ತಿ ಮಾಡಿದರೂ ಸಾಯುವಾಗ ಹೊತ್ತುಕೊಂಡು ಹೋಗಲ್ಲ. ಅರಸು ಅವರಿಗೆ ಅಧಿಕಾರದ ವ್ಯಾಮೋಹವಿರಲಿಲ್ಲ. ಹಾಗಾಗಿ, ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಕ್ರಾಂತಿಯನ್ನೇ ಮಾಡಿದರು. ಬಡವರ ಕಷ್ಟ ನೋಡಿ ಸಹಿಸಲಾರದ ಅವರು, ಉಳುವವನಿಗೇ ಭೂಮಿ ಯೋಜನೆ ಜಾರಿಗೊಳಿಸಿ ಜಮೀನು ಹಂಚಿಕೆ ಮಾಡಿದರು. ಹಿಂದುಳಿದ ವರ್ಗಗಳವರ ಶೈಕ್ಷಣಿಕ ಅಭಿವೃದ್ಧಿಗಾಗಿ ರಾಜ್ಯದಲ್ಲಿ ವಿದ್ಯಾರ್ಥಿ ನಿಲಯ ಸ್ಥಾಪನೆ ಮಾಡಿದ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ ಎಂದರು. ಅರಸು ಹಾದಿಯಲ್ಲೇ ಸಾಗುತ್ತೇನೆ: ಅರಸು ಅವರ
ಸಾಮಾಜಿಕ ಕಾರ್ಯಗಳಿಗೆ ಕೊನೆಯೇ ಇಲ್ಲ. ಸಮಾಜದಲ್ಲಿದ್ದ ಮಲ ಹೊರುವ ಪದ್ಧತಿಯನ್ನು ರದ್ದುಗೊಳಿಸಿದರು. ಇದರಿಂದ ಬೀದಿ ಪಾಲಾದ ಕಾರ್ಮಿಕರು ಹೊಸ ಜೀವನ ರೂಪಿಸಿಕೊಳ್ಳಲು ಪುನಃ ಶ್ಚೇತನ ಕಾರ್ಯಕ್ರಮಗಳನ್ನು ಜಾರಿಗೊಳಿಸಿದರು. ಜತೆಗೆ ಸಾಮಾಜಿಕ ಬದಲಾವಣೆ ಮಾಡಲು ಮೌನ ಕಾಂತ್ರಿ ಮೂಲಕ ಹಲವಾರು ಸುಧಾರಣಾ ಕಾರ್ಯಕ್ರಮಗಳ ಜಾರಿಗೆ ತಂದರು. ನಾನು ಕೂಡ ಇದುವರೆಗೂ ಅವರ ಹಾದಿಯಲ್ಲೇ ಬಂದಿದ್ದೇನೆ. ಸಾಯುವತನಕ ಅವರ ಹಾದಿಯಲ್ಲೇ ಸಾಗುತ್ತೇನೆ. ಅವರ ಹಾಗೆ ಸಂಕಷ್ಟದ ಸ್ಥತಿಯಲ್ಲಿ ಜನರ ಮಧ್ಯೆ ನೆಮ್ಮದಿಯ ಜೀವನ ನಡೆಸುತ್ತಿದ್ದೇನೆ. ನನಗೆ ಇಷ್ಟೇ ಸಾಕು ಎಂದು ಹೇಳಿದರು. ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕ್‌ ಚಂದ್ರ ಮಾತನಾಡಿ, ಮೌನ ಕ್ರಾಂತಿಯ ಮೂಲಕ ಸಮಾಜವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದ ಕೀರ್ತಿ ದೇವರಾಜ ಅರಸು ಅವರಿಗೆ ಸಲ್ಲುತ್ತದೆ. ಅವರು ಅಧಿಕಾರದಲ್ಲಿದ್ದಾಗ ಜಾರಿಗೊಳಿಸಿದ್ದ ಯೋಜನೆಗಳು ಇಂದಿಗೂ ಮುಂದುವರಿಯುತ್ತಲೇ ಇವೆ. ಅವರ ಹಾದಿಯಲ್ಲಿ ಸಾಗಿದವರಿಗೆ ಸುಖಕರ ಜೀವನ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮಕ್ಕೂ ಮುನ್ನಾ ಹಿಂದುಳಿದ ಕಲ್ಯಾಣ ಇಲಾಖೆ ಕಚೇರಿಯಿಂದ ಟಿ.ಚನ್ನಯ್ಯ ರಂಗಮಂದಿರದವರಿಗೂ ದೇವರಾಜ ಅರಸು ಅವರ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪೋ›ತ್ಸಾಹ ಧನ ವಿತರಿಸಲಾಯಿತು. ಜಿಪಂ ಸಿಇಒ ಬಿ.ಬಿ.ಕಾವೇರಿ, ಪೊಲೀಸ್‌ ವರಿಷ್ಠಾಧಿಕಾರಿ ಡಾ.ರೋಹಿಣಿ ಕಟೋಜ್‌ ಸೆಪಟ್‌, ಉಪ ವಿಭಾಗಾಧಿಕಾರಿ ಶುಭಾ ಕಲ್ಯಾಣಿ, ತಾಪಂ ಅಧ್ಯಕ್ಷ ಎಂ.ಆಂಜಿನಪ್ಪ, ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ವಿ.ನಾರಾಯಣಸ್ವಾಮಿ, ಕಾರ್ಯದರ್ಶಿ ರಾಜೇಶ್‌ಸಿಂಗ್‌ ಮತ್ತಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next