Advertisement

ಈಗಲ್ಟನ್‌ ಗೂಡು ಸೇರಿಕೊಂಡ ಕಾಂಗ್ರೆಸ್‌ ಶಾಸಕರು

11:20 AM May 17, 2018 | Team Udayavani |

ರಾಮನಗರ: ಮೇ 12ರಂದು ನಡೆದ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಮತದಾರರು ಯಾವುದೇ ಒಂದು ಪಕ್ಷಕ್ಕೂ ಸ್ಪಷ್ಟ ಬಹುಮತ ನೀಡದ ಹಿನ್ನೆಲೆಯಲ್ಲಿ ಅತಂತ್ರ ಫ‌ಲಿತಾಂಶ ಹೊರಬಂದಿದ್ದು, ರಾಜಕೀಯ ಪಕ್ಷಗಳು
ರೆಸಾರ್ಟ್‌ ರಾಜಕಾರಣಕ್ಕೆ ಮುಂದಾಗಿದ್ದಾರೆ. ಕಾಂಗ್ರೆಸ್‌ ಪಕ್ಷದ ಚುನಾಯಿತ ಪ್ರತಿನಿಧಿಗಳು ರಾಮನಗರ ತಾಲೂಕಿನ ಬಿಡದಿ ಬಳಿ ಇರುವ ಈಗಲ್ಟನ್‌ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ.

Advertisement

104 ಸ್ಥಾನಗಳಲ್ಲಿ ಜಯಗಳಿಸಿರುವ ಬಿಜೆಪಿ ಪಕ್ಷದ ಬಳಿ ಸರ್ಕಾರ ರಚನೆಗೆ ಬೇಕಾದ ಸಂಖ್ಯೆಯ ಶಾಸಕರು ಇಲ್ಲ. ಇನ್ನೊಂದೆಡೆ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷಗಳು ಮೈತ್ರಿ ಸರ್ಕಾರ ರಚನೆಗೆ ಮುಂದಾಗಿದೆ. ಬಿಜೆಪಿ ಮತ್ತು ಜೆಡಿಎಸ್‌
-ಕಾಂಗ್ರೆಸ್‌ ಮುಖಂಡರು ರಾಜ್ಯಪಾಲರಿಗೆ ಮನವಿ ಕೊಟ್ಟು ಸರ್ಕಾರ ರಚಿಸಲು ಅವಕಾಶ ಕೋರಿದ್ದರು. ಸಂಖ್ಯಾಬಲ ಇಲ್ಲದಿದ್ದರೂ ಸರ್ಕಾರ ರಚನೆಗೆ ಮುಂದಾಗಿರುವ ಬಿಜೆಪಿ ಕುದುರೆ ವ್ಯಾಪಾರ ಶುರು ಇಟ್ಟುಕೊಳ್ಳಬಹುದು ಎಂಬ ಆತಂಕಕ್ಕೆ ಒಳಗಾಗಿರುವ ಕಾಂಗ್ರೆಸ್‌ ತನ್ನ ಎಲ್ಲಾ 78 ಮಂದಿ ಚುನಾಯಿತ ಪ್ರತಿನಿಧಿಗಳು ಈಗಲ್ಟನ್‌ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡುವಂತೆ ವ್ಯವಸ್ಥೆ ಮಾಡಿದ್ದಾರೆ.

102 ಕೊಠಡಿಗಳಲ್ಲಿ ಕಾಂಗ್ರೆಸ್‌ ವಾಸ್ತವ್ಯ: ಈಗಲ್ಟನ್‌ ಸದ್ಯ ಅಕ್ಷರಶಃ ಭದ್ರಕೋಟೆಯಾಗಿ ಮಾರ್ಪಾಟಾಗಿದೆ. ಕಾಂಗ್ರೆಸ್‌ ಪಕ್ಷದ ವಿಜೇತರು ಇಲ್ಲಿ ವಾಸ್ತವ್ಯ ಹೂಡುತ್ತಿರುವುದರಿಂದ ಪೊಲೀಸರು ಬಿಗಿ ಭದ್ರತೆಯನ್ನು ಒದಗಿಸಿದ್ದಾರೆ. 
ಮಾಧ್ಯಮದವರನ್ನು ಗೇಟಿನ ಒಳಗೆ ಹೋಗುವುದನ್ನು ನಿರ್ಬಂಧಿಸಲಾಗಿದೆ. ಕಾಂಗ್ರೆಸ್‌  ವಿಜೇತರ ವಾಸ್ತವ್ಯಕ್ಕೆ ಸದ್ಯ 102 ಕೊಠಡಿಗಳನ್ನು ಬಾಡಿಗೆಗೆ ಪಡೆಯಲಾಗಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ. 77 ಕಾಂಗ್ರೆಸ್‌ ವಿಜೇತರು
ಮತ್ತು ಇಬ್ಬರು ಸ್ವತಂತ್ರ ವಿಜೇತರ ಜೊತೆಗೆ 10-20 ಕಾಂಗ್ರೆಸ್‌ ಮುಖಂಡರು ಇಲ್ಲಿ ವಾಸ್ತವ್ಯ ಹೂಡಿದ್ದಾರೆ ಎನ್ನಲಾಗಿದೆ. 

ಬಸ್ಸು, ಕಾರುಗಳಲಿ ಬಂದ ಚುನಾಯಿತ ಪ್ರತಿನಿಧಿಗಳು: ಬುಧವಾರ ರಾತ್ರಿ 8.45ರ ವೇಳೆಗೆ ಬೆಂಗಳೂರಿನಿಂದ ಕಾಂಗ್ರೆಸ್‌ ಪಕ್ಷದ ಚುನಾಯಿತ ಪ್ರತಿನಿಧಿಗಳು ಮತ್ತು ಮುಖಂಡರು ಈಗಲ್ಟನ್‌ ರೆಸಾರ್ಟ್‌ಗೆ ಎರಡು ಬಸ್ಸು, ಹತ್ತಕ್ಕು ಹೆಚ್ಚು ಕಾರುಗಳಲ್ಲಿ ಎಂಟ್ರಿಕೊಟ್ಟರು. ರೆಸಾರ್ಟ್‌ನಲ್ಲಿ ವಾಸ್ಥವ್ಯ ಹೂಡಿರುವ ಚುನಾಯಿತ ಪ್ರತಿನಿಧಿಗಳ ಉಸ್ತುವಾರಿಯನ್ನು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಮತ್ತು ಕನಕಪುರ ಶಾಸಕ ಡಿ.ಕೆ.ಬ್ರದರ್ ಅವರಿಗೆ ವಹಿಸಲಾಗಿದೆ ಎಂದು ತಿಳಿದು ಬಂದಿದೆ.

ಎಂಎಲ್‌ಸಿ ಸಿ.ಎಂ.ಲಿಂಗಪ್ಪ ಮತ್ತು ಎಸ್‌.ರವಿ, ಕೆಪಿಸಿಸಿ ಸದಸ್ಯ ಚಿಕ್ಕಬ್ಯಾಟಪ್ಪ, ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಎಲ್‌.ಚಂದ್ರಶೇಖರ್‌ ಸೇರಿದಂತೆ ಜಿಲ್ಲಾ ಕಾಂಗ್ರೆಸ್‌ ಮುಖಂಡರು ಸಹ ರೆಸಾರ್ಟ್‌ ನಲ್ಲೇ ಇರುವುದಾಗಿ ತಿಳಿದುಬಂದಿದೆ.

Advertisement

 ಸಮ್ಮಿಶ್ರ ಸರ್ಕಾರಕ್ಕೆ ಹೆಚ್ಚು ಅವಕಾಶ
ರಾಮನಗರ: ಸರ್ಕಾರ ರಚನೆಗೆ ಬೇಕಾದ ಸಂಖ್ಯಾಬಲ ಬಿಜೆಪಿಗಿಂತ ಹೆಚ್ಚಿಗೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಬಳಿ ಇದೆ.
ಹೀಗಾಗಿ ಕಾಂಗ್ರೆಸ್‌- ಜೆಡಿಎಸ್‌ ಸಮ್ಮಿಶ್ರ ಸರ್ಕಾರ ರಚನೆ ಹೆಚ್ಚು ಅವಕಾಶ ಇದೆ ಎಂದು ಮಾಜಿ ಸಚಿವ ರಮೇಶ್‌ ಕುಮಾರ್‌ ತಿಳಿಸಿದರು.

ತಾಲೂಕಿನ ಬಿಡದಿ ಬಳಿಯ ಈಗಲ್‌ ಟನ್‌ ರೆಸಾರ್ಟ್‌ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ಬಹುಮತ ಇಲ್ಲದಿದ್ದಾಗ ಪಕ್ಷೇತರರ ಬೆಂಬಲದೊಂದಿಗೆ ಸರ್ಕಾರ ರಚನೆ ಮಾಡಿತ್ತು. ಆನಂತರ ಆಪರೇಷನ್‌ ಕಮಲದ ಮೂಲಕ ಶಾಸಕರನ್ನು ಖರೀದಿಸಿದ್ದನ್ನು ನಾಡಿನ ಜನತೆ ಮರೆತಿಲ್ಲ ಎಂದರು. 

ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷ ಕುಮಾರಸ್ವಾಮಿರವರು ಸಮ್ಮಿಶ್ರ ಸರ್ಕಾರ ರಚನೆಗೆ ಅನುವು ಮಾಡಿಕೊಡುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿಯಾಗಿದೆ. ಸರ್ಕಾರ ರಚಿಸಲು ರಾಜ್ಯದಲ್ಲಿ ಕಾಂಗ್ರೆಸ್‌ – ಜೆಡಿಎಸ್‌ ಒಟ್ಟಾಗಿದೆ. ಸರ್ಕಾರ ರಚನೆಗೆ ಬೇಕಾದ ಸಂಖ್ಯಾಬಲ ಹೊಂದಿರುವುದಾಗಿ, ಕಾನೂನಾತ್ಮಕವಾಗಿ ಎಲ್ಲಾ ಹಂತದ ಹೋರಾಟಕ್ಕೆ ಎರಡೂ ಪಕ್ಷಗಳು ಸಿದ್ಧವಿರುವುದಾಗಿ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next