ಬೆಂಗಳೂರು: ಕಾಂಗ್ರೆಸ್ ಪಕ್ಷದ ಮುಖಂಡ ಮತ್ತು ಮಾಜಿ ಸ್ಪೀಕರ್ ರಮೇಶ್‍ಕುಮಾರ್ ಅವರು ಮಹಿಳೆಯರನ್ನು ಕೀಳಾಗಿ ಮತ್ತು ಅಶ್ಲೀಲವಾಗಿ ಕಾಣುವ ಹೇಳಿಕೆ ನೀಡಿದ್ದು, ಇದು ಕಾಂಗ್ರೆಸ್ ಪಕ್ಷದ ಸಂಸ್ಕೃತಿಯನ್ನು ಅನಾವರಣಗೊಳಿಸುವಂತಿದೆ, ಅವರು ಬಹಿರಂಗವಾಗಿ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷರಾದ ಶ್ರೀಮತಿ ಗೀತಾ ವಿವೇಕಾನಂದ ಅವರು ಆಗ್ರಹಿಸಿದ್ದಾರೆ.
ರಮೇಶ್‍ಕುಮಾರ್ ಅವರು “ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಮಲಗಿ ಆನಂದಿಸಿ” ಎಂಬ ಅರ್ಥ ಬರುವ ಹೇಳಿಕೆಯನ್ನು ವಿಧಾನಸಭೆಯಲ್ಲಿ ನೀಡಿದ್ದು, ಇದು ಅಕ್ಷಮ್ಯ. ಇದು ಅವರಿಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಮಹಿಳೆಯರ ಬಗೆಗಿನ ಕೀಳು ಭಾವನೆ ಮತ್ತು ವಿಕೃತ ಚಿಂತನೆಯನ್ನು ಪ್ರತಿಬಿಂಬಿಸುತ್ತದೆ ಎಂದು ಗೀತಾ ವಿವೇಕಾನಂದ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಭಾರತವು ಮಾತೃಪ್ರಧಾನವಾದ ದೇಶವಾಗಿದೆ. ಸ್ತ್ರೀಯರಿಗೆ ತಲತಲಾಂತರದಿಂದ ಗೌರವ ನೀಡುವ ಸಂಸ್ಕೃತಿ ನಮ್ಮದು. ಕಾಂಗ್ರೆಸ್ ಪಕ್ಷದ ಅತ್ಯಂತ ಹಿರಿಯ ಶಾಸಕರಾದ ರಮೇಶ್‍ಕುಮಾರ್ ಅವರು ಇಂಥ ಪ್ರಚೋದನಾತ್ಮಕ ಹೇಳಿಕೆ ನೀಡಿದಾಗ ಅದರಿಂದ ಆಗಬಹುದಾದ ದುಷ್ಪ್ರಭಾವದ ಕುರಿತು ಚಿಂತಿಸಬೇಕಿತ್ತು. ಇಂಥ ಹೇಳಿಕೆಗಳಿಂದ ವಿಕೃತ ಮನಸ್ಸುಗಳಿಗೆ ಅವಕಾಶ ನೀಡಿದಂತಾಗುತ್ತದೆ ಎಂಬುದು ಅವರ ಅರಿವಿಗೆ ಬಂದಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : ಅತ್ಯಾಚಾರ ಆನಂದಿಸಿ ಎಂಬ ಹೇಳಿಕೆಗೆ ಕ್ಷಮೆ ಕೇಳಿದ ರಮೇಶ್ ಕುಮಾರ್
ರಮೇಶ್‍ಕುಮಾರ್ ಮತ್ತು ಕಾಂಗ್ರೆಸ್ ಪಕ್ಷದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಹೇಳಿಕೆ ಇದಾಗಿದೆ. ದೇಶದಲ್ಲಿ ಮಹಿಳೆಯರಿಗೆ ಗೌರವ ನೀಡಲು ಅವರು ಸಿದ್ಧರಿಲ್ಲ. ರಮೇಶ್‍ಕುಮಾರ್ ಅವರು ಬಹಿರಂಗವಾಗಿ ಕ್ಷಮೆ ಯಾಚಿಸದೆ ಇದ್ದಲ್ಲಿ ಅವರ ವಿರುದ್ಧ ಮಹಿಳಾ ಮೋರ್ಚಾ ವತಿಯಿಂದ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಗೀತಾ ವಿವೇಕಾನಂದ ಅವರು ಎಚ್ಚರಿಸಿದ್ದಾರೆ.