Advertisement
ರಾಯಚೂರು ತಾಲೂಕು ಕೃಷ್ಣ ಬಲದಂಡೆ ಕಾಲುವೆ ರೈತರ ಹಿತರಕ್ಷಣಾ ಸಮಿತಿಯಿಂದ ಸೋಮವಾರ ನಗರದ ಗಂಜ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ರೈತರ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು.
Related Articles
Advertisement
ಕೇವಲ ನೀರಾವರಿ ವಿಚಾರವಾಗಿಯೇ ವಿಧಾನಸೌಧದಲ್ಲಿ ಒಂದು ವಾರ ಚರ್ಚೆ ನಡೆಯಬೇಕು. ಅಂದಾಗ ರಾಜ್ಯದ ನೀರಿನ ಸಮಸ್ಯೆಗಳಿಗೆ ಏನಾದರೂ ಪರಿಹಾರ ಕಂಡುಕೊಳ್ಳಲು ಸಾಧ್ಯ. ರೈತರ ಜಮೀನಿನಲ್ಲಿ ಚಿಕ್ಕ ಕೆರೆ ನಿರ್ಮಿಸಲಿ, ಅದಕ್ಕಾಗಿ ಸರ್ಕಾರ ಶೇ.50ರಷ್ಟು ಸಬ್ಸಿಡಿ ಕೊಡಲಿ. ಆಗ ಯಾವ ರೈತರೂ ಈ ರೀತಿ ನೀರಿಗಾಗಿ ಬೀದಿಗೆ ಇಳಿಯುವ ಸನ್ನಿವೇಶ ನಿರ್ಮಾಣವಾಗುವುದಿಲ್ಲ ಎಂದು ಸಲಹೆ ನೀಡಿದರು.
ಸಮಾವೇಶ ಉದ್ಘಾಟಿಸಿದ ಕೃಷ್ಣ ಕಣಿವೆ ಹೋರಾಟಗಾರ ಬಸವರಾಜ ಕುಂಬಾರ ಮಾತನಾಡಿ, ನೀರಿಗಾಗಿ ಮೂರನೇ ಯುದ್ಧ ನಡೆಯಲಿದೆ ಎಂಬ ಮಾತು ಹಂತಹಂತವಾಗಿ ನಿಜವಾಗುತ್ತಿದೆ. ಆದರೆ, ಇಂದು ನೀವು ಕೈಗೊಂಡ ಹೋರಾಟ ಯಾವುದೇ ಕಾರಣಕ್ಕೂ ರಾಜಕೀಯ ಸ್ವರೂಪ ಪಡೆಯಬಾರದು. ಒಂದು ವೇಳೆ ಹಾಗಾದಲ್ಲಿ ಆ ಹೋರಾಟದ ಮೌಲ್ಯವೇ ಕಳೆದು ಹೋಗುತ್ತದೆ ಎಂದು ಎಚ್ಚರಿಸಿದರು.
ನೀರಿನ ಸಮರ್ಪಕ ಬಳಕೆ ಮಾಡಿದರೆ ಯಾವ ಸಮಸ್ಯೆ ಉಲ್ಬಣಿಸುವುದಿಲ್ಲ. ಆದರೆ, ನಮ್ಮ ಪಾಲಿನ ನೀರನ್ನು ನೆರೆ ರಾಜ್ಯಗಳಿಗೆ ಹರಿಸಿ ನಾವು ಬರ ಎದುರಿಸುತ್ತಿದ್ದೇವೆ. ಇಂದು ನೀರಿನ ಬಗ್ಗೆ ರೈತರಲ್ಲಿ ಜಾಗೃತಿ ಮೂಡುತ್ತಿದೆ. ರೈತನಿಗೆ ಯಾವ ಯೋಜನೆ, ಸಾಲ ಮನ್ನಾ, ಸಬ್ಸಿಡಿಗಳು ಬೇಕಿಲ್ಲ. ನೀರು ಕೊಟ್ಟರೆ ಸಾಕು. ಸರ್ಕಾರ ಮೊದಲು ಆ ಕೆಲಸ ಮಾಡಲಿ. ನಿಮ್ಮ ಹೋರಾಟ ಅಚಲವಾಗಿರಲಿ ಎಂದು ಹೇಳಿದರು.
ರೈತರು ಕೂಡ ಅಧಿಕ ಇಳುವರಿ ಆಸೆಗೆ ಅಗತ್ಯವಿಲ್ಲದಿದ್ದರೂ ಅಧಿಕ ನೀರು ಹಾಯಿಸಿ, ರಸಗೊಬ್ಬರ ಬಳಸಿ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತಿದ್ದೇವೆ. ನಮ್ಮ ಭಾಗದಲ್ಲಿ ಕಡಿಮೆ ನೀರಿನಲ್ಲಿ ಉತ್ತಮ ಬೆಳೆ ತೆಗೆಯಬಹುದು. ಆ ದಿಸೆಯಲ್ಲಿ ಕೃಷಿ ಮಾಡುವಂತೆ ಕರೆ ನೀಡಿದರು. ಕೊನೆಗೆ ಹೋರಾಟದ ರೂಪರೇಷೆಗಳ ಕುರಿತು ಮೂರು ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಸಮಿತಿ ಮುಖಂಡ ಶಿವಬಸಪ್ಪ ಮಾಲಿಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಗೋಪಾಲರೆಡ್ಡಿ, ಶರಬನಗೌಡ, ಷಣ್ಮುಖಪ್ಪ, ಸಿದ್ಧನಗೌಡ ಮುರಾನ್‌ಪುರ ಸೇರಿ ಇತರರಿದ್ದರು. ಚನ್ನಬಸವಣ್ಣ ನಿರೂಪಿಸಿದರು.
ಕೇವಲ 30 ಕಿ.ಮೀ. ಅಂತರದಲ್ಲಿ ಎರಡು ಜೀವನದಿಗಳು ಹರಿಯುತ್ತಿವೆ. ಆದರೆ, ನಮ್ಮ ನಾಯಕರಿಗೆ ಇರುವ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಳ್ಳುವ ಇಚ್ಛಾಶಕ್ತಿ ಇಲ್ಲ. 50 ವರ್ಷಗಳ ಹಿಂದೆ ಜಲಾಶಯ ನಿರ್ಮಿಸಿದರೂ ಇನ್ನೂ ಕೊನೆ ಭಾಗದಲ್ಲಿ ಕಾಲುವೆ ನಿರ್ಮಾಣ ಕೆಲಸ ಪೂರ್ಣಗೊಂಡಿಲ್ಲ. ನಗರಕ್ಕೆ ಕುಡಿಯುವ ನೀರು ಬೇಕು ಎಂಬ ಕಾರಣಕ್ಕೆ 150 ಹಳ್ಳಿಗಳ ರೈತರ ಬದುಕು ಬಲಿ ಕೊಡುವುದು ಸರಿಯಲ್ಲ. ಷಣ್ಮುಖಪ್ಪ ವೆಂಕಟಾಪುರ, ಹೋರಾಟ ಸಮಿತಿ ಸದಸ್ಯ ಈ ಹೋರಾಟಕ್ಕೆ ಸುದೀರ್ಘ ಇತಿಹಾಸವಿದೆ. ಹಿಂದೆ 157 ಕಿ.ಮೀ.ವರೆಗೆ ಕಾಲುವೆ ವಿಸ್ತರಿಸಲು ಹೋರಾಡಿದ್ದೆವು. ಇಂದು ಲಿಂಕ್ ಕಾಲುವೆ ಬೇಡ ಎಂದು ಹೋರಾಡಬೇಕಿದೆ. ಇದು ಯಾವುದೇ ರಾಜಕೀಯ ಪ್ರೇರಿತವಲ್ಲ. ಕೊನೆ ಭಾಗದ ರೈತರು ಸ್ವ ಇಚ್ಛೆಯಿಂದ ಹೋರಾಟಕ್ಕೆ ಧುಮುಕಬೇಕು. ಅಂದಾಗ ಫಲ ಸಿಗಲು ಸಾಧ್ಯ.
ಶಿವಬಸಪ್ಪ ಮಾಲಿಪಾಟೀಲ, ಹೋರಾಟ ಸಮಿತಿ ಮುಖಂಡ