Advertisement

ನೀರಿನ ದರ ಹೆಚ್ಚಳ ಖಂಡಿಸಿ ಧರಣಿ

05:20 PM Dec 24, 2017 | Team Udayavani |

ಚನ್ನಪಟ್ಟಣ: ಪಟ್ಟಣದ ಮಂಗಳವಾರಪೇಟೆಯ ನಿವಾಸಿಗಳು ಕುಡಿವ ಕಾವೇರಿ ನೀರಿನ ದರ ಹೆಚ್ಚಳ ವಿರೋಧಿಸಿ ನಗರಸಭೆ ಆಡಳಿತ ಮಂಡಳಿ ವಿರುದ್ಧ ಶನಿವಾರ ಪ್ರತಿಭಟನೆ ನಡೆಸಿ ಹಾಲಿ ದರವನ್ನು ಮುಂದುವರಿಸುವಂತೆ ಮನವಿ ಸಲ್ಲಿಸಿದರು. ಸರ್ಕಾರದ ಆದೇಶದಂತೆ ಕುಡಿವ ಕಾವೇರಿ ನೀರಿನ ದರವನ್ನು 120ರಿಂದ 220 ರೂ.ಗೆ ಹೆಚ್ಚಿಸುವಂತೆ ಕಾವೇರಿ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯು ನೀಡಿದ್ದ ಮನವಿಗೆ ಇಲ್ಲಿನ ನಗರಸಭೆಯು ಹಿಂದಿನ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಿದ್ದು, ಇದನ್ನು ಹಿಂಪಡೆದು ಹಾಲಿ 120 ರೂ. ದರವನ್ನೇ ನಿಗದಿ ಮಾಡುವಂತೆ ಒತ್ತಾಯಿಸಿದರು.

Advertisement

ಈ ಸಂದರ್ಭದಲ್ಲಿ ನಗರಸಭಾ ಮಾಜಿ ಸದಸ್ಯ ಶ್ರೀನಿವಾಸ ಮಾತನಾಡಿ, ಕಾವೇರಿ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ನಿರ್ವಹಣೆ ವೆಚ್ಚ ಭರಿಸಲು ಹಣದ ಮುಗ್ಗಟ್ಟು ಇರುವುದರಿಂದ ಕುಡಿವ ಕಾವೇರಿ ನೀರಿನ ದರವನ್ನು ಹೆಚ್ಚಿಸುವುದಾಗಿ ಪ್ರಕಟಣೆ ತಿಳಿಸಿದೆ. ಸರ್ಕಾರ ಇಲ್ಲಸಲ್ಲದ ಭಾಗ್ಯಗಳಿಗೆ ಹಣ ವೆಚ್ಚ ಮಾಡುತ್ತಿದ್ದು, ಕುಡಿವ ನೀರಿನ ನಿರ್ವಹಣೆಗೆ ಹಣದ ಕೊರತೆ ನೀಗಿಸಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು.

ಮಂಡಳಿ ಪಟ್ಟಣ ಪ್ರದೇಶದಲ್ಲಿ ನೀಡಿರುವ ನೀರಿನ ಸಂಪರ್ಕಗಳನ್ನು ಪರಿಶೀಲಿಸಿ, ಅವುಗಳಿಂದ ಬರುತ್ತಿರುವ ಆದಾಯ ಮತ್ತು ವೆಚ್ಚಗಳನ್ನು ಗಮನಿಸಿ, ಸೋರಿಕೆಯನ್ನು ತಡೆದು ಉಳಿಕೆ ಹಣವನ್ನು ನಗರಸಭೆಯಿಂದ ಭರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಬಡವರಿಗೆ ಬರೆ: ಮಂಗಳವಾರಪೇಟೆ ನಿವಾಸಿ ನಾರಾಯಣ ಮಾತನಾಡಿ, ಪಕ್ಕದ ತಮಿಳು ನಾಡಿಗೆ ಪುಕ್ಕಟ್ಟೆ ನೀರು ನೀಡುವ ರಾಜ್ಯದಲ್ಲಿ ನಾವು ನಮ್ಮ ನೀರಿಗೆ ಹಣತೆತ್ತುವ ಪರಿಸ್ಥಿತಿ ನಿರ್ಮಾಣವಾಗಿದೆ. ಚುನಾಯಿತ ಜನಪ್ರತಿ ನಿಧಿಗಳು, ಸರ್ಕಾರಗಳು ಚುನಾವಣೆಯ ವೇಳೆ ಮಾತ್ರ ಬಡವರು, ರೈತರ ಹಿತಕಾಯು ವ ನೆಪವೊಡ್ಡಿ ಪ್ರಚಾರ ಪಡೆಯುತ್ತಾರೆ.

ಆದರೆ ಅವರು ಅಧಿಕಾರಕ್ಕೆ ಬಂದ ಬಳಿಕ 5 ವರ್ಷ ಬಡವರು, ರೈತರನ್ನು ಮರೆಯುತ್ತಾರೆ. ಸರ್ಕಾರ ಯಾವಾಗಲೂ ಬಡವರ ಮೇಲೆ ಬರೆ ಎಳೆಯುತ್ತಾ ನಮ್ಮನ್ನು ಗಿರವಿ ಆಭರಣ ಮಾಡಿಕೊಂಡಿದ್ದಾರೆ ಎಂದು ದೂರಿದರು. 

Advertisement

ನೀರಿನ ಭಾಗ್ಯ ನೀಡಿ: ಬಿಟ್ಟಿ ಅಕ್ಕಿ, ಬಿಟ್ಟಿ ಊಟ, ಬಿಟ್ಟಿ ಹಾಲು, ನೀಡುವ ಸರ್ಕಾರ ಜನರಿಗೆ ಕುಡಿಯುವ ನೀರನ್ನು ಬಿಟ್ಟಿಯಾಗಿ
ನೀಡಬಹುದಲ್ಲವೇ. ಹಾಗಯೇ ರೈತರ ಸಾಲಮನ್ನಾ ಮಾಡುವ ಸರ್ಕಾರ ನೀರಿನ ಹಳೆ ಬಾಕಿ ಹಣವನ್ನು ಮನ್ನಾ ಮಾಡಬೇಕು.

ಸರ್ಕಾರ ಯಾವುದೇ ಭಾಗ್ಯ ನೀಡಲಿ, ಯಾವುದೇ ಸಾಲ ಮನ್ನಾ ಮಾಡಲಿ ಎಲ್ಲಾ ಹಣ ನಮ್ಮ ತೆರಿಗೆಯ ಹಣವೇ ಹೊರತು, ಯಾವ ಸರ್ಕಾರದ ಹಣವೂ ಅಲ್ಲ ಎಂದು ನಾರಾಯಣ ಆಕ್ರೋಶ ವ್ಯಕ್ತಪಡಿಸಿದರು.

10 ನಿಮಿಷ ನೀರಿಗೆ 220 ರೂ. ಬಿಲ್‌: ನಮ್ಮ ಬಡಾವಣೆಗಳಲ್ಲಿ ಕೇವಲ 10 ನಿಮಿಷ ಮಾತ್ರ ಕಾವೇರಿ ಕುಡಿವ ನೀರನ್ನು
ಸರಬರಾಜು ಮಾಡುತ್ತಾರೆ. ಹಿಂದೆಯೇ ಬೋರ್‌ ನೀರು ಸರಬರಾಜು ಮಾಡುತ್ತಾರೆ. ತಿಂಗಳಿಗೆ 220 ರೂ. ಶುಲ್ಕ ವಿಧಿಸುತ್ತಾರೆ. ಹಿಂದೆ ಪೈಪ್‌ ಜೋಡಣೆ ಶುಲ್ಕವಾಗಿ 6 ಸಾವಿರ ಶುಲ್ಕ ನೀಡಿದ್ದರು. ಆದರ ಬಾಕಿ ಉಳಿದಿದ್ದು, ಇದೀಗ ಆ ಹಣಕ್ಕೆ ಬಡ್ಡಿ ಸೇರಿ 20 ಸಾವಿರ ಬಿಲ್‌ ನೀಡಿದ್ದಾರೆ. ದಿನನಿತ್ಯದ ಆದಾಯವನ್ನು ನಂಬಿ ಬದುಕುತ್ತಿರುವ ನಾವು ತಿಂಗಳಿಗೆ 20 ಸಾವಿರ ಕಟ್ಟುವುದು ಸಾಧ್ಯವೇ ಎಂದು ಪ್ರಶ್ನಿಸಿದ ಗೌರಮ್ಮ, ನಾವು ನೀಡುವ ತಿಂಗಳ ಶುಲ್ಕವನ್ನು ಬಡ್ಡಿ ಹಣಕ್ಕೆ ವಜಾ ಮಾಡುತ್ತಿದ್ದಾರೆ. ನಮ್ಮ ನೀರಿಗೆ ನಾವೇ ಬಡ್ಡಿ ಕಟ್ಟಬೇಕೆ ಎಂದು ಖಂಡಿಸಿದರು.

ಇದಕ್ಕೂ ಮುನ್ನ ಪಟ್ಟಣದ ಮಂಗಳವಾರಪೇಟೆಯಿಂದ ಮೆರವಣಿಗೆ ಹೊರಟ ಸಾರ್ವಜನಿಕರು ಬಿ.ಎಂ.ರಸ್ತೆ ಮೂಲಕ ಸಾಗಿ ಪಟ್ಟಣದ ಎಂ.ಜಿ ರಸ್ತೆ ಮೂಲಕ ನಗರಸಭೆ ಆವರಣದಲ್ಲಿ ಸಮಾವೇಶಕೊಂಡರು. ನಗರಸಭೆ ಮಾಜಿ ಅಧ್ಯಕ್ಷ ಕೃಷ್ಣಪ್ಪ, ಸದಸ್ಯರಾದ ಮುದ್ದುಕೃಷ್ಣ, ಎಸ್‌.ಉಮಾಶಂಕರ್‌, ಶಶಿಕುಮಾರ್‌, ಶ್ವೇತಾ, ಅರುಣ್‌ಕುಮಾರ್‌, ಎಂ.ವಿ.ಸಂತೋಷ್‌, ಎಂಟಿಆರ್‌ ತಿಮ್ಮರಾಜು, ಎಂ.ಪಿ.ರವಿಕುಮಾರ್‌, ಡಿ.ಕೃಷ್ಣ, ದೊಡ್ಡಯ್ಯ, ಕೆ.ವೇಣುಗೋಪಾಲ, ರವಿ, ಕೆಂಪಯ್ಯ, ಸಿ.ಚಂದ್ರಪ್ಪ, ಬೋರಲಿಂಗೇಗೌಡ, ಬಾಬು, ಪುಟ್ಟರಾಮಣ್ಣ, ಮುತ್ತಯ್ಯ, ಸಿ.ರೋಹಿತ್‌ಕುಮಾರ್‌ ಸೇರಿದಂತೆ ನೂರಾರು ಮಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next