Advertisement

ಜನಸಂಖ್ಯೆ ಹೆಚ್ಚಳದಿಂದ ನಿಸರ್ಗಕ್ಕೂ ಧಕ್ಕೆ: ದೇಶಪಾಂಡೆ

12:07 PM Jul 25, 2017 | |

ಧಾರವಾಡ: ದೇಶ ಬೆಳೆದಂತೆಯೆಲ್ಲಾ ಉತ್ತಮ ಪರಿಸರ, ಕಾಡು, ಗುಡ್ಡ-ಬೆಟ್ಟಗಳು ಕರಗಿ ಹೋಗುತ್ತಿದ್ದು, ಮಳೆಯೂ ಮಾಯವಾಗುತ್ತಿದೆ ಎಂದು ನಿವೃತ್ತ ಹಿರಿಯ ಗ್ರಂಥಪಾಲಕ ಡಾ| ಕೆ.ಎಸ್‌. ದೇಶಪಾಂಡೆ ಹೇಳಿದರು. ಎಫ್‌ಪಿಎಐನ 68ನೇ ಸಂಸ್ಥಾಪನಾ ದಿನಾಚರಣೆ ಹಿನ್ನೆಲೆಯಲ್ಲಿ ದೇಶಪಾಂಡೆ ಅವರ ನಿವಾಸದಲ್ಲಿ ಫ್ಯಾಮಿಲಿ ಪ್ಲಾನಿಂಗ್‌ ಅಸೋಶಿಯೇಶನ್‌ ಆಫ್‌ ಇಂಡಿಯಾ ಧಾರವಾಡ ಶಾಖೆ ವತಿಯಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

Advertisement

ಈ ಸಂಕಷ್ಟದಲ್ಲಿ ಜನರ ಜೀವನಮಟ್ಟ ಸುಧಾರಣೆ ಯಾಗಬೇಕಾದರೆ ನಮ್ಮ ಸುತ್ತಲು ಉತ್ತಮ ಪರಿಸರ ನಿರ್ಮಾಣ ಮಾಡುವುದು ಇಂದಿನ ತುರ್ತು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಗಂಭೀರ ಚಿಂತನೆ ನಡೆಸಬೇಕಿದೆ ಎಂದರು. ಫ್ಯಾಮಿಲಿ ಪ್ಲಾನಿಂಗ್‌ ಅಸೋಶಿಯೇಶನ್‌ ಆಫ್‌ ಇಂಡಿಯಾ ಜನಸಂಖ್ಯಾ ನಿಯಂತ್ರಣಕ್ಕೆ ಮುಂದಾದ ಸಂದರ್ಭದಲ್ಲಿ ಜನ ನಮ್ಮನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದರು. 

ಇದನ್ನು ಪಾಪದ ಕೆಲಸ ಎಂದು ಹೀಯಾಳಿಸುತ್ತಿದ್ದರು. ಆಗ ಕೇವಲ 30 ಕೋಟಿ ಇದ್ದ ಜನಸಂಖ್ಯೆ ಇಂದು ನೂರು ಕೋಟಿಯ ಗಡಿ ದಾಟಿದೆ. ಆದರೆ ಭೌತಿಕ ಪ್ರಗತಿ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. ನಾಡು ಬೆಳೆದಂತೆ ನಮ್ಮ ಪರಿಸರ ಹಾಳಾಗಿದೆ. ಹೀಗಾಗಿ ಗುಣಮಟ್ಟ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಉತ್ತಮ ನೀರು, ಗಾಳಿ, ಪರಿಸರವಿಲ್ಲದಿದ್ದರೆ ಬದುಕು ಆನಂದಿಸಲು ಸಾಧ್ಯವಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. 

ಪ್ರೊ| ಉಷಾ ಮೂರ್ತಿ ಮಾತನಾಡಿ, ಕೆ.ಎಸ್‌. ದೇಶಪಾಂಡೆಯವರ ಮಾರ್ಗದರ್ಶನದಲ್ಲಿ ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡಲಾಗಿದೆ. ಆನಂತರ ಎರಡು ಬಾರಿ ಎಫ್‌ಪಿಎಐ ಅಧ್ಯಕ್ಷಳಾಗಿ ಸಾಕಷ್ಟು ಹೊಸ ಹೊಸ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜನಮನ ಸೆಳೆಯಲಾಯಿತು. ಇದೀಗ ಎಫ್‌ಪಿಎಐ ಧಾರವಾಡ ಶಾಖೆ ಹಲವು ಸೇವೆಗಳನ್ನು ನೀಡುತ್ತಿದೆ ಎಂದರು. ಎಫ್‌ಪಿಎಐ ಶಾಖೆ ವ್ಯವಸ್ಥಾಪಕಿ ಸುಜಾತ ಆನಿಶೆಟ್ಟರ್‌ ಮಾತನಾಡಿದರು. 

ಇದಕ್ಕೂ ಮುನ್ನ ಎಫ್‌ಪಿಎಐ ಸಂಸ್ಥಾಪಕ ಅಧ್ಯಕ್ಷ ಕೆ.ಎಸ್‌. ದೇಶಪಾಂಡೆ, ಪೋಷಕ ಡಾ| ಎಂ.ಎನ್‌. ತಾವರಗೇರಿ, ಸಂಸ್ಥೆಯ ಸ್ವಯಂ ಸೇವಕಿ ಉಷಾ ಮೂರ್ತಿ ಹಾಗೂ 37 ವರ್ಷಗಳ ಕಾಲ ಆಯಾ  ಆಗಿ ಕೆಲಸ ನಿರ್ವಹಿಸಿದ ಸುನಂದಾ ಕುಲಕರ್ಣಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ರಮಾಕಾಂತ ಜೋಶಿ, ಪಾರ್ವತಿ ಹಾಲಬಾವಿ, ಇಂದಿರಾ ಪ್ರಸಾದ, ಕುಸುಮ ದೇಶಪಾಂಡೆ, ಶೈಲಾ ಛಬ್ಬಿ, ಸುಕನ್ಯ ಹಿರೇಮಠ, ಭೀಮಸೇನ ಸಾರಥಿ, ಪಿ.ಪಿ. ಗಾಯಕವಾಡ ಇದ್ದರು.  

Advertisement
Advertisement

Udayavani is now on Telegram. Click here to join our channel and stay updated with the latest news.

Next